ಬಿಬಿಎಂಪಿ ರದ್ದತಿಯ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದ್ದು, ಆಗಸ್ಟ್ 3 ರಿಂದ ವಾರ್ಡ್‌ಗಳ ಮರುರಚನೆ ಆರಂಭವಾಗಲಿದೆ. ಸೆಪ್ಟೆಂಬರ್ 1 ರೊಳಗೆ ತಾತ್ಕಾಲಿಕ ವಾರ್ಡ್‌ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿ ಸ್ವೀಕಾರ ಮುಂತಾದ ಕೆಲಸಗಳು ಪೂರ್ಣಗೊಳ್ಳಲಿವೆ. ಬಳಿಕ ಮೀಸಲಾತಿ ಪ್ರಕ್ರಿಯೆ ಆರಂಭ.

ಬೆಂಗಳೂರು (ಜು.29): ರಾಜ್ಯ ಸರ್ಕಾರ ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಅನೂರ್ಜಿತಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ರಚನೆ ಮಾಡಿದೆ. ಈ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅನುಗುಣವಾಗಿ ವಾರ್ಡ್‌ಗಳ ಮರುವಿಂಗಡಣಾ ಆಯೋಗವು ಆಗಸ್ಟ್ 3 ರಿಂದ ವಾರ್ಡ್‌ಗಳ ಮರುರಚನೆ, ಗಡಿ ಗುರುತಿಸುವಿಕೆ ಕೆಲಸವನ್ನು ಆರಂಭಿಸಲಿದೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Add Asianetnews Kannada as a Preferred SourcegooglePreferred

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಅವರು ವಿಧಾನಸೌಧದಲ್ಲಿ ಮಂಗಳವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಆಯೋಗವು ತಾತ್ಕಾಲಿಕ ವಾರ್ಡ್ ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿಗಳ ಸ್ವೀಕಾರ ಮತ್ತಿತರ ಕೆಲಸಗಳ ಅಂತಿಮ ನಿರ್ಣಯಗಳನ್ನು ಒಂದು ತಿಂಗಳ ಕಾಲ ಅಂದರೆ ಸೆಪ್ಟೆಂಬರ್‌ 1 ರವರೆಗೆ ನಿರ್ವಹಿಸಲಿದೆ. ಆನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ತದನಂತರ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು' ಎಂದು ಹೇಳಿದರು.

ಈ ಎಲ್ಲಾ ಪ್ರಕ್ರಿಯೆ ಮುಗಿದ ತಕ್ಷಣ ನಾವು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು, ವೇಳಾಪಟ್ಟಿ ನಿಗದಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ' ಎಂದು ತಿಳಿಸಿದರು.

ಅಕ್ಟೋಬರ್ 22 ರಿಂದ ಬೃಹತ್ ಇ ಖಾತಾ ಜಾಗೃತಿ ಅಭಿಯಾನ

'ಬೆಂಗಳೂರಲ್ಲಿ 24 ಲಕ್ಷ 'ಎ' ಮತ್ತು 'ಬಿ' ಖಾತೆಗಳಿವೆ. ಈಗಾಗಲೇ 6.5 ಲಕ್ಷ‌ ಇ- ಖಾತೆಗಳನ್ನು ಜನರು ತೆಗೆದುಕೊಂಡಿದ್ದಾರೆ. ಜನರಿಗೆ ಆನ್ ಲೈನ್ ನಲ್ಲಿ ಆಸ್ತಿ ವಿವರಗಳು ನಿಖರವಾಗಿ ದೊರೆಯಬೇಕು. ಮುಂದಿನ‌ ದಿನಗಳಲ್ಲಿ ತೊಂದರೆಯಾಗಬಾರದು ಎಂಬುದು ನಮ್ಮ ಆಲೋಚನೆ. ಈ ಕಾರಣಕ್ಕೆ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಬೃಹತ್ ಜಾಗೃತಿ ಅಭಿಯಾನದ ಆಲೋಚನೆ ಮಾಡಲಾಗಿದೆ. ಈ ಅಭಿಯಾನ ಯಶಸ್ವಿಗೊಳಿಸಲು ಶಿಕ್ಷಕರು, ಬೆಸ್ಕಾಂ ಬಿಲ್‌ ಕಲೆಕ್ಟರ್ ಗಳು, ಪಾಲಿಕೆಯ ನೌಕರರ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಲಾಗುವುದು. ಬೆಂಗಳೂರು ನಗರದ ಸಾರ್ವಜನಿಕರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಅಭಿಯಾನದ ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ ಇವರಿಗೆ ಜವಾಬ್ದಾರಿ ನೀಡುವುದಿಲ್ಲ ಎಂದರು.

ಬಿ ಖಾತಾ ಇದ್ದವರಿಗೆ ಎ ಖಾತಾ ಪಡೆಯಲು ಮಾನದಂತ ಆ.15ರಂದು ಬಿಡುಗಡೆ:

ಇನ್ನು ಆಗಸ್ಟ್ 15 ರಿಂದ 'ಬಿ' ಖಾತೆಯಿಂದ 'ಎ' ಖಾತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ನಗರದಲ್ಲಿ ಲಕ್ಷಾಂತರ ಬಿ ಖಾತಾಗಳಿದ್ದು, ಅವುಗಳ ಪೈಕಿ ಯಾರು ಎ ಖಾತಾ ಪಡೆಯಲು ಅರ್ಹರಿದ್ದಾರೆ ಎಂಬುದನ್ನು ಮಾನದಂಡಗಳಲ್ಲಿ ಸೂಚಿಸಲಾಗುತ್ತದೆ. ನಂತರ ಯಾರಿಗೆ ಅರ್ಜಿ ಹಾಕಲು ಅರ್ಹತೆಯಿದೆ, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಆಗಸ್ಟ್ 15 ರೊಳಗೆ ಹೆಬ್ಬಾಳ ಜಂಕ್ಷನ್ ಉದ್ಘಾಟನೆ

ಹೆಬ್ಬಾಳ ಮೇಲ್ಸೆತುವೆ ಜಂಕ್ಷನ್, ಶಿವಾನಂದ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಹಾಗೂ ಗಾಂಧಿ ಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಆಗಸ್ಟ್‌ 15ರ ಒಳಗಾಗಿ ಉದ್ಘಾಟನೆ ಮಾಡಬೇಕು ಎಂಬುದು ನಮ್ಮ ಆಲೋಚನೆ. ಕೆ.ಆರ್.ಪುರಂ ಕಡೆಯಿಂದ ಬರುವ ಹೆಬ್ಬಾಳ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂಬುದು ನಮ್ಮ ಆಲೋಚನೆಯಾಗಿದೆ ಎಂದರು.

3,700 ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ

ವಿವಿಧ ಯೋಜನೆಗಳ ಅಡಿ ಫಲಾನುಭವಿಗಳಾಗಿ ಆಯ್ಕೆಯಾದ 10-15 ಸಾವಿರ ಜನರಿಗೆ ಸೌಲಭ್ಯಗಳ ಹಂಚಿಕೆ ಮಾಡಲಾಗುವುದು. 3,700 ಬೀದಿಬದಿ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಸೌಲಭ್ಯ ನೀಡಲಾಗುತ್ತಿದೆ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.