Grama Vastavya: ಗ್ರಾಮ ವಾಸ್ತವ್ಯ ಕ್ರಾಂತಿಕಾರಿ ಹೆಜ್ಜೆ: ಸಿಎಂ ಬೊಮ್ಮಾಯಿ
ಕಂದಾಯ ಸಚಿವ ಆರ್. ಅಶೋಕ ಅವರು ನಡೆಸುತ್ತಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕಂದಾಯ ಇಲಾಖೆಯ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದರಿಂದ ಬಡಜನರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಾಡ (ಶಿಗ್ಗಾಂವಿ) (ಡಿ.18): ಕಂದಾಯ ಸಚಿವ ಆರ್. ಅಶೋಕ ಅವರು ನಡೆಸುತ್ತಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕಂದಾಯ ಇಲಾಖೆಯ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದರಿಂದ ಬಡಜನರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಆರ್.ಅಶೋಕ ಅವರು ಹಲವು ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ನನ್ನ ಕ್ಷೇತ್ರದಲ್ಲಿ ಯಾವಾಗ ಮಾಡುತ್ತೀರಿ ಎಂದು ಕೇಳಿದೆ.
ನನ್ನ ಕ್ಷೇತ್ರದ ಜನರದ್ದೂ ಸಾಕಷ್ಟು ಬೇಡಿಕೆಗಳಿವೆ. ನಮ್ಮ ಜನರು ಪ್ರೀತಿ ಕೊಡುತ್ತಾರೆ. ಇಲ್ಲಿಯವರು ಹೃದಯ ಶ್ರೀಮಂತಿಕೆ ಇರುವ ಜನ. ಹೀಗಾಗಿ, ಈ ಕ್ಷೇತ್ರದ ಫಲಾನುಭವಿಗಳಿಗೆ ಸೌಲಭ್ಯ ಕೊಡಬೇಕು ಎಂದು ಕೇಳಿದಾಗ ಅವರು ಸಂತೋಷದಿಂದ ಇಲ್ಲಿಗೆ ಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಅಶೋಕ ಅವರು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಆರ್.ಅಶೋಕ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿಗೆ ಬಿಎಸ್‌ವೈ ನಾಯಕತ್ವದ ಶ್ರೀರಕ್ಷೆಯಿದೆ: ಸಿಎಂ ಬೊಮ್ಮಾಯಿ
ಜನರ ಅಭಿವೃದ್ಧಿಗೆ ಕಟಿಬದ್ಧ: ನಮ್ಮ ಸರ್ಕಾರ ಜನರ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ವಿವಿಧ ಯೋಜನೆಗಳಡಿ ರಾಜ್ಯದ 30 ಸಾವಿರ ಜನರಿಗೆ ವಿವಿಧ ಸೌಲಭ್ಯ ಕಲ್ಪಿಸಿ ಕೊಡುತ್ತಿದ್ದೇವೆ. ಬಡತನ ನಿರ್ಮೂಲನೆ ಯೋಜನೆಯಡಿ 6 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ತಲಾ 1 ಲಕ್ಷ ರು. ಸಹಾಯಧನ ಕೊಡುತ್ತಿದ್ದೇವೆ. ರಾಜ್ಯದಲ್ಲಿ ಬಡಜನರಿಗಾಗಿ 6 ಸಾವಿರ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುತ್ತಿದ್ದೇವೆ. ರೈತ ವಿದ್ಯಾರ್ಥಿ ನಿಧಿ, ಕಿಸಾನ್ ಸಮ್ಮಾನ ಯೋಜನೆ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ ಸೇರಿದಂತೆ 30 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಕೊಡುತ್ತಿರುವುದು ದಾಖಲೆಯಾಗಿದೆ.
ಈ ಯೋಜನೆಗಳು ಪ್ರತಿ ತಾಲೂಕಿನಲ್ಲಿಯೂ ಯಶಸ್ವಿಯಾಗಿ ಜಾರಿಯಾಗಬೇಕು. ಇದಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು. ನೀರಾವರಿಗೆ ಅತಿ ಹೆಚ್ಚು ಅನುದಾನ ನೀಡಿದ್ದೇವೆ. ಹೊಸ ಕೈಗಾರಿಕಾ ಪ್ರದೇಶಗಳನ್ನು ಮಾಡಿದ್ದೇವೆ. ರೈಲ್ವೆ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಪ್ರೋತ್ಸಾಹ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇವೆ ಎಂದರು. ಸ್ತ್ರೀಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರು. ನೀಡುತ್ತಿದ್ದೇವೆ. ಈ ಹಣ ಸ್ವಯಂ ಉದ್ಯೋಗ ಕೈಗೊಳ್ಳಲು ಅವರಿಗೆ ನೆರವಾಗುತ್ತದೆ.
ಅಲ್ಲದೆ, ವಿವಿಧ ಯೋಜನೆಗಳಡಿ 5 ಲಕ್ಷ ಮಹಿಳೆಯರು, ಯುವಕರಿಗೆ ಉದ್ಯೋಗಕ್ಕೆ ಧನಸಹಾಯ ಮಾಡುತ್ತಿದ್ದೇವೆ. ವಿವಿಧ ಕಸುಬು ಮಾಡುವ, ದುಡಿಯುವ ಕೈಗಳಿಗೆ ಶಕ್ತಿ ನೀಡುತ್ತಿದ್ದೇವೆ. ನಾಡು, ದೇಶ ಕಟ್ಟಲು ಕೆಳ ಹಂತದ ದುಡಿಮೆಗಾರರು ಕೆಲಸ ಮಾಡುತ್ತಿದ್ದಾರೆ. ದುಡ್ಡೇ ದೊಡ್ಡಪ್ಪ ಎಂಬ ಕಾಲ ಹೋಗಿದೆ. ದುಡಿಮೆಯೇ ದೊಡ್ಡಪ್ಪ ಎಂಬ ಕಾಲವಿದು. ದುಡಿಯುವ ವರ್ಗಕ್ಕೆ ಶಕ್ತಿ ತುಂಬಬೇಕು. ಇದು ನಮ್ಮ ಸರ್ಕಾರದ ಕಲ್ಪನೆ ಎಂದರು. ಕಂದಾಯ ಸಚಿವ ಆರ್.ಅಶೋಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ ಇತರರು ಇದ್ದರು.
ಏಪ್ರಿಲ್ ಒಳಗೆ ಪ್ರತಿ ಮನೆಗೂ ನಲ್ಲಿ ನೀರು: ಮುಂದಿನ ಮಾರ್ಚ್-ಏಪ್ರಿಲ್ ಒಳಗೆ ಕ್ಷೇತ್ರದ ಪ್ರತಿ ಗ್ರಾಮಕ್ಕೆ, ಮನೆಗೆ ನಲ್ಲಿ ನೀರು ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಮಳೆಗೆ ಬಿದ್ದ ಮನೆಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಇನ್ನು 15 ದಿನಗಳಲ್ಲಿ ಇನ್ನುಳಿದ ಎಲ್ಲ ಅರ್ಹರಿಗೆ ಮನೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
8000 ಶಾಲಾ ಕೊಠಡಿ ನಿರ್ಮಾಣ: ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ 8 ಸಾವಿರ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಹಿಂದಿನ ಯಾವ ಸರ್ಕಾರವೂ ಇದನ್ನು ಮಾಡಿಲ್ಲ. ಶಿಕ್ಷಣ ಮುಖ್ಯ ಎಂಬ ಅರಿವಿನಲ್ಲಿ ಈ ಯೋಜನೆ ಮಾಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಮ್ಮ ಕ್ಲಿನಿಕ್‌ಗೆ ಸಿಎಂ ಬೊಮ್ಮಾಯಿ ಚಾಲನೆ: ಏಕಕಾಲಕ್ಕೆ 114 ಕ್ಲಿನಿಕ್ ಆರಂಭ
ಎಲ್ಲೇ ಹೋದರೂ ನನ್ನ ಹೃದಯ ನಿಮಗಾಗಿ ಮಿಡಿಯುತ್ತೆ: ಸ್ವಕ್ಷೇತ್ರದ ಜನರ ಆಶೀರ್ವಾದದಿಂದ ರಾಜ್ಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬದಲಾವಣೆ ತರಲು ಅವಕಾಶ ಸಿಕ್ಕಿದೆ. ನಾವು ಕೈಗೊಂಡಿರುವ ನಿರ್ಣಯಗಳನ್ನು ಹಿಂದಿನ ಯಾವ ಸರ್ಕಾರವೂ ಕೈಗೊಂಡಿಲ್ಲ. ಈ ಕೆಲಸವನ್ನು ನಿಮ್ಮ ಬೊಮ್ಮಾಯಿ ಮಾಡಿದ್ದಾನೆ. ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲು ಆಗುತ್ತಿಲ್ಲ. ಆದರೆ, ಎಲ್ಲಿಗೇ ಹೋದರೂ ನನ್ನ ಹೃದಯ ನಿಮಗಾಗಿ ಮಿಡಿಯುತ್ತಿರುತ್ತೆ ಎಂದು ಕ್ಷೇತ್ರದ ಜನರ ಬಗ್ಗೆ ಬೊಮ್ಮಾಯಿ ಅಭಿಮಾನದ ಮಾತುಗಳನ್ನು ಆಡಿದರು.