Gram Panchayat Elections 2026 ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. 2026-31ನೇ ಸಾಲಿನ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ

ಬೆಂಗಳೂರು (ಜ.29): ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ. 2026-31ನೇ ಸಾಲಿನ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಅಧಿಕೃತ ಸೂಚನೆ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಚುನಾವಣಾ ಸಿದ್ಧತೆಗಳಿಗೆ ಚಾಲನೆ ನೀಡುವಂತೆ ನಿರ್ದೇಶಿಸಿದ್ದಾರೆ.

ಅಧಿಕಾರಾವಧಿ ಅಂತ್ಯದತ್ತ ಪಂಚಾಯತ್‌ಗಳು

ರಾಜ್ಯದಲ್ಲಿ ಪ್ರಸ್ತುತ ಇರುವ (2020-25ನೇ ಅವಧಿ) ಬಹುತೇಕ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿಯು 2026ರ ಜನವರಿಯಿಂದ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ನಿಯಮದ ಪ್ರಕಾರ ಅಧಿಕಾರಾವಧಿ ಮುಗಿಯುವ ಮುನ್ನವೇ ಚುನಾವಣೆ ಪ್ರಕ್ರಿಯೆ ನಡೆಯಬೇಕಿದ್ದು, 2025ರ ಡಿಸೆಂಬರ್‌ನಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಈಗ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಮುಂದಾಗಿದೆ.

ಆರು ತಿಂಗಳ ಮುಂಚಿತವಾಗಿಯೇ ತಯಾರಿ

ಯಾವುದೇ ಸಾರ್ವತ್ರಿಕ ಚುನಾವಣೆ ನಡೆಸುವ ಆರು ತಿಂಗಳು ಮುಂಚಿತವಾಗಿ ಮತದಾರರ ಪಟ್ಟಿ ಮುದ್ರಣ ಸೇರಿದಂತೆ ಇತರೆ ತಾಂತ್ರಿಕ ಸಿದ್ಧತೆಗಳನ್ನು ಆಯೋಗ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ, ನಿಗಧಿತ ಕಾಲಮಿತಿಯಲ್ಲಿ ಮೀಸಲಾತಿ ಅಧಿಸೂಚನೆಯನ್ನು ಹೊರಡಿಸಿ, ಅದರ ಪ್ರತಿಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಸೂಚಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅಡಿಯಲ್ಲಿ ಈ ಎಲ್ಲಾ ಸಿದ್ಧತೆಗಳು ನಡೆಯಲಿವೆ.

ಜಿಲ್ಲಾಧಿಕಾರಿಗಳಿಗೆ 'ಡೆಡ್‌ಲೈನ್' ನೀಡಿದ ಸರ್ಕಾರ

ಚುನಾವಣಾ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ, ವಾರ್ಡ್‌ಗಳ ಮೀಸಲಾತಿ ಹಂಚಿಕೆ ಹಾಗೂ ಮತಗಟ್ಟೆಗಳ ಸಿದ್ಧತೆ ಬಗ್ಗೆ ಜಿಲ್ಲಾಡಳಿತಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ.

ಮುಖ್ಯಾಂಶಗಳು:

  • ಚುನಾವಣಾ ವರ್ಷ: 2026-31ನೇ ಸಾಲಿನ ಪಂಚಾಯತ್ ಸಾರ್ವತ್ರಿಕ ಚುನಾವಣೆ.
  •  ಅವಧಿ ಮುಕ್ತಾಯ: 2026ರ ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಪ್ರಸ್ತುತ ಪಂಚಾಯತ್‌ಗಳ ಆಡಳಿತ ಅಂತ್ಯ.
  •  ಆದೇಶ: ಮೀಸಲಾತಿ ಅಧಿಸೂಚನೆ ಮತ್ತು ಮತದಾರರ ಪಟ್ಟಿ ಸಿದ್ಧಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ.
  •  ವರದಿ ಸಲ್ಲಿಕೆ: ಕೈಗೊಂಡ ಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವುದು ಕಡ್ಡಾಯ.