Asianet Suvarna News Asianet Suvarna News

ಪದವೀಧರ ಶಿಕ್ಷಕರ ಬಡ್ತಿ ಪ್ರಮಾಣ ಶೇ.40ಕ್ಕೆ ಏರಿಕೆ

*  20000 ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಲಾಭ
*  ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ಬಡ್ತಿ ಪಡೆಯುವ ಭಾಗ್ಯ
*  ಕಾಯ್ದೆಗೆ ತಿದ್ದುಪಡಿ
 

Graduate Teacher Promotion Increases to 40 Percent in Karnataka grg
Author
Bengaluru, First Published Apr 28, 2022, 6:43 AM IST

ಲಿಂಗರಾಜು ಕೋರಾ

ಬೆಂಗಳೂರು(ಏ.28):  ಕಿರಿಯ ಪ್ರಾಥಮಿಕ ಶಾಲಾ (1ರಿಂದ 5ನೇ ತರಗತಿ) ಪದವೀಧರ ಶಿಕ್ಷಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಯಿಲ್ಲದೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ (6ರಿಂದ 8ನೇ ತರಗತಿ) ಬಡ್ತಿ ನೀಡಲು ನಿರ್ಣಯಿಸಿದ್ದ ಸರ್ಕಾರವು, ಇದೀಗ ಆ ಶಿಕ್ಷಕರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದೆ. ಈ ಶಿಕ್ಷಕರಿಗೆ ಬಡ್ತಿ ನೀಡಿ(Promotion) ಭರ್ತಿ ಮಾಡಲು ಇದ್ದ ಶೇ.33ರಷ್ಟು ಹುದ್ದೆಗಳ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಲು ಅನುಮೋದಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ(Government Schools) ಒಟ್ಟು 1,88,638 ಮಂಜೂರಾದ ಶಿಕ್ಷಕ ಹುದ್ದೆಗಳ ಪೈಕಿ 1.08 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗಳಾಗಿವೆ. ಇದರಲ್ಲಿ 52,630 ಹುದ್ದೆಗಳು ಪದವೀಧರ ಶಿಕ್ಷಕರಿಗೆ(Teachers) ಮೀಸಲಾಗಿವೆ. ಈ ಪೈಕಿ ಶೇ.33ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ, ಉಳಿದ ಶೇ.67ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇದುವರೆಗೆ ಅವಕಾಶವಿತ್ತು. ಇದೀಗ ಸರ್ಕಾರ ಬಡ್ತಿ ಮೂಲಕ ಭರ್ತಿ ಮಾಡುವ ಹುದ್ದೆಗಳ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿರುವುದರಿಂದ 52 ಸಾವಿರಕ್ಕೂ ಹೆಚ್ಚು ಪದವೀಧರ ಶಿಕ್ಷಕರ ಹುದ್ದೆಗಳ ಪೈಕಿ 20 ಸಾವಿರಕ್ಕೂ ಹೆಚ್ಚು ಹುದ್ದೆಗಳು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ದೊರೆಯಲಿವೆ.

ಉತ್ತರ ಪ್ರದೇಶದಲ್ಲಿ ಕೇವಲ 1 ರೂ.ನಲ್ಲಿ SC ST ಹೆಣ್ಮಕ್ಕಳಿಗೆ ತಾಂತ್ರಿಕ ಶಿಕ್ಷಣ?

ಉಳಿದ ಶೇ.60ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಗದಿಪಡಿಸಲಾಗಿದೆ. ಈ ಮೊದಲು ನೇರ ನೇಮಕಾತಿ ಹುದ್ದೆಗಳ ಪ್ರಮಾಣ ಶೇ.67ರಷ್ಟಿತ್ತು. ಈ ಶೇ.7ರಷ್ಟುಇಳಿಕೆಯಾಗಿದೆ. ಇದರಿಂದ 32 ಸಾವಿರ ಹುದ್ದೆಗಳನ್ನು ನೇರ ನೇಮಕಾತಿಯಡಿ ಪರಿಗಣಿಸಲಾಗುತ್ತದೆ. ಪ್ರಸ್ತತ ಸರ್ಕಾರ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಸಿದೆ. ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ಬಡ್ತಿ ನೀಡಬೇಕು ಮತ್ತು ಬಡ್ತಿ ಮೂಲಕ ಭರ್ತಿಗೆ ನಿಗದಿಪಡಿರುವ ಸ್ಥಾನಗಳ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕೆಂಬುದು ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿತ್ತು.

ಸರ್ಕಾರಕ್ಕೆ ಮನವಿ:

ಈ ಸಂಬಂಧ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು ಶಿಕ್ಷಣ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿ ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸಲು ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರು, ಇತ್ತೀಚೆಗಷ್ಟೇ ಪರೀಕ್ಷೆ ಇಲ್ಲದೆ ಬಡ್ತಿ ನೀಡಲು ಇಲಾಖೆ ನಿರ್ಣಯ ಕೈಗೊಂಡಿರುವುದಾಗಿ ಘೋಷಿಸಿ ಇನ್ಮುಂದೆ ಸೇವಾ ಜೇಷ್ಠತೆ ಸೇರಿದಂತೆ ಇತರೆ ಮಾನದಂಡಗಳನ್ನು ಪರಿಗಣಿಸಿ ಬಡ್ತಿ ನೀಡಲು ನಿರ್ಧರಿಸಲಾಗಿದೆ ಸಿಹಿ ಸುದ್ದಿ ನೀಡಿದ್ದರು. ಅದೇ ರೀತಿ ಎಷ್ಟು ಪ್ರಮಾಣದ ಹುದ್ದೆಗಳನ್ನು ಬಡ್ತಿಯಡಿ ಪರಿಗಣಿಸಬೇಕೆಂದು ಸದ್ಯದಲ್ಲೇ ನಿರ್ಧರಿಸುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರದ ಸಂಬಂಧ ಪಟ್ಟ ವಿವಿಧ ಇಲಾಖೆಗಳ ಒಪ್ಪಿಗೂ ಟಿಪ್ಪಣಿ ಕಳುಹಿಸಿದ್ದರು. ಇದರ ಪರಿಣಾಮ ಪದವೀಧರ ಶಿಕ್ಷಕರ ಬಡ್ತಿಗೆ ಇದುವರೆಗೆ ಇದ್ದ ಶೇ.33 ಸ್ಥಾನಗಳ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಅನುಮೋದನೆ ದೊರೆತಿದೆ.

ಬದಲಾದ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು

ಕಾಯ್ದೆಗೆ ತಿದ್ದುಪಡಿ:

ಬಡ್ತಿ ಹುದ್ದೆಗಳ ಪ್ರಮಾಣ ಹೆಚ್ಚಳಕ್ಕೆ ಆಡಳಿತ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ(Education Department) ನೇಮಕಾತಿ ನಿಯಮಗಳಿಗೆ ತಿದ್ದುಪಡಿಯಾಗಬೇಕಿದೆ. ಬಳಿಕ ಇದು ಜಾರಿಯಾಗಲಿದೆ. ಆದರೆ, ಅಧಿಕಾರಿಗಳು ಹೇಳುವ ಪ್ರಕಾರ ಸುಮಾರು 75 ಸಾವಿರ ಪದವೀಧರ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರೆಲ್ಲರಿಗೂ ಒಮ್ಮೆಲೇ ಬಡ್ತಿ ಸಿಗುವುದಿಲ್ಲ. ಪ್ರತಿ ವರ್ಷ ಸೇವಾ ಸೇಷ್ಠತೆ ಹಾಗೂ ಇತರೆ ಮಾನದಂಡಗಳ ಅನುಸಾರ ಬಡ್ತಿ ನೀಡಬೇಕಾಗುತ್ತದೆ.

ಬಡ್ತಿ ಆಧಾರದಲ್ಲಿ ಭರ್ತಿ ಮಾಡುವ ಪದವೀಧರ ಶಿಕ್ಷಕರ ಹುದ್ದೆಗಳ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಸರ್ಕಾರ ನಮ್ಮ ಬೇಡಿಕೆ ಭಾಗಶಃ ಪರಿಗಣಿಸಿ ಶೇ.40ಕ್ಕೆ ಹೆಚ್ಚಿಸಿರುವುದು ಐತಿಹಾಸಿಕ ತೀರ್ಮಾನ. ನಮ್ಮ ಸಂಘದ ನಿರಂತರ ಪ್ರಯತ್ನಕ್ಕೆ ಸಿಕ್ಕ ಜಯ. ಇದಕ್ಕಾಗಿ ಶಿಕ್ಷಣ ಸಚಿವರಿಗೂ, ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇವೆ. ಮುಂದೆ ಇದು ಸಂಚಿವ ಸಂಪುಟದಲ್ಲಿ ಅನುಮೋದನೆ ಗೊಂಡು ಕರಡು ರಚನೆಯಾಗಬೇಕು. ಇದಕ್ಕೆ ಸರ್ಕಾರ ಶೀಘ್ರ ಕ್ರಮ ವಹಿಸಬೇಕು ಅಂತ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ತಿಳಿಸಿದ್ದಾರೆ.  
 

Follow Us:
Download App:
  • android
  • ios