Asianet Suvarna News Asianet Suvarna News

ಬದಲಾದ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು

* ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ

* ಕೊರೋನಾ ಕಾಲದಲ್ಲಿ ಬದಲಾಯ್ತು ಶಿಕ್ಷಣ ವ್ಯವಸ್ಥೆ

* ಬದಲಾದ ವ್ಯವಸ್ಥೆಯಲ್ಲಿ ಶಿಕ್ಷಕರು ಎದುರಿಸುವ ಸವಾಲುಗಳು

challenges faced by teacher in changed circumstances pod
Author
Bangalore, First Published Apr 21, 2022, 4:31 PM IST

ಸಿಂಧು ಹೆಗಡೆ, ಹೊನ್ನಾವರ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತು ಸರ್ವಕಾಲಕ್ಕೂ ಸತ್ಯ. ತಂದೆ ತಾಯಂದಿರನ್ನು ಹೊರತುಪಡಿಸಿ ವಿದ್ಯಾರ್ಥಿಗಳ ಏಳಿಗೆ ಬಯಸಿ ಕಾಳಜಿವಹಿಸುವವರು ಶಿಕ್ಷಕರು. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದಾಗ, ಗುರಿ ತಲುಪಿದಾಗ ಅತಿಹೆಚ್ಚು ಸಂಭ್ರಮಿಸುವವರು ಶಿಕ್ಷಕರೆ. ಬೆನ್ನುತಟ್ಟಿ ಪ್ರೋತ್ಸಾಹಿಸುವ, ಎಡವಿದಾಗ ತಿದ್ದುವ, ಸರಿದಾರಿಯಲ್ಲಿ ಮುನ್ನಡೆಸುವ ಗುರುವಿಗೆ ಪುರಾಣ ಕಾಲದಿಂದಲೂ ಪೂಜ್ಯ ಸ್ಥಾನ ಕಲ್ಪಿಸಲಾಗಿದೆ.  

ಬದಲಾದ ಶಿಕ್ಷಣ ವ್ಯವಸ್ಥೆ

ಗುರುಕುಲ ಪದ್ಧತಿಯಲ್ಲಿ ಗುರುವು ಅರಳಿ, ಅಶ್ವತ್ಥ ಮರದ ಕಟ್ಟೆಯಲ್ಲಿ ಕುಳಿತು ಶಿಶ್ಯರು ಗುರುವಿಗಿಂತ ಕೆಳಗೆ ಅಂದರೆ ನೆಲದಲ್ಲಿ ಕುಳಿತು ವಿದ್ಯಾರ್ಜನೆ ಮಾಡುತ್ತಿದ್ದರು ಕ್ರಮೇಣ 'ಗುರುಮುಖೇನ' ಪದ್ಧತಿ ಅಳಿದು ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆ ರೂಢಿಗೆ ಬಂತು ಕ್ರಮೇಣ ವಿದ್ಯಾರ್ಥಿಗಳು ಸುಖವಾಗಿ ಕುಳಿತು ಶಿಕ್ಷಕರು ನಿಂತು ಬೋಧನೆ ಮಾಡುವುದು ಪರಿಪಾಠವಾಯಿತು. ಎಷ್ಟೋ ವರ್ಷಗಳಿಂದ ಇದೆ ಪದ್ಧತಿ ಅಭ್ಯಾಸವಾಗಿತ್ತು ಇತ್ತೀಚೆಗೆ ತರಗತಿಗಳಲ್ಲಿನ ಕಲಿಕೆ ಕೊರೋನಾ ಕಾರಣದಿಂದ ಬೇರೊಂದು ರೂಪ ಪಡೆಯಿತು ನಾಲ್ಕು ಗೋಡೆಗಳ ಬದಲಾಗಿ  ಶಿಕ್ಷಕರು ವಿವಿಧ ಆ್ಯಪ್‌ ಗಳನ್ನು ಅವಲಂಬಿಸಬೇಕಾಯಿತು. ಈ ಹೊಸ ಯಾಂತ್ರಿಕ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವುದು ಶಿಕ್ಷಕರಿಗೂ ಕಷ್ಟವಾಗಿತ್ತು. ತಾವೂ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡು ವಿದ್ಯಾರ್ಥಿಗಳನ್ನೂ ಆನ್ಲೈನ್ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವುದು ಸವಾಲೇ ಆಗಿತ್ತು.

ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಕೆಲ ಶಿಕ್ಷಕರಿಗೂ ಸ್ಮಾರ್ಟ್ಫೋನ್ , ನೆಟ್ವರ್ಕ್ ಸಮಸ್ಯೆಗಳು ಎದುರಾಗಿದ್ದವು ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿ ಆನ್ಲೈನ್ನಲ್ಲೂ  ಪಾಠ ಮುಂದುವರಿಸಿದ ಶಿಕ್ಷಕರ ವೃತ್ತಿಪರತೆಯನ್ನು ನಿಜಕ್ಕೂ ಮೆಚ್ಚುಲೇ ಬೇಕು. ಇವಿಷ್ಟೇ ಅಲ್ಲ ವಿದ್ಯಾರ್ಥಿಗಳ ಜೀವನ ರೂಪಿಸುವ ಕಾರ್ಯದಲ್ಲಿ ಮಗ್ನರಾಗಬೇಕಿದ್ದ ಶಿಕ್ಷಕರು ಒಂದಷ್ಟು ಫಾರಂ ತುಂಬಬೇಕು,ಕೋವಿಡ್‌ ಜಾಗೃತಿ, ವಿವಿಧ ಸಮೀಕ್ಷೆ, ಜಾಗೃತಿ ಕಾರ್ಯಗಳು ಹಾಗೆ ಚುನಾವಣಾ ಕೆಲಸಗಳನ್ನೂ ನಿಭಾಯಿಸಬೇಕು. ಈ ಮಧ್ಯೆ ಅತಿಥಿ ಉಪನ್ಯಾಸಕರ ಪರಿಸ್ಥಿತಿಯಂತೂ ಹೇಳತೀರದು ಅದೆಷ್ಟೋ ಉಪನ್ಯಾಸಕರು ಉದ್ಯೋಗ ಭದ್ರತೆ ಇಲ್ಲದ ಕಾರಣ ವೇತನ ದೊರೆಯದೆ ಜೀವನ ನಡೆಸಲು ಬಹಳಷ್ಟು ಕಷ್ಟಪಟ್ಟಿದ್ದಾರೆ. 

ವಿದ್ಯಾರ್ಥಿಗಳ ಕರ್ತವ್ಯ

ಶಿಕ್ಷಕರು ಒಂದಷ್ಟು ತಯಾರಿಗಳೊಂದಿಗೆ  ತರಗತಿಗೆ ಬರುತ್ತಾರೆ ಅವರ ಶ್ರಮಕ್ಕೆ ಪ್ರತಿಫಲ ದೊರೆಯುವುದು ವಿದ್ಯಾರ್ಥಿಗಳು ಅವರು ಮಾಡುವ ಪಾಠವನ್ನು ಗಮನವಿಟ್ಟು ಕೇಳಿ ಅರ್ಥೈಸಿಕೊಂಡಾಗ ಮಾತ್ರ. ಪಾಠಕೇಳುವಾಗ ಪ್ರಮುಖ ಅಂಶಗಳನ್ನು ಪಟ್ಟಿಮಾಡಿಕೊಳ್ಳುವುದು,  ಕೊಟ್ಟ ಕೆಲಸಗಳನ್ನು ಚಾಚೂ ತಪ್ಪದೆ ಮಾಡುವುದು ಪರೀಕ್ಷಾ ದೃಷ್ಟಿಯಿಂದ ಸಹಾಯವಾಗಬಹುದು.

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಶಿಕ್ಷಕರು ಸದಾ ಸಿದ್ಧರಿರುತ್ತಾರೆ ಹಾಗಾಗಿ ಮುಕ್ತವಾಗಿ ಅವರೊಂದಿಗೆ ಮಾತನಾಡುವುದು, ಕಲಿಸಿದ ವಿಷಯದಲ್ಲಿ ಸಂದೇಹಗಳಿದ್ದರೆ ಬಗೆಹರಿಸಿಕೊಳ್ಳುವುದು, ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆಯುವುದು ಎಲ್ಲಕ್ಕಿಂತ ಮುಖ್ಯವಾಗಿ ಅವರ ನಿರ್ಣಯ ಗಳನ್ನು ಗೌರವಿಸುವುದು, ಪೂರ್ವಾಗ್ರಹ, ಬೇಧಬಾವವಿಲ್ಲದೆ ಎಲ್ಲಾ ಶಿಕ್ಷಕರನ್ನು ಸಮಾನವಾಗಿ ಕಾಣುವುದು ಜೊತೆಗೆ ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ವಿಶ್ವಾಸಾರ್ಹರಾಗಿರುವುದು. ನಿಂದನೆ ಅವಹೇಳನ ಮಾಡದೆ  ವಿಧೇಯರಾಗಿರುವುದು ಇವು ವಿದ್ಯಾರ್ಥಿ ಜೀವನದಲ್ಲಿ ಪಾಲಿಸಲೇಬೆಕಾದ ಅಂಶಗಳು.

ಕಲಿಕೆಯ ಪ್ರಕ್ರಿಯೆಯಲ್ಲಿ ಅಡೆತಡೆಗಳು ಸಹಜ ಅವುಗಳನ್ನು ನಿಭಾಯಿಸಲು ಶಿಕ್ಷಕರ ನೆರವು ಅತ್ಯಗತ್ಯ ಆದ್ದರಿಂದಲೇ ಅವರನ್ನು ‘ಸುಗಮಕಾರರು’ ಎಂದು ಕರೆಯುತ್ತಾರೆ. ಅಂಕಗಳಿಕೆ ಜ್ಞಾನ ಸಂಪಾದನೆಯ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ವ್ಯಕ್ತಿತ್ವದೊಂದಿಗೆ ಜೀವನ ರೂಪಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯ.

 

Follow Us:
Download App:
  • android
  • ios