ಹಿಂದೂಗಳ ಭಾವನೆ ಪುರಸ್ಕರಿಸಿದ ರಾಜ್ಯ ಸರ್ಕಾರ...!
ಖಾಸಗಿ ದೇವಸ್ಥಾಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಒಳ ಪಡಿಸುವ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆಗೆ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಎಚ್ಚೆತ್ತುಕೊಂಡಿದೆ,
ಬೆಂಗಳೂರು/ಮಂಗಳವಾರ, (ಫೆ.04): ಖಾಸಗಿ ದೇವಸ್ಥಾನಗಳ ಸರ್ಕಾರೀಕರಣ ಆದೇಶಕ್ಕೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಡೆಹಿಡಿದಿದ್ದಾರೆ. ಈ ಮೂಲಕ ಹಿಂದೂಗಳ ಭಾವನೆಗಳನ್ನು ಪುರಸ್ಕರಿಸಿದ್ದಾರೆ.
ಖಾಸಗಿ ದೇವಸ್ಥಾಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಒಳ ಪಡಿಸುವ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ಪ್ರತಿಭಟನೆಯ ಎಚ್ಚರಿಕೆಯನ್ನು ಸಹ ನೀಡಿವೆ. ಇದರಿಂದ ಎಚ್ಚೆತ್ತ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುತ್ತೋಲೆಗೆ ತಡೆ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಲಾಗಿರುವ ಖಾಸಗಿ ಸುತ್ತೋಲೆಯಿಂದ ಖಾಸಗಿ ದೇವಸ್ಥಾನದವರು ಆತಂಕ ಪಡುವ ಅಗತ್ಯವಿಲ್ಲ.ಇದು ನಿರಂತರ ಪ್ರಕ್ರಿಯೆಯಾಗಿದೆ. ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನಗಳನ್ನು ನೋಂದಣಿ ಮಾಡಿಕೊಳ್ಳಬೇಕೆಂದು 2015 ರಲ್ಲಿ ಧಾರ್ಮಿಕ ದತ್ತಿ ಕಾಯಿದೆ ತಿದ್ದುಪಡಿ ತರಲಾಗಿದೆ. ಸರ್ಕಾರ ಖಾಸಗಿ ದೇವಸ್ಥಾನಗಳ ಮೇಲೆ ಸರ್ಕಾರ ಹಕ್ಕು ಚಲಾಯಿಸುವುದಾಗಲಿ, ನಿಗಾ ಇಡುವುದಾಗಲಿ, ಸ್ವಾಯತ್ತ ತೆಗೆದುಕೊಳ್ಳುವುದಾಗಲಿ ಅಲ್ಲ. ನೋಂದಣಿ ಪ್ರಕ್ರಿಯೆಯ ನೆನಪಿನ ಸುತ್ತೋಲೆ ಕೊಟ್ಟಿದ್ದೇವೆ ಅಷ್ಟೇ ಎಂದರು.
2011ರಲ್ಲಿ ಈ ಬಗ್ಗೆ ಕಾಯ್ದೆ ತಂದಿರುವುದು 2015 ರಲ್ಲಿ ಜಾರಿ ಮಾಡಿದ್ದಾರೆ. 2016,17,18,19,20 ರಲ್ಲಿ ನೆನಪಿನ ಸುತ್ತೋಲೆ ಕೊಡುತ್ತಾ ಬಂದಿದ್ದೇವೆ. ಮೊನ್ನೆ ಸಹ ಅಂತಹ ಸುತ್ತೋಲೆ ಕೊಟ್ಟಿದ್ದೇವೆ. ನನ್ನ ಗಮನಕ್ಕೆ ಬಾರದೆ ಇದು ಸಾಮಾನ್ಯ ಪ್ರಕ್ರಿಯೆ ರೀತಿ ಸುತ್ತೋಲೆ ಕಳುಹಿಸಲಾಗಿದೆ. ಇದರಲ್ಲಿ ಖಾಸಗಿ ದೇವಸ್ಥಾನಗಳ ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ಸುತ್ತೋಲೆ ವಾಪಸ್ ತೆಗೆದುಕೊಳ್ಳಬೇಕೆಂದು ಯಾರಾದರೂ ಹೇಳಿದರೆ ಪರಿಶೀಲನೆ ಮಾಡುತ್ತೇವೆ. ಖಾಸಗಿ ದೇವಸ್ಥಾನಗಳು ಖಾಸಗಿ ಆಗಿಯೇ ಮುಂದೆವರೆಯುತ್ತದೆ ಎಂದು ಹೇಳಿದರು.
"