ಬೆಂಗಳೂರು[ಜ.24]: ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ಬದಲಾಗಿ ‘ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ’ ನಡೆಸುವ ಸಂಬಂಧ ರಾಜ್ಯ ಸರ್ಕಾರ ಈ ವರೆಗೆ ಅಧಿಕೃತ ಆದೇಶ ಹೊರಡಿಸಿಲ್ಲ. ಅಷ್ಟೇ ಅಲ್ಲ ಪರೀಕ್ಷೆ ಹೊಣೆಗಾರಿಕೆ ಹೊತ್ತಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೂ ಈ ಕುರಿತು ಯಾವುದೇ ನಿರ್ದೇಶನ ನೀಡಿಲ್ಲ ಎಂದು ತಿಳಿದು ಬಂದಿದೆ.

ಮೌಲ್ಯಾಂಕನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವುದಿಲ್ಲ. ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸುವುದಕ್ಕಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮಾಚ್‌ರ್‍ನಲ್ಲಿ ಪರೀಕ್ಷೆ ನಡೆಸಲಿದೆ. ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡಿಸಿ ರಿಪೋರ್ಟ್‌ ಕಾರ್ಡ್‌ ನೀಡಲಾಗುತ್ತದೆ ಎಂದು ಜ.7ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದರು.

7ನೇ ತರಗತಿ ಪಬ್ಲಿಕ್ ಪರೀಕ್ಷೆ ಖಚಿತ: ಇಂದು ನಿಯಮಗಳ ನಿರ್ಧಾರ!

ಸಚಿವರು ಈ ಹೇಳಿಕೆ ನೀಡಿ 15 ದಿನಗಳಾಗಿವೆ. ಆದರೂ ಈ ಬಗ್ಗೆ ಸ್ಪಷ್ಟಆದೇಶ ಹೊರ ಬೀಳದಿರುವುದರಿಂದ ಎಸ್‌ಎಸ್‌ಎಲ್‌ಸಿ ಮಂಡಳಿ ಸಿದ್ಧತೆ ಮಾಡಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ.

ಏಳನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದಕ್ಕಾಗಿ ರಾಜ್ಯ ಸರ್ಕಾರವು ಇಲ್ಲಿಯವರೆಗೂ ಎಸ್‌ಎಸ್‌ಎಲ್‌ಸಿ ಮಂಡಳಿಗೆ ನಿರ್ದೇಶನ ನೀಡಿಲ್ಲ. ಸರ್ಕಾರ ಅಧಿಕೃತ ಆದೇಶ ಹೊರಡಿಸುವವರೆಗೂ ಪರೀಕ್ಷಾ ಸಿದ್ಧತೆ ನಡೆಸಿಕೊಳ್ಳಲು ಸಾಧ್ಯವಿಲ್ಲ. ಪರೀಕ್ಷೆಯನ್ನು ಯಾವ ಮಾನದಂಡಗಳ ಆಧಾರದಲ್ಲಿ ನಡೆಸಬೇಕು, ಪ್ರಶ್ನೆ ಸಿದ್ಧಪಡಿಸುವ ಮಾದರಿ, ಪ್ರಕ್ರಿಯೆಗಳ ಕುರಿತು ಸ್ಪಷ್ಟತೆ ಸಿಕ್ಕಿಲ್ಲ ಎಂದು ಎಸ್‌ಎಸ್‌ಎಲ್‌ಸಿ ಮಂಡಳಿ ಮೂಲಗಳು ತಿಳಿಸಿವೆ.

7ನೇ ಕ್ಲಾಸ್‌ಗೆ ‘ಪಬ್ಲಿಕ್‌’ ಪರೀಕ್ಷೆ ಇಲ್ಲ

ಎಸ್ಸೆಸ್ಸೆಲ್ಸಿ ಮಂಡಳಿಯಲ್ಲಿರುವ ಕರ್ನಾಟಕ ಶಾಲಾ ಗುಣಮಟ್ಟಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು(ಕೆಎಸ್‌ಕ್ಯೂಎಎಸಿ) ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆಯ ನಂತರ ಮೌಲ್ಯಮಾಪನವನ್ನು ಡಯಟ್‌ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಂದ ಮಾಡಿಸಿ ರಿಪೋರ್ಟ್‌ ಕಾರ್ಡ್‌ ಸಿದ್ಧಮಾಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದರು. ಇದೀಗ ಈ ವಿಭಾಗಕ್ಕೂ ಪರೀಕ್ಷೆ ಕುರಿತ ಮಾಹಿತಿ ನೀಡಿಲ್ಲವೆಂದು ತಿಳಿದು ಬಂದಿದೆ.