ಬೆಂಗಳೂರು (ನ. 24): ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಬಿಸಿಯೂಟ ವಿತರಿಸುತ್ತಿರುವ ರಾಜ್ಯ ಸರ್ಕಾರ, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಚಿಂತನೆ ನಡೆಸಿದೆ.

ಕೊಲ್ಲೂರಿನ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಬಿಸಿಯೂಟ ವಿತರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದ್ದು, ರಾಜ್ಯದಲ್ಲಿ ಎಷ್ಟುಕನ್ನಡ ಮಾಧ್ಯಮದಲ್ಲಿ ಕಲಿಸುವ ಖಾಸಗಿ ಶಾಲೆಗಳಿವೆ ಎಂಬ ಮಾಹಿತಿ ನೀಡುವಂತೆ ಡಿಡಿಪಿಐಗಳಿಗೆ ಸೂಚನೆ ನೀಡಿದೆ.

105ನೇ ವಯಸ್ಸಲ್ಲಿ 4ನೇ ತರಗತಿ ಪರೀಕ್ಷೆ ಬರೆದ ಕೇರಳದ ಅಜ್ಜಿ!

ಕಲ್ಲಡ್ಕ ಪ್ರಭಾಕರ ಭಟ್‌ ಅವರು ಪತ್ರ ಬರೆದಿದ್ದು ಮಾತ್ರವಲ್ಲದೆ ಖುದ್ದಾಗಿ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಜತೆ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ರಾಜ್ಯದ 47,931 ಸರ್ಕಾರಿ ಹಾಗೂ 6,645 ಅನುದಾನಿತ ಸೇರಿ 54,576 ಶಾಲೆಗಳ 53,47,501 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಪ್ರಸ್ತುತ ಅಂದಾಜು 2,300 ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಶಾಲೆಗಳು ಕನ್ನಡ ಮಾಧ್ಯಮದ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಆಂಗ್ಲ ಮಾಧ್ಯಮ ಬೋಧನೆ ಮಾಡುತ್ತಿರುವ ಸಾಕಷ್ಟುಉದಾಹರಣೆಗಳಿವೆ. ಹೀಗಾಗಿ ನಿಖರವಾಗಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಎಷ್ಟಿವೆ ಎಂಬ ಮಾಹಿತಿ ಇಲಾಖೆಯ ಬಳಿ ಇಲ್ಲ.

ಕೈ ಕಾಲು ಕಳೆದುಕೊಂಡರೂ ಸಾಧನೆ; ವಿದ್ಯಾರ್ಥಿಗಳೊಂದಿಗೆ ಬ್ಲೇಡ್ ರನ್ನರ್ ಶಾಲಿನಿ ಸಂವಾದ

ಆದ್ದರಿಂದ ರಾಜ್ಯದಲ್ಲಿ ನಿಖರವಾಗಿ ಎಷ್ಟುಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಕಲಿಸಲಾಗುತ್ತಿದೆ ಎಂಬುದನ್ನು ಸ್ಥಳ ಪರಿಶೀಲನೆ ಮೂಲಕ ಪತ್ತೆ ಮಾಡಿ ಮಾಹಿತಿ ನೀಡುವ ಹೊಣೆಯನ್ನು ಡಿಡಿಪಿಐಗಳಿಗೆ ವಹಿಸಲಾಗಿದೆ. ಜತೆಗೆ 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಬಿಸಿಯೂಟ ವಿತರಿಸಲು ತಗಲುವ ಖರ್ಚು ವೆಚ್ಚವನ್ನು ಲೆಕ್ಕ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಇಲಾಖೆಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಇದಾದ ಬಳಿಕ ಹಣಕಾಸು ಇಲಾಖೆಯು ಅನುಮತಿ ನೀಡಿದರೆ ಖಾಸಗಿ ಕನ್ನಡ ಮಾಧ್ಯಮ ಮಕ್ಕಳಿಗೂ ಬಿಸಿಯೂಟ ಸವಿಯುವ ಅವಕಾಶ ದೊರೆಯಲಿದೆ.

ಸರ್ಕಾರದ ನಿರ್ದೇಶನದಂತೆ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಇಲಾಖೆಯ ಡಿಡಿಪಿಐಗಳಿಗೆ ಸೂಚಿಸಲಾಗಿದೆ. ಮಾಹಿತಿ ಬಂದ ಬಳಿಕ ಖರ್ಚು ವೆಚ್ಚ , ಶಾಲೆಗಳು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಒಳಗೊಂಡ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತೇವೆ.

- ಎಂ.ಆರ್‌. ಮಾರುತಿ, ಜಂಟಿ ನಿರ್ದೇಶಕರು, ಮಧ್ಯಾಹ್ನ ಉಪಾಹಾರ ಯೋಜನೆ