ಬಿಪಿಎಲ್‌ ಕುಟುಂಬಗಳು ಒಳಗೊಂಡಂತೆ ಎಲ್ಲಾ ಅರ್ಹ 5.09 ಕೋಟಿ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಗುರಿ ಹೊಂದಲಾಗಿದೆ’ ಎಂದ ಸುಧಾಕರ್‌ 

ಬೆಂಗಳೂರು(ಡಿ.07): ದೇಶಾದ್ಯಂತ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವನ್ನು ಒಳಗೊಂಡ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ (ಎಬಿ-ಪಿಎಂಜೆಎವೈ-ಎಆರ್‌ಕೆ) ಯೋಜನೆಯ ನೂತನ ಗುರುತಿನ ಚೀಟಿಗಳ ವಿತರಣೆಗೆ ಗುರುವಾರ (ಡಿ.8) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ 5.09 ಕೋಟಿ ಜನರಿಗೆ ಕಾರ್ಡ್‌ ವಿತರಣೆ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.

ಈ ಕುರಿತು ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ‘ವಿಧಾನಸೌಧದ ಬಾಂಕ್ವೆಚ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಅದೇ ದಿನದಿಂದ ಎಲ್ಲಾ ಜಿಲ್ಲೆಗಳಲ್ಲೂ ಎಬಿ-ಪಿಎಂಜೆಎವೈ-ಎಆರ್‌ಕೆ ಗುರುತಿನ ಚೀಟಿ ವಿತರಿಸಲು ಆರೋಗ್ಯ ಇಲಾಖೆಯಿಂದ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಪಿಎಲ್‌ ಕುಟುಂಬಗಳು ಒಳಗೊಂಡಂತೆ ಎಲ್ಲಾ ಅರ್ಹ 5.09 ಕೋಟಿ ಫಲಾನುಭವಿಗಳಿಗೆ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಮುದ್ರಿಸಿ ವಿತರಿಸುವ ಗುರಿ ಹೊಂದಲಾಗಿದೆ’ ಎಂದರು.

ಆರೋಗ್ಯ ವೃತ್ತಿಪರರ ನೋಂದಣಿ, ದೇಶಕ್ಕೇ ಕರ್ನಾಟಕ ಪ್ರಥಮ: ಸಚಿವ ಸುಧಾಕರ್‌

‘ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಎಬಿ-ಪಿಎಂಜೆಎವೈ-ಎಆರ್‌ಕೆ ಗುರುತಿನ ಚೀಟಿಗಳನ್ನು ಕನ್ನಡ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಮುದ್ರಿಸಿ ಉಚಿತವಾಗಿ ವಿತರಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸಮ್ಮತಿಸಿದೆ. ಈ ಗುರುತಿನ ಚೀಟಿಯಲ್ಲಿ ಪೋರ್ಟಬಿಲಿಟಿ ಸೌಲಭ್ಯ ಇರುವುದರಿಂದ ಇದರ ಮೂಲಕ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದು’ ಎಂದು ಮಾಹಿತಿ ನೀಡಿÜದರು.

ಕಾರ್ಡ್‌ ಇಲ್ಲದವರಿಗೂ ಚಿಕಿತ್ಸೆ ಲಭ್ಯ:

ನೂತನ ಗುರುತಿನ ಚೀಟಿ ಹೊಂದಿಲ್ಲದಿದ್ದರೂ ಆಧಾರ್‌ ಮತ್ತು ಪಡಿತರ ಚೀಟಿ ಮೂಲಕ ರೋಗಿಗಳು ಎಸ್‌ಎಎಸ್‌ಟಿ ನೋಂದಾಯಿತ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯಬಹುದು. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ತಿಂಗಳು 1.80 ರಿಂದ 2 ಲಕ್ಷ ಮಂದಿ ಚಿಕಿತ್ಸೆಗಾಗಿ ನೋಂದಣಿಯಾಗುತ್ತಿದ್ದಾರೆ. ಆನ್‌ಲೈನ್‌ ವಿಚಾರಣೆಗಳನ್ನು 2 ವಾರಗಳಲ್ಲಿ ಇತ್ಯರ್ಥಗೊಳಿಸಿ ಆಸ್ಪತ್ರೆಗಳಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

42 ಲಕ್ಷ ಜನರಿಗೆ 5426 ಕೋಟಿ ರು. ಮೊತ್ತದ ಚಿಕಿತ್ಸೆ

ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರು. ವೆಚ್ಚದ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ಎಪಿಎಲ್‌ ಕುಟುಂಬಗಳಿಗೆ ಶೇ.30ರಷ್ಟು ಚಿಕಿತ್ಸಾ ವೆಚ್ಚದಲ್ಲಿ (ವಾರ್ಷಿಕ 1.5 ಲಕ್ಷ ರು.) ವಿನಾಯ್ತಿ ಇದೆ. ಸದ್ಯ ಈ ಯೋಜನೆ ಮೂಲಕ 3,545 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,650ಕ್ಕೂ ಅಧಿಕ ಚಿಕಿತ್ಸೆಗಳು ಉಚಿತವಾಗಿ ಲಭ್ಯವಿದೆ. ಈ ಯೋಜನೆ ಪ್ರಾರಂಭವಾದ ನಂತರ ರಾಜ್ಯದಲ್ಲಿ 42 ಲಕ್ಷ ಫಲಾನುಭವಿಗಳು, 5,426 ಕೋಟಿ ರು., ಮೊತ್ತದ ಚಿಕಿತ್ಸೆ ಪಡೆದಿದ್ದು, ಇದೊಂದು ಮಹತ್ವದ ಸಾಧನೆ ಎಂದು ಸಚಿವ ಡಾ.ಸುಧಾಕರ್‌ ತಿಳಿಸಿದರು.