ಕೊರೋನಾ ಮುಕ್ತ 9 ಜಿಲ್ಲೆಗಳಲ್ಲಿ | ಉದ್ಯಮ ಆರಂಭಕ್ಕೆ ಸುತ್ತೋಲೆ |  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

ಬೆಂಗಳೂರು (ಏ. 28): ಪಾದರಾಯನಪುರ ಗಲಭೆ ಪ್ರಕರಣದಿಂದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ರಾಮನಗರ ಜಿಲ್ಲೆ ಹೊರತು ಹೊರತು ಪಡಿಸಿ ಇನ್ನುಳಿದ ಕೊರೋನಾ ಮುಕ್ತ 9 ಜಿಲ್ಲೆಯಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌ ಅನುಮತಿ ನೀಡಿದ್ದಾರೆ.

ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಹೊರಡಿಸಿದ ಸುತ್ತೋಲೆ ಅನುಸಾರ ಇದೀಗ ಕಂದಾಯ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ.

ಕೊರೋನಾ ಮುಕ್ತ ಜಿಲ್ಲೆಗಳಾಗಿರುವ ಯಾದಗಿರಿ, ರಾಯಚೂರು, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ಚಾಮರಾಜನಗರ, ಹಾವೇರಿ ಮತ್ತು ಹಾಸನದಲ್ಲಿ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಅಗತ್ಯ ವಸ್ತುಗಳ ಉತ್ಪನ್ನ, ವೈದ್ಯಕೀಯ ಕ್ಷೇತ್ರಗಳ ಉತ್ಪನ್ನಗಳ ಉತ್ಪಾದನೆಗೆ ಅವಕಾಶ ನೀಡಲಾಗಿದೆ. ಆಹಾರ ಉತ್ಪನ್ನ ಕೈಗಾರಿಕೆಗಳು ಗಣಿಗಾರಿಕೆ, ಕಲ್ಲಿದ್ದಲು ಉತ್ಪನ್ನ ಮತ್ತು ಅವುಗಳ ಸಾಗಾಣಿಕೆ ವಿನಾಯಿತಿಯನ್ನು ನೀಡಲಾಗಿದೆ.

ಉಡುಪಿ ಈಗ ಗ್ರೀನ್‌ ಝೋನ್‌, ಆದರೂ ಸಡಿಲವಾಗದ ಲಾಕ್‌ಡೌನ್‌

ಸಂಬಂಧಪಟ್ಟಸಂಸ್ಥೆಯು ಜಿಲ್ಲೆಯ ಸಂಬಂಧಪಟ್ಟಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಎಷ್ಟರ ಮಟ್ಟಿಗೆ ಸಿಬ್ಬಂದಿಯನ್ನು ಹಾಜರು ಮಾಡಲಾಗುವುದು ಎಂಬುದರ ಬಗ್ಗೆ ಸ್ವಯಂ ದೃಢೀಕೃತ ಪತ್ರವನ್ನು ಕೈಗಾರಿಕೆಗಳು ನೀಡಬೇಕು ಎಂದು ಸುತ್ತೋಲೆಯನ್ನು ತಿಳಿಸಲಾಗಿದೆ.

ರಾಮನಗರ ಜಿಲ್ಲೆಯಲ್ಲಿ ಕೈಗಾರಿಕೆಗಳು ಪ್ರಾರಂಭವಾಗಬೇಕಿತ್ತು. ಆದರೆ, ಅಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ಲಾಕ್‌ಡೌನ್‌ ನಿಯಮ ಅನ್ವಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ.