Asianet Suvarna News Asianet Suvarna News

ಎಪಿಎಂಸಿ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ವಾಲಾ ಅಂಕಿತ

ಎಪಿಎಂಸಿ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ವಾಲಾ ಅಂಕಿತ | ಇನ್ನು ರೈತರು ಎಲ್ಲಿಯೂ ಉತ್ಪನ್ನ ಮಾರಬಹುದು | ವಿಪಕ್ಷಗಳ ವ್ಯಾಪಕ ವಿರೋಧದ ನಡುವೆ ಅಂಗೀಕಾರ ಆಗಿತ್ತು.

Governor Vajubhai Vala approves APMC Amendment Bill dpl
Author
Bangalore, First Published Jan 2, 2021, 9:12 AM IST

ಬೆಂಗಳೂರು(ಜ.02): ವಿಪಕ್ಷಗಳು ಹಾಗೂ ರೈತರ ತೀವ್ರ ವಿರೋಧದ ನಡುವೆಯೇ ಡಿ.9 ರಂದು ವಿಧಾನಪರಿಷತ್‌ನಲ್ಲಿ ಅಂಗೀಕರಿಸಿದ ‘ಕರ್ನಾಟಕ ಕೃಷಿ ಉತ್ಪನ್ನಗಳ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ ) ಕಾಯಿದೆ - 2020’ ವಿಧೇಯಕಕ್ಕೆ (ಎಪಿಎಂಸಿ ತಿದ್ದುಪಡಿ) ರಾಜ್ಯಪಾಲ ವಿ.ಆರ್‌. ವಾಲಾ ಅವರು ಅಂಕಿತ ಹಾಕಿದ್ದಾರೆ.

ಈ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರುವ ಹಾಗೂ ಖರೀದಿದಾರರು ಮುಕ್ತವಾಗಿ ಖರೀದಿ ಮಾಡುವ ಎಪಿಎಂಸಿ ತಿದ್ದುಪಡಿ ಕಾಯಿದೆ ಅನುಷ್ಠಾನಗೊಂಡಂತಾಗಿದೆ.

ಬೆಳಗಾವಿ: ಕನ್ನಡ ಧ್ವಜ ಹಾರಿಸಿದ್ದ ತಾಳೂಕರ ಅಂಗಡಿಗೆ ಬೆಂಕಿ

1966ರ ಕಾಯಿದೆಯನ್ನು ತಿದ್ದುಪಡಿ ಮಾಡಿದ್ದು ಕಾಯಿದೆಯ 27 (2) ನಿಯಮದ ಪ್ರಕಾರ ಮಾರುಕಟ್ಟೆಯ ಸಮಿತಿಯು ಮಾರುಕಟ್ಟೆಪ್ರಾಂಗಣಗಳಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಬೇಕು ಎಂಬ ನಿಯಮವನ್ನು ಉಳಿಸಿಕೊಳ್ಳಲಾಗಿದೆ. ಆದರೆ, 27(3) ನಿಯಮವನ್ನು ಕೈ ಬಿಟ್ಟಿದ್ದು ಈ ಮೂಲಕ ಮಾರುಕಟ್ಟೆಪ್ರಾಂಗಣದ ಹೊರಗಡೆ ನಡೆಯುವ ಕೃಷಿ ಉತ್ಪನ್ನ ಮಾರಾಟ ಅಥವಾ ವಹಿವಾಟುಗಳನ್ನು ನಿಯಂತ್ರಿಸುವ ಹಕ್ಕನ್ನು ಮಾರುಕಟ್ಟೆಸಮಿತಿಗಳಿಂದ ಕಿತ್ತುಕೊಳ್ಳಲಾಗಿದೆ.

117ನೇ ನಿಯಮದ ತಿದ್ದುಪಡಿಯಂತೆ ಎಪಿಎಂಸಿ ಮಾರುಕಟ್ಟೆಗಳಲ್ಲದೆ ಯಾವುದೇ ವ್ಯಕ್ತಿಯು ಸ್ಥಳೀಯ ನಿಯಮಗಳನ್ನು ಪಾಲಿಸಿ ಮಾರುಕಟ್ಟೆಸ್ಥಳವನ್ನು ಸೃಷ್ಟಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ಎರಡನೇ ತಿದ್ದುಪಡಿ)ಯನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ತೀವ್ರ ವಿರೋಧದ ನಡುವೆಯೇ ಎಪಿಎಂಸಿ ಸುಧಾರಣೆ ಕಾಯಿದೆ ರಾಜ್ಯದಲ್ಲಿ ಅಂತಿಮ ಅಂಗೀಕಾರ ಪಡೆದಂತಾಗಿದೆ.

ಸತತ 7ನೇ ದಿನ 1000ಕ್ಕಿಂತ ಕಮ್ಮಿ ಕೊರೋನಾ ಕೇಸ್‌

ಡಿ.9 ರಂದು ತಡರಾತ್ರಿವರೆಗೆ ಬಿಜೆಪಿ ಸರ್ಕಾರದ ತಿದ್ದುಪಡಿ ವಿಧೇಯಕವನ್ನು ವಿಧಾನಪರಿಷತ್‌ನಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಸದಸ್ಯರು ವಿರೋಧಿಸಿದ್ದರು. ತಡರಾತ್ರಿ ಧ್ವನಿಮತದ ಮೂಲಕ ಸರ್ಕಾರ ಅಂಗೀಕಾರ ಪಡೆದಿತ್ತು. ಈ ವೇಳೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಎಪಿಎಂಸಿ ತಿದ್ದುಪಡಿಯಿಂದ ಯಾವುದೇ ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ಎಪಿಎಂಸಿ ಆಸ್ತಿಗಳ್ನೂ ಪರಭಾರೆ ಮಾಡುವುದಿಲ್ಲ. ರೈತರಿಗೆ ಮುಕ್ತವಾಗಿ ಕೃಷಿ ಉತ್ಪನ್ನ ಮಾರಾಟ ಮಾಡಲು ತಿದ್ದುಪಡಿಯಿಂದ ಅವಕಾಶ ಸಿಗಲಿದೆ. ಜೊತೆಗೆ ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದುಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Follow Us:
Download App:
  • android
  • ios