Asianet Suvarna News Asianet Suvarna News

ಸರ್ಕಾರಿ ಶಾಲೆಗಳು ಮುಚ್ಚಬಾರದು, ಬಡ ಮಕ್ಕಳ ಶಿಕ್ಷಣಕ್ಕಾಗಿ ಕೈ ಜೋಡಿಸುತ್ತೇನೆ: ಡಾಲಿ ಧನಂಜಯ್‌

ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ಮೂಲ ಸೌಕರ್ಯದ ಕೊರತೆಯಿಂದ ಮುಚ್ಚಬಾರದು. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಉಳಿವಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯರೊಂದಿಗೆ ಕೈ ಜೋಡಿಸುವುದಾಗಿ ನಟ ಡಾಲಿ ಧನಂಜಯ್‌ ಹೇಳಿದರು.

Government schools should not be closed Says Dolly Dhananjay gvd
Author
First Published Jun 1, 2023, 4:20 AM IST

ಪಾಂಡವಪುರ (ಜೂ.01): ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು ಮೂಲ ಸೌಕರ್ಯದ ಕೊರತೆಯಿಂದ ಮುಚ್ಚಬಾರದು. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಉಳಿವಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯರೊಂದಿಗೆ ಕೈ ಜೋಡಿಸುವುದಾಗಿ ನಟ ಡಾಲಿ ಧನಂಜಯ್‌ ಹೇಳಿದರು. ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುನರಾರಂಭದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡುವ ಮೂಲಕ ವಿಭಿನ್ನವಾಗಿ ಸ್ವಾಗತ ಕೋರಿ ನಂತರ ಶಾಲೆ ಸೌಂದರ್ಯ ವೀಕ್ಷಿಸಿ ಮಾತನಾಡಿದರು.

ಸರ್ಕಾರಿ ಶಾಲೆ ಉಳಿವಿನ ಬಗ್ಗೆ ಪಣತೊಟ್ಟಿರುವ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಎಲ್ಲರಿಗೂ ಮಾದರಿ. ಈ ಶಾಲೆಗೆ ಬಂದಿರುವ ನನಗೆ ತುಂಬಾ ಖುಷಿಯಾಗಿದೆ. ಎಲ್ಲ ಮಕ್ಕಳಿಗೂ ಒಂದೇ ರೀತಿಯ ಸವಲತ್ತುಗಳು ಸಿಗುವುದಿಲ್ಲ. ಸಾಕಷ್ಟು ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಮಕ್ಕಳು ಶಾಲೆಬಿಟ್ಟು ಹೋಗ್ತಾರೆ. ಅವರನ್ನು ಮತ್ತೆ ಕರೆತರೊದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದು ತುಂಬಾ ಜನ ಅಂದುಕೊಂಡಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಶಾಲೆ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಅಧಿ​ಕಾರಿಗಳು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ: ಶಾಸಕ ಶರತ್‌ ಬಚ್ಚೇಗೌಡ

ಪ್ರತಿ ಹಳ್ಳಿಯಲ್ಲೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು. ಓದಿಗೆ ದೊಡ್ಡ ಶಾಲೆ ಚಿಕ್ಕಶಾಲೆ ಅಂತಿಲ್ಲ. ಉತ್ತಮ ಗುಣಮಟ್ಟಕಲಿಕೆ ಸಿಗಬೇಕು. ಹಳ್ಳಿಗಳಲ್ಲಿ ಶಾಲೆ ಶಿಕ್ಷಕರು ಶಾಲೆಯನ್ನು ನಮ್ಮ ಶಾಲೆಯೆಂದು ಭಾವಿಸಿ ಕೆಲಸ ಮಾಡಬೇಕು ಎಂದರು. ಒಳ್ಳೆಯ ಭಾವನೆಗಳಿಂದ ಕೆಲಸ ಮಾಡಿದರೆ ಪ್ರತಿಯೊಂದು ಶಾಲೆ ಅಭಿವೃದ್ಧಿ ಸಾಧ್ಯ. ಇದಕ್ಕೆ ಪೂರಕವಾಗಿ ನಿಂತಿರುವ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ. ಅವರ ಸರ್ಕಾರಿ ಶಾಲೆ ಅಭಿವೃದ್ಧಿ ಉದೇಶಕ್ಕೆ ನಾವೆಂದು ಜೊತೆಯಾಗಿರುತ್ತೇವೆ. ಸರ್ಕಾರಿ ಶಾಲೆ ಉಳಿವಿಗೆ ನಾವು ಕೂಡ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.

ಶಾಲೆ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಶಿಕ್ಷಕರು ಆಡಳಿತ ವರ್ಗ ಮದುವೆ ಮನೆಯಂತೆ ಶಾಲೆಯನ್ನು ಸಿಂಗಾರ ಮಾಡಿ ಮಕ್ಕಳನ್ನು ಶಾಲೆಗೆ ಪುಪ್ಪಾರ್ಚಾನೆ ಮಾಡಿ ಗುಲಾಬಿ ಹಾಗೂ ಸಿಹಿ, ಪೆನ್ನು, ಬುಕ್‌ ನೀಡುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು. ಈ ವೇಳೆ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಪ್ರಕಾಶ್‌, ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್‌, ರೈತ ಸಂಘದ ಜಿಲ್ಲಾಧ್ಯಕ್ಷ ಎ. ಕೆಂಪೂಗೌಡ, ಶಾಲೆ ಮುಖ್ಯಶಿಕ್ಷಕ ಕೆ.ಬಿ ಕುಮಾರ್‌, ಶಿಕ್ಷಕ ರಾಧ ಗ್ರಾಮದ ಮುಖಂಡ ವೈ.ಸುಬ್ಬಯ್ಯ ಸೇರಿದಂತೆ ಅನೇಕರು ಇದ್ದರು.

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು: ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ರೈತರನ್ನು ಸಾಲಮುಕ್ತರನ್ನಾಗಿಸಬಹುದು ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು. ನಮ್ಮೂರು ಬೆಳೆಯ ಬೇಕಾದರೆ ಗ್ರಾಮದ ಶಾಲೆಗಳು ಅಭಿವೃದ್ಧಿ ಆಗಬೇಕು ಖಾಸಗಿಯವರು ಶಿಕ್ಷಣವನ್ನ ಉದ್ಯಮವಾಗಿ ನಡೆಸ್ತಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿ ಶಿಕ್ಷಣ ಸಿಕ್ತಿಲ್ಲ ಅಂತ ಖಾಸಗಿಯವ್ರು ಶಿಕ್ಷಣ ಸಂಸ್ಥೆ ನಡೆಸುತ್ತಾರೆ. ಇದ್ರಲ್ಲಿ ಪೋಷಕರ ತಪ್ಪೇನಿಲ್ಲ. ತಮ್ಮ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ನೀಡಬೇಕು ಅಂದುಕೊಳ್ಳುತ್ತಾರೆ. ಖಾಸಗಿ ಶಾಲೆಗಳ ಸೌಲಭ್ಯ ಸರ್ಕಾರಿ ಶಾಲೆಯಲ್ಲಿ ಕೊಟ್ರೆ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸ್ತಾರೆ. ವ್ಯವಸ್ಥಿತವಾಗಿ ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಿದ್ರೆ ಮಕ್ಕಳು ಶಾಲೆಗೆ ಬರ್ತಾರೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ. ಉದ್ಯಮಿಗಳ ಸಹಕಾರದಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶಾಲೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.

Follow Us:
Download App:
  • android
  • ios