ಕೊರೋನಾ ವಾರಿಯ​ರ್ಸ್‌ಗೆ 30 ಲಕ್ಷ ಪರಿಹಾರ| ಹಣಕಾಸು ಇಲಾಖೆಯಿಂದ ಹೈಕೋರ್ಟ್‌ಗೆ ಸ್ಪಷ್ಟನೆ| ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಪ್ರಮಾಣ ಪತ್ರ ಸಲ್ಲಿಸಿದ್ದು, ಕೇಂದ್ರ 50 ಲಕ್ಷ ರು. ಪರಿಹಾರ ಘೋಷಿಸಿರುವುದು ವಿಮೆಯಾಗಿದೆ| ರಾಜ್ಯದ ಪರಿಹಾರ ಹಣವನ್ನು ನೇರವಾಗಿ ರಾಜ್ಯ ಸರ್ಕಾರವೇ ಭರಿಸಲಿದೆ| 

ಬೆಂಗಳೂರು(ಸೆ.06): ಕೋವಿಡ್‌-19 ಕರ್ತವ್ಯದಲ್ಲಿರುವ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು, ಪೌರಕಾರ್ಮಿಕರು ಮತ್ತಿತರರಿಗೆ ಘೋಷಿಸಲಾಗಿರುವ 30 ಲಕ್ಷ ಪರಿಹಾರ ಮೊತ್ತ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಕೋವಿಡ್‌-19 ನಿರ್ವಹಣೆ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್‌ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.

ಕೋವಿಡ್‌-19 ಕರ್ತವ್ಯದಲ್ಲಿರುವವರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ .50 ಲಕ್ಷ ಪರಿಹಾರ ಘೋಷಿಸಿದೆ. ಆದರೆ, ರಾಜ್ಯ ಸರ್ಕಾರ 30 ಲಕ್ಷ ಪರಿಹಾರ ಘೋಷಿಸಿದೆ. ಹೀಗಾಗಿ, ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರ 50 ಲಕ್ಷ ಪರಿಹಾರ ಘೋಷಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್‌ ಕಳೆದ ವಿಚಾರಣೆ ವೇಳೆ ನಿರ್ದೇಶಿಸಿತ್ತು.

ಕೊರೋನಾ ವಾರಿಯರ್ಸ್‌ಗೆ ಗೌರಿ ಹಬ್ಬಕ್ಕೆ ಸೀರೆ ಕೊಡುಗೆ

ಈ ಕುರಿತು ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಪ್ರಮಾಣ ಪತ್ರ ಸಲ್ಲಿಸಿದ್ದು, ಕೇಂದ್ರ 50 ಲಕ್ಷ ರು. ಪರಿಹಾರ ಘೋಷಿಸಿರುವುದು ವಿಮೆಯಾಗಿದೆ. ಆದರೆ, ರಾಜ್ಯದ ಪರಿಹಾರ ಹಣವನ್ನು ನೇರವಾಗಿ ರಾಜ್ಯ ಸರ್ಕಾರವೇ ಭರಿಸಲಿದೆ. ಕೇಂದ್ರದ ವಿಮಾ ಯೋಜನೆ ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದ ಎಲ್ಲರಿಗೂ ಅನ್ವಯವಾಗುತ್ತದೆ. ಆದರೆ, ರಾಜ್ಯದ ಯೋಜನೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಿಬ್ಬಂದಿ, ಹೋಮ್‌ ಗಾರ್ಡ್‌, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು, ಅಗ್ನಿ ಶಾಮಕ ಸಿಬ್ಬಂದಿ, ಕಾರಾಗೃಹದ ಸಿಬ್ಬಂದಿ, ಪೌರಕಾರ್ಮಿಕರು ಸೇರಿ ಅತಿ ದೊಡ್ಡ ಸರಕಾರಿ ಸಿಬ್ಬಂದಿ ವಿಮೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ತಿಳಿಸಿದೆ.

ಅಲ್ಲದೆ, ಸದ್ಯದ ರಾಜ್ಯದ ಹಣಕಾಸು ಪರಿಸ್ಥಿತಿಯಲ್ಲಿ, ಕೋವಿಡ್‌-19 ರೋಗಿಗಳನ್ನು ನೇರವಾಗಿ ನಿರ್ವಹಿಸದ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸಿಬ್ಬಂದಿಗೆ ನಿಗದಿಪಡಿಸಿರುವ 30 ಲಕ್ಷ ರು. ಪರಿಹಾರವನ್ನು 50 ಲಕ್ಷಕ್ಕೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ. ಈ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿದೆ.