ವಿಶೇಷ ಚೇತನರಿಗೆ ಉದ್ಯೋಗ ಮತ್ತು ಕೌಶಲ್ಯ ವೇದಿಕೆ ಒದಗಿಸುವ 'ಆದಿದ್ವಾರ' ಆ್ಯಪ್ ಬಿಡುಗಡೆಯಾಗಿದೆ. ಇದರೊಂದಿಗೆ, ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ದಿವ್ಯಾಂಗರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಘೋಷಿಸಿದ್ದಾರೆ.

ಬೆಂಗಳೂರು (ಮೇ.8): ವಿಶೇಷ ಚೇತನರಿಗೆ ಉದ್ಯೋಗಾವಕಾಶಗಳು ಮತ್ತು ಕೌಶಲ್ಯಾಭಿವೃದ್ಧಿಗೆ ವೇದಿಕೆ ಒದಗಿಸುವ ‘ಆದಿದ್ವಾರ’ ಅಪ್ಲಿಕೇಶನ್ ಅನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. 

Add Asianetnews Kannada as a Preferred SourcegooglePreferred

ಅಸಿಸ್ಟೆಕ್ ಫೌಂಡೇಶನ್ (ಎಟಿಎಫ್) ಸಹಯೋಗದೊಂದಿಗೆ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಈ ಆ್ಯಪ್‌ ಬಿಡುಗಡೆ ಮಾಡಿದರು. ಇದೇ ವೇಳೆ, ಬರುವ ಆಗಸ್ಟ್‌ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶೇಷಚೇತನರಿಗಾಗಿ (ಪಿಡಬ್ಲ್ಯುಡಿಗಳು) ವಿಶೇಷ ಉದ್ಯೋಗ ಮೇಳ ನಡೆಸುವುದಾಗಿ ಘೋಷಿಸಿ, ಉದ್ಯೋಗ ಮೇಳದ ಅಧಿಕೃತ ಲೋಗೋ ಅನಾವರಣಗೊಳಿಸಿದರು.

ಸಮಾನ ಅವಕಾಶ ನೀಡಬೇಕು:

ಬಳಿಕ ಮಾತನಾಡಿದ ಅವರು, ಆದಿದ್ವಾರ ವೇದಿಕೆಯು ಉದ್ಯೋಗಾವಕಾಶಗಳು, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತದೆ. ಉದ್ಯೋಗದಾತರು ಸಮಗ್ರ ಉದ್ಯೋಗ ಪಾತ್ರಗಳನ್ನು ಪೋಸ್ಟ್ ಮಾಡಲು ನೆರವಾಗಲಿದೆ. ದಿವ್ಯಾಂಗರು ಯಾರಿಗೂ ಕಡಿಮೆ ಇಲ್ಲ. ಅವರಿಗೆ ವಿಶೇಷ ಪ್ರತಿಭೆ ಇರುತ್ತದೆ. ಕಾರ್ಪೊರೇಟ್‌ ಸಂಸ್ಥೆಗಳು ನೇಮಕಾತಿ ಸಮಯದಲ್ಲಿ ಅವರಿಗೆ ಸಮಾನ ಅವಕಾಶ ನೀಡಬೇಕು ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ 3,000ಕ್ಕೂ ಹೆಚ್ಚು ಅಂಗವಿಕಲ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ತರಬೇತಿ ಪಾಲುದಾರರು ಮತ್ತು ಸಹಾಯಕ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳೊಂದಿಗೆ ಸಂಪರ್ಕಿಸಲು ದೊಡ್ಡ ವೇದಿಕೆ ಸಿಗಲಿದೆ. ವೃತ್ತಿ ಮಾರ್ಗದರ್ಶನ ಅವಧಿಗಳು, ಕೌಶಲ್ಯ ಮಾರ್ಗ ಜಾಗೃತಿ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುಧಾಮ್ ದಾಸ್, ಎಟಿಎಫ್ ಸಿಇಒ ಪ್ರತೀಕ್ ಮಾಧವ್ ಸೇರಿ ಇತರೆ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

- ಆಗಸ್ಟ್‌ನಲ್ಲಿ ದಿವ್ಯಾಂಗರಿಗೆ ವಿಶೇಷ ಉದ್ಯೋಗ ಮೇಳ

- ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜನೆ

- ಲೋಗೋ ಬಿಡುಗಡೆ ಮಾಡಿದ ಸಚಿವ ಡಾ.ಶರಣ ಪ್ರಕಾಶ್‌