ಬೆಂಗಳೂರು(ಆ.20): ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ, ಧೊಂಬಿಯೊಂದಿಗೆ ಮಾಜಿ ಮೇಯರ್‌ ಸಂಪತ್‌ ರಾಜ್‌ ಮತ್ತು ಬಿಬಿಎಂಪಿ ಸದಸ್ಯ ಜಾಕೀರ್‌ ಹುಸೇನ್‌ ಅವರ ಹೆಸರು ತಳುಕು ಹಾಕಿಕೊಂಡಿದೆ. ಈ ಇಬ್ಬರಿಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯೊಂದಿಗೆ ಅಸಮಾಧಾನ ಇರುವುದು ನಿಜ. ಇದೇ ಕಾರಣದೊಂದಿಗೆ ಮುಂದಿನ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಎಸ್‌ಡಿಪಿಐ ಸಂಘಟನೆಯನ್ನು ಓಲೈಸಲು ಯತ್ನಿಸಿದ್ದರು ಎನ್ನಲಾಗುತ್ತಿದೆ.

ಪುಲಿಕೇಶಿ ನಗರದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಡಿ.ಜೆ.ಹಳ್ಳಿ ವಾರ್ಡ್‌ನಲ್ಲಿ ಸಂಪತ್‌ ಹಾಗೂ ಪುಲಿಕೇಶಿನಗರ ವಾರ್ಡ್‌ ಅನ್ನು ಜಾಕೀರ್‌ ಹುಸೇನ್‌ ಪ್ರತಿನಿಧಿಸುತ್ತಿದ್ದಾರೆ. ಆದರೆ ರಾಜಕೀಯ ಕಾರಣಗಳಿಗೆ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರೊಂದಿಗೆ ಈ ಇಬ್ಬರಿಗೂ ಉತ್ತಮ ಬಾಂಧವ್ಯವಿಲ್ಲ. ಮೊದಲು ಜೆಡಿಎಸ್‌ನಲ್ಲಿದ್ದ ಅಖಂಡ ಶ್ರೀನಿವಾಸ್‌ ಮೂರ್ತಿ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರಿ ಎರಡನೇ ಬಾರಿ ಶಾಸಕರಾಗಿದ್ದಾರೆ. 

ಗಲಭೆ ಪೀಡಿತ ಪ್ರದೇಶಗಳಿಗೆ ಆಯುಕ್ತರ ಭೇಟಿ: ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ, ಪಂತ್‌

ಮೇಯರ್‌ ಆಗಿದ್ದ ಸಂಪತ್‌, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುಲಿಕೇಶಿ ನಗರದ ಟಿಕೆಟ್‌ ಬಯಸಿದ್ದರು. ಆದರೆ ಅಖಂಡ ಕಾಂಗ್ರೆಸ್‌ ಸೇರ್ಪಡೆಯಿಂದ ಸಂಪತ್‌ ಅವರಿಗೆ ಟಿಕೆಟ್‌ ತಪ್ಪಿತು. ಕೊನೆಗೆ ಒಲ್ಲದ ಮಸ್ಸಿನಿಂದ ಸಿ.ವಿ.ರಾಮನ್‌ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸಂಪತ್‌ ಸ್ಪರ್ಧಿಸಿ ಸೋತಿದ್ದರು. ಈಗ ಮುಂದಿನ ವಿಧಾನಸಭಾ ಚುನಾವಣೆಗೆ ಮತ್ತೆ ಟಿಕೆಟ್‌ ಪಡೆಯಲು ಸಂಪತ್‌ ಯತ್ನಿಸಿದ್ದಾರೆ. ಇದಕ್ಕೆ ಜಾಕೀರ್‌ ಸೇರಿದಂತೆ ಆ ಕ್ಷೇತ್ರದ ಇತರೆ ಮೂಲ ಕಾಂಗ್ರೆಸ್ಸಿಗರು ಬೆಂಬಲಿಸಿದ್ದರು. ಎಸ್‌ಡಿಪಿಐ ನಾಯಕರ ಒಲೈಕೆಗೆ ಸಂಪತ್‌ ಆಸಕ್ತಿ ವಹಿಸಿದ್ದರು ಎನ್ನಲಾಗಿದೆ.

ಮುಂಬರುವ ಬಿಬಿಎಂಪಿ ಚುನಾವಣೆ ಕಾರಣಕ್ಕೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ಜಾಕೀರ್‌, ಎಸ್‌ಡಿಪಿಐ ಬೆಂಬಲ ಪಡೆಯಲು ಮುಂದಾಗಿದ್ದರು. ಹೀಗಾಗಿ ಸ್ವಂತ ರಾಜಕೀಯ ಹಿತಾಸಕ್ತಿಗಳಿಗೆ ಎಸ್‌ಡಿಪಿಐ ಸಂಘಟನೆ ಜತೆ ಇಬ್ಬರಿಗೂ ಸ್ನೇಹವಿದೆ. ಆದರೆ ಗಲಭೆಗೂ ಈ ಸ್ನೇಹಕ್ಕೂ ಸಂಬಂಧವಿದೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಲಭೆಗೂ ನನಗೂ ಸಂಬಂಧವಿಲ್ಲ. ಸಿಸಿಬಿ ತನಿಖೆಗೆ ಸಹಕರಿಸಿದ್ದೇನೆ. ತನಿಖಾಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ. ಪ್ರಕರಣ ತನಿಖಾ ಹಂತದಲ್ಲಿದೆ. ಅದು ಪೂರ್ಣಗೊಂಡ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಡಿ.ಜೆ.ಹಳ್ಳಿ ವಾರ್ಡ್‌ ಸದಸ್ಯ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರು ತಿಳಿಸಿದ್ದಾರೆ.

ನನ್ನದು ಪುಲಿಕೇಶಿ ನಗರ ವಾರ್ಡ್‌. ಹಾಗಾಗಿ ಗಲಭೆಗೂ ನನಗೂ ಸಂಬಂಧವಿಲ್ಲ. ಆ ದಿನ ನಾನು ಮನೆಯಲ್ಲೇ ಇದ್ದೆ. ನನ್ನ ವಾರ್ಡ್‌ನಲ್ಲಿ ಶಾಸಕರ ಕಚೇರಿ ಇದೆ. ಯಾವುದೇ ತೊಂದರೆಯಾಗಿಲ್ಲ. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರೊಂದಿಗೆ ಆತ್ಮೀಯತೆ ಇದೆ. ನಮ್ಮ ನಡುವೆ ಮನಸ್ತಾಪವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪುಲಿಕೇಶಿ ನಗರ ವಾರ್ಡ್‌ ಬಿಬಿಎಂಪಿ ಸದಸ್ಯ ಎ.ಆರ್‌.ಜಾಕೀರ್‌ ಅವರು ಹೇಳಿದ್ದಾರೆ. 

ಸಂಪತ್‌ರಾಜ್‌ ಆಪ್ತ ಸಹಾಯಕ ಬಂಧನ

48 ತಾಸುಗಳ ಸುದೀರ್ಘ ವಿಚಾರಣೆ ಬಳಿಕ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಕಾಂಗ್ರೆಸ್‌ ಸದಸ್ಯ ಸಂಪತ್‌ ರಾಜ್‌ ಆಪ್ತ ಸಹಾಯಕನನ್ನು ಸಿಸಿಬಿ ಬುಧವಾರ ಬಂಧಿಸಿದೆ. ಗಲಭೆಯಲ್ಲಿ ದೊಂಬಿಕೋರರಿಗೆ ನೆರವು ನೀಡಿದ ಆರೋಪದ ಮೇರೆಗೆ ಸಂಪತ್‌ ಆಪ್ತ ಸಹಾಯಕ ಅರುಣ್‌ನನ್ನು ಸಿಸಿಬಿ ವಶಕ್ಕೆ ಪಡೆದಿತ್ತು. ಆಪ್ತನ ಬಂಧನ ಬೆನ್ನಲ್ಲೇ ಸಂಪತ್‌ಗೆ ಮತ್ತಷ್ಟು ಭೀತಿ ಎದುರಾಗಿದೆ.

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ಆ.11 ರಂದು ದೊಂಬಿಕೋರರಿಗೆ ಸಂಪತ್‌ ರಾಜ್‌ ಸೂಚನೆ ಮೇರೆಗೆ ಅರುಣ್‌ ನೆರವು ನೀಡಿದ್ದ. ಅಂದು ಗಲಭೆ ಮುನ್ನ ಹಾಗೂ ನಂತರ ಎಸ್‌ಡಿಪಿಐ ಮುಖಂಡರಾದ ಮುಜಾಮಿಲ್‌ ಪಾಷ, ಅಯಾಜ್‌ ಹಾಗೂ ಅಫ್ನಾನ್‌ ಸೇರಿದಂತೆ ಕೆಲವರ ಜತೆ ಮೊಬೈಲ್‌ನಲ್ಲಿ ಅರುಣ್‌ ನಿರಂತರ ಸಂಪರ್ಕದಲ್ಲಿದ್ದ. ಈ ಬಗ್ಗೆ ಆತನ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಖಚಿತ ಮಾಹಿತಿ ಸಿಕ್ಕಿತು. ಅಲ್ಲದೆ, ತಮ್ಮ ಮೇಲಿನ ದಾಳಿ ಹಿಂದೆ ಸಂಪತ್‌ ಹಾಗೂ ಆತನ ಆಪ್ತ ಸಹಾಯಕ ಅರುಣ್‌ ಇದ್ದರು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಶದಲ್ಲಿದ್ದ ಅರುಣ್‌ನನ್ನು ಬಂಧನ ಪ್ರಕ್ರಿಯೆಗೊಳಪಡಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.