Asianet Suvarna News Asianet Suvarna News

ಬಿಜೆಪಿ ಭೂಮಿ ಹಂಚಿಕೆ ಬಗ್ಗೆ ಮರುಪರಿಶೀಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ, ಚುನಾವಣೆಗೂ ಮುನ್ನ ತರಾತುರಿಯಲ್ಲಿ ಭೂ ಹಂಚಿಕೆ ಮಾಡಲಾದ ಎಲ್ಲ ಪ್ರಕರಣಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಕಂದಾಯ ಇಲಾಖೆ 2022ರ ಡಿಸೆಂಬರ್‌ನಿಂದ ಚುನಾವಣೆ ಘೋಷಣೆಯಾಗುವವರೆಗೆ ಸಂಘ-ಸಂಸ್ಥೆಗಳಿಗೆ ಭೂ ಮಂಜೂರಾತಿ ಮಾಡಿರುವ ಪಟ್ಟಿಯನ್ನು ಮಾಡಲಾಗುತ್ತದೆ. 

Government of Karnataka to Review BJP Land Allotment grg
Author
First Published Jun 10, 2023, 4:47 AM IST | Last Updated Jun 10, 2023, 4:47 AM IST

ಬೆಂಗಳೂರು(ಜೂ.10):  ಕಾಯ್ದೆಗಳ ಪರಿಶೀಲನೆ, ಟೆಂಡರ್‌ ರದ್ದು ಕ್ರಮಗಳ ನಂತರ ಬಿಜೆಪಿ ಸರ್ಕಾರದಲ್ಲಿ ಸಂಘ-ಸಂಸ್ಥೆಗಳಿಗೆ ಮಾಡಲಾಗಿರುವ ಭೂ ಹಂಚಿಕೆ ಕ್ರಮದ ಮರುಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ, ಚುನಾವಣೆಗೂ ಮುನ್ನ ತರಾತುರಿಯಲ್ಲಿ ಭೂ ಹಂಚಿಕೆ ಮಾಡಲಾದ ಎಲ್ಲ ಪ್ರಕರಣಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಕಂದಾಯ ಇಲಾಖೆ 2022ರ ಡಿಸೆಂಬರ್‌ನಿಂದ ಚುನಾವಣೆ ಘೋಷಣೆಯಾಗುವವರೆಗೆ ಸಂಘ-ಸಂಸ್ಥೆಗಳಿಗೆ ಭೂ ಮಂಜೂರಾತಿ ಮಾಡಿರುವ ಪಟ್ಟಿಯನ್ನು ಮಾಡಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ವಿಷಯ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಿಂದ ಕಳೆದ ಆರು ತಿಂಗಳಲ್ಲಿ ಆದ ಭೂ ಮಂಜೂರಾತಿ ಆದೇಶಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅದಕ್ಕಾಗಿ 2022ರ ಡಿಸೆಂಬರ್‌ನಿಂದೀಚೆಗೆ ಸಂಘ-ಸಂಸ್ಥೆಗಳು ಭೂ ಮಂಜೂರು ಮಾಡಿರುವುದನ್ನು ಪರಿಶೀಲಿಸಲಾಗುತ್ತಿದೆ. ಭೂಮಿ ಮಂಜೂರಾತಿ ನ್ಯಾಯ ಸಮ್ಮತವಾಗಿದೆಯೇ ಎಂಬುದನ್ನು ತಿಳಿಯಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಸುಧಾಕರ್ ನಿಂದಾಗಿಯೇ ನಾನು ಸೋತಿದ್ದು, ತಾವೂ ಸೋತು, ನಮ್ಮನ್ನೂ‌‌ ಸೋಲಿಸಿದ್ರು: ಎಂಟಿಬಿ ಫುಲ್ ಗರಂ

ಭೂಮಿ ಪಡೆದ ಯಾವುದೇ ಸಂಘಟನೆಯಾಗಿರಲಿ. ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು. ಜತೆಗೆ ಭೂಮಿ ಪಡೆಯಲು ಅವರು ಅರ್ಹರೇ ಎಂಬುದನ್ನೂ ನೋಡಲಾಗುವುದು. ಸರಿಯಾದ ಉದ್ದೇಶಕ್ಕೆ ಬಳಸಿದರೆ ಸರ್ಕಾರದಿಂದ ಯಾವುದೇ ತಕರಾರು ಇರುವುದಿಲ್ಲ. ಅದನ್ನು ಹೊರತುಪಡಿಸಿ ದುರುದ್ದೇಶಕ್ಕಾಗಿ ಭೂಮಿಯನ್ನು ಬಳಸುತ್ತಿದ್ದರೆ ಅದನ್ನು ಹಿಂಪಡೆಯುವುದು ಸೇರಿ ಬೇರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ, ಎಲ್ಲವನ್ನೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಶಿಕ್ಷಣ ಕಾರ್ಯಗಳಿಗೆ ಭೂಮಿ ಪಡೆದಿದ್ದರೆ ಯಾವುದೇ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡುವುದು ನಮ್ಮ ಉದ್ದೇಶವಲ್ಲ. ಅದಕ್ಕಾಗಿ ಕೇವಲ ಆರು ತಿಂಗಳ ಹಿಂದಿನ ಭೂ ಮಂಜೂರಾತಿಯನ್ನು ಪರಿಶೀಲಿಸಲಾಗುತ್ತಿದೆ. ಅದಕ್ಕಿಂತ ಹಿಂದನದ್ದೆಲ್ಲ ಕೆದಕುವುದಿಲ್ಲ. ಅಲ್ಲದೆ, ಚುನಾವಣೆ ಘೋಷಣೆಯಾದ ನಂತರವೂ ಸರ್ಕಾರ ಕೆಲವೊಂದು ಸಂಘ-ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಲು ಮುಂದಾಗಿದ್ದು ಕಂಡು ಬಂದಿದೆ. ಆದರೆ, ಅದನ್ನು ಅಧಿಕಾರಿಗಳ ಹಂತದಲ್ಲೇ ತಡೆಯಲಾಗಿದೆ ಎಂದು ವಿವರಿಸಿದರು.

ಕಲ​ಬು​ರ​ಗಿಗೆ ಏಮ್ಸ್‌: ಶ​ರಣ ಪ್ರಕಾಶ ಹೇಳಿ​ಕೆಗೆ ರಾಯಚೂರು ಜಿಲ್ಲೆಯಲ್ಲಿ ತೀವ್ರ ವಿರೋಧ

ಆ್ಯಂಬುಲೆನ್ಸ್‌, ಡಯಾಲಿಸಿಸ್‌ ಕೇಂದ್ರಕ್ಕೆ ಹೊಸ ಗುತ್ತಿಗೆದಾರರು

ಬೆಂಗಳೂರು: ರಾಜ್ಯದ 108 ಆ್ಯಂಬುಲೆನ್ಸ್‌ ಸೇವೆಯಲ್ಲಿ ಬದಲಾವಣೆ ತರಲು ಹಾಗೂ ಡಯಾಲಿಸಿಸ್‌ ಕೇಂದ್ರಗಳ ಅವ್ಯವಸ್ಥೆ ಸರಿಪಡಿಸಲು ಸದ್ಯ ಇರುವ ಗುತ್ತಿಗೆಯನ್ನು ರದ್ದು ಮಾಡಿ, ಹೊಸ ಗುತ್ತಿಗೆದಾರರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಗ್ಯ ಇಲಾಖೆ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. 108 ಆ್ಯಂಬುಲೆನ್ಸ್‌ ಸೇವೆಯ ಗುತ್ತಿಗೆಯನ್ನು ರದ್ದು ಮಾಡಲಾಗಿದೆ. ಶೀಘ್ರದಲ್ಲಿ ಹೊಸ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. ಅದೇ ರೀತಿ ಸರ್ಕಾರಿ ಡಯಾಲಿಸಿಸ್‌ ಕೇಂದ್ರಗಳಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಅವುಗಳ ನಿರ್ವಹಣೆಗಾಗಿ ಹೊಸ ಗುತ್ತಿಗೆದಾರರನ್ನು ನೇಮಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಎಲ್ಲ ವ್ಯವಸ್ಥೆಗಳನ್ನು ಸರಿಯಾದ ದಾರಿಗೆ ತರಬೇಕಿದ್ದು, ಆ ಕೆಲಸ ಮಾಡಲಾಗುವುದು ಎಂದರು.

Latest Videos
Follow Us:
Download App:
  • android
  • ios