Asianet Suvarna News Asianet Suvarna News

ಜಿಂದಾಲ್‌ಗೆ ಭೂಮಿ ಕೊಡುವಲ್ಲಿ ಸರ್ಕಾರದ್ದು ಎಳ್ಳಷ್ಟೂ ತಪ್ಪಿಲ್ಲ: ಎಂ. ಬಿ. ಪಾಟೀಲ

ಜಿಂದಾಲ್ ಉಕ್ಕು ಕಂಪನಿಗೆ 3,677 ಎಕರೆ ಭೂಮಿಯನ್ನು ಕಾನೂನಿಗೆ ಅನುಸಾರವಾಗಿ ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ ಮತ್ತು ಈ ವಿಚಾರದಲ್ಲಿ ಸರಕಾರದ್ದು ಯಾವುದೇ ತಪ್ಪಿಲ್ಲ ಎಂದು ಸಚಿವ ಎಂ‌. ಬಿ. ಪಾಟೀಲ ಸಮರ್ಥಿಸಿಕೊಂಡಿದ್ದಾರೆ.

Government nothing wrong with allotting land to Jindal factory says MB Patil sat
Author
First Published Aug 23, 2024, 3:44 PM IST | Last Updated Aug 23, 2024, 3:44 PM IST

ಬೆಂಗಳೂರು (ಆ.23): ಜಿಂದಾಲ್ ಉಕ್ಕು ಕಂಪನಿಗೆ ಕೋರ್ಟ್ ನಿರ್ದೇಶನ ಮತ್ತು ಅದನ್ನು ಅನುಸರಿಸಿ ಹೊರಡಿಸಿದ ಸರಕಾರಿ ಆದೇಶ ಹಾಗೂ ಸಂಪುಟ ಸಭೆಯ ನಿರ್ಣಯದಂತೆಯೇ ಕಾನೂನಿಗೆ ಅನುಸಾರವಾಗಿ 3,677 ಎಕರೆ ಭೂಮಿಯನ್ನು ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ್ದು ಎಳ್ಳಷ್ಟೂ ತಪ್ಪಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ‌. ಬಿ. ಪಾಟೀಲ ಶುಕ್ರವಾರ ಇಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಖಾನೆ ಹೊಂದಿರುವ ಜಿಂದಾಲ್ ಕಂಪನಿಗೆ ನಾವೇನೂ ರಿಯಾಯಿತಿ ಕೊಟ್ಟಿಲ್ಲ. ಮಾರುಕಟ್ಟೆ ಬೆಲೆ ಹಿಂದೆ ಏನಿದೆಯೋ ಅದನ್ನು ನಿಗದಿಪಡಿಸಿದ್ದೇವೆ. ಕಂಪನಿ ಕೂಡ ಸರಕಾರದ ಷರತ್ತುಗಳನ್ನು ಪಾಲಿಸಿದೆ. ರಾಜ್ಯದಲ್ಲಿ ಇರುವ ಒಂದು ಲಕ್ಷ ಕೈಗಾರಿಕೆಗಳಿಗೆ ಯಾವ ನಿಯಮ ಹೇಳಿದ್ದೇವೋ ಅದನ್ನೇ ಜಿಂದಾಲ್ ಗೂ ಅನ್ವಯಿಸಲಾಗಿದೆ. ವಾಸ್ತವವಾಗಿ ಒಂಬತ್ತು ವರ್ಷಗಳ‌ ಕಾಲ ಇದನ್ನು ವೃಥಾ ಎಳೆದಾಡಿದ್ದೇವೆ' ಎಂದಿದ್ದಾರೆ.

ರಾಜ್ಯಪಾಲರ ನಡೆ ಚರ್ಚೆಗೆ ಸಿಎಂ, ಅಧ್ಯಕ್ಷರಿಗೆ ಮಾತ್ರ ಬುಲಾವ್: ಸಚಿವರಿಗಿಲ್ಲ ಆಹ್ವಾನ!

ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಜಿಂದಾಲ್ ರಾಜ್ಯದಲ್ಲಿ 90 ಸಾವಿರ ಕೋಟಿ ರೂಪಾಯಿ ಹೂಡಿದ್ದು, 50 ಸಾವಿರ ಉದ್ಯೋಗ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಕಡೆಯಿಂದ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗಬಾರದು. ಸರಕಾರವು ಉದ್ಯಮಿಗಳಿಗೆ ಜಮೀನು ಕೊಡುತ್ತದೆ. ಅದರಲ್ಲಿ ಹತ್ತು ವರ್ಷಗಳಲ್ಲಿ ಶೇ 51ರಷ್ಟು ಭೂಮಿಯನ್ನು ಅವರು ಬಳಸಿಕೊಂಡು, ಕಂಪನಿಯನ್ನು ಸಕ್ರಿಯವಾಗಿ ಇಟ್ಟಿರಬೇಕು. ಆಗ ಕೈಗಾರಿಕಾ ನೀತಿಯಂತೆ ಗುತ್ತಿಗೆ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಜಿಂದಾಲ್ ಎಲ್ಲೂ ಎಡವಿಲ್ಲ ಎಂದರು.

ನಾವು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಂದ ಕೈಗಾರಿಕಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಎದುರಿಸುತ್ತಿದ್ದೇವೆ. ಎಷ್ಟೋ ರಾಜ್ಯಗಳು ಉದ್ದಿಮೆಗಳಿಗೆ ಉಚಿತವಾಗಿ ಭೂಮಿ ಕೊಡುತ್ತಿವೆ. ಹಿಂದೆ ಜಿಂದಾಲ್ ಕಂಪನಿಗೆ ಭೂಮಿಯನ್ನು ಲೀಸ್ ಕಂ ಸೇಲ್ ಮಾಡಲು ಕೆಲವರು ಯಾಕೆ ವಿರೋಧಿಸಿದರೋ ಗೊತ್ತಿಲ್ಲ. ಹಿಂದೆ ನಾವು ಜಿಂದಾಲ್ ವಿರುದ್ಧವೇನೂ ಪ್ರತಿಭಟಿಸಿಲ್ಲ. ಆಗ ನಾವು ಜನಾರ್ದನ ರೆಡ್ಡಿ ವಿರುದ್ಧವಷ್ಟೇ ದನಿ ಎತ್ತಿದ್ದೆವು. ಜತೆಗೆ ಈಗ ಜಿಂದಾಲ್ ಗೆ ಕೊಡುತ್ತಿರುವ ಭೂಮಿಯಲ್ಲಿ ಗಣಿಗಾರಿಕೆಯೇನೂ ನಡೆಯುತ್ತಿರಲಿಲ್ಲ ಎಂದು ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ!

ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ: ಮುಡಾ ಹಗರಣದ ವಿಚಾರದಲ್ಲಿ ರಾಜ್ಯಪಾಲರು ಸ್ವಂತ ವಿವೇಚನೆಯಿಂದ ನಡೆದುಕೊಂಡಿಲ್ಲ. ರಾಜಭವನ ಈಗ ಬಿಜೆಪಿ ಕಚೇರಿಯಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪೇನೂ ಇಲ್ಲ. ಮುಡಾ ಹಗರಣದ ನೆಪದಲ್ಲಿ ಸರಕಾರವನ್ನು ಉರುಳಿಸಲು ಬಿಜೆಪಿ ಮತ್ತು ಜೆಡಿಎಸ್ ನೋಡುತ್ತಿವೆ. ಆದರೆ ಅವರು ತಲೆ ಕೆಳಗೆ ಮಾಡಿಕೊಂಡು ನಿಂತರೂ ಅದು ಸಾಧ್ಯವಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ಕೆಲವು ಸಲಹೆ ಸೂಚನೆ ನೀಡಲಿದೆ. ಟಿ ಜೆ ಅಬ್ರಹಾಂ ನೀಡಿದ ದೂರಿನ ಮೇರೆಗೆ ತರಾತುರಿಯಲ್ಲಿ ಕ್ರಮ ಕೈಗೊಂಡ ರಾಜ್ಯಪಾಲರು, ಶಶಿಕಲಾ‌ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಮತ್ತು ಎಚ್ ಡಿ ಕುಮಾರಸ್ವಾಮಿ ವಿಚಾರದಲ್ಲಿ ವರ್ಷಗಳೇ ಉರುಳಿದರೂ ಏಕೆ ಸುಮ್ಮನಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ಕಿಡಿಕಾರಿದರು.

Latest Videos
Follow Us:
Download App:
  • android
  • ios