Asianet Suvarna News Asianet Suvarna News

ಸರ್ಕಾರಿ ನೌಕರರು 1 ತಾಸು ಹೆಚ್ಚು ಕೆಲಸ ಮಾಡಿ: ಸಿಎಂ ಬೊಮ್ಮಾಯಿ

1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗಾಗಿ ಶ್ರಮಿಸಲು ಕರೆ, 7ನೇ ವೇತನ ಆಯೋಗ ರಚಿಸಿದ್ದಕ್ಕೆ ಸಿಎಂಗೆ ನೌಕರರ ಅಭಿನಂದನೆ

Government Employees Should be Work 1 Hour More says CM Basavaraj Bommai grg
Author
First Published Nov 11, 2022, 3:55 AM IST

ಬೆಂಗಳೂರು(ನ.11):  ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡುವಂತೆ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಗುರುವಾರ ರೇಸ್‌ಕೋರ್ಸ್‌ ರಸ್ತೆಯಲ್ಲಿನ ನಿವಾಸದಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರ ನಿಯೋಗವು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಎಲ್ಲರೂ ಒಂದಾಗಿ ಸುಭಿಕ್ಷ ನಾಡನ್ನು ಕಟ್ಟೋಣ. ಪ್ರಾಮಾಣಿಕತೆ, ನಿಷ್ಠೆ ಮತ್ತು ಕರ್ತವ್ಯ ಪ್ರಜ್ಞೆಯಿಂದ ಒಂದು ಟ್ರಿಲಿಯನ್‌ ಡಾಲರ್‌ ಕೊಡುಗೆ ನೀಡಬೇಕು. ಕರ್ನಾಟಕ ವೇತನ ಆಯೋಗವನ್ನು ಐದು ವರ್ಷವಾದ ತಕ್ಷಣ ಘೋಷಣೆಯಾಗಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದರು.

ಸರ್ಕಾರಿ ಉದ್ಯೋಗಿಗಳೇ ಗಮನಿಸಿ, 7ನೇ ವೇತನ ಆಯೋಗದಡಿಯಲ್ಲಿ ದೊರೆತ ಸಂಬಳ ಬಾಕಿಗಿದೆ ತೆರಿಗೆ ಪರಿಹಾರ

ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತದೆ. ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ಇರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಹ ಇದಕ್ಕೆ ಒತ್ತಾಸೆಯಾಗಿದ್ದರು. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಕೂಡ ಒತ್ತಾಯಿಸಿದ್ದರು ಎಂದು ತಿಳಿಸಿದರು.

ನ್ಯಾಯಸಮ್ಮತ ವರದಿ:

ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಯಾಗಿದ್ದ ಡಾ.ಸುಧಾಕರ್‌ ರಾವ್‌ ದಕ್ಷತೆಯಿಂದ ಕೆಲಸ ಮಾಡಿದವರು. ಪ್ರಭಾವಕ್ಕೆ ಮಣಿಯದವರು. ನ್ಯಾಯಸಮ್ಮತವಾದ 7ನೇ ವೇತನ ಆಯೋಗದ ವರದಿ ಬರಲಿ ಎಂದು ಶುದ್ದಹಸ್ತ, ಶುದ್ಧ ಅಂತಃಕರಣವುಳ್ಳ ಸುಧಾಕರ್‌ರಾವ್‌ ಅವರ ಆಯ್ಕೆಯಾಗಿದೆ. ಇದಕ್ಕೆ ನೌಕರರ ಸಹಕಾರ ಸಹ ಅಗತ್ಯ. ಇದನ್ನು ಸಕಾರಗೊಳಿಸಿ ಎಲ್ಲರಿಗೂ ಒಳ್ಳೆಯದಾಗಬೇಕು. ಚಿಂತೆ ಮಾಡುವ ಅಗತ್ಯ ಇಲ್ಲ. ಮುಂದಿನ ಸರ್ಕಾರ ನಮ್ಮದೇ ಬರಲಿದ್ದು, ಇದರ ಅನುಷ್ಠಾನ ನಾವೇ ಮಾಡುತ್ತೇವೆ ಎಂದರು.

ಇದೇ ವೇಳೆ ನ್ಯಾಯಸಮ್ಮತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂಬ ತೀರ್ಮಾನ ಮಾಡಲಾಗಿದೆ. ಕೇಂದ್ರ ಸರ್ಕಾರ ದೈನಂದಿನ ಭತ್ಯೆ (ಡಿಎ) ಘೋಷಿಸಿದ 24 ಗಂಟೆಯೊಳಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಮತ್ತೊಂದು ಡಿಎ ಕೇಂದ್ರ ಸರ್ಕಾರ ಬೆಳಗ್ಗೆ ಘೋಷಣೆ ಮಾಡಿದರೆ ಸಂಜೆ ರಾಜ್ಯದಲ್ಲಿ ಆದೇಶ ಹೊರಡಿಸಲಾಯಿತು ಎಂದು ಮಾಹಿತಿ ನೀಡಿದರು.
 

Follow Us:
Download App:
  • android
  • ios