* ಕಾಯ್ದೆ ತಿದ್ದುಪಡಿಯಿಂದ ರೈತರಿಗೂ, ಎಪಿಎಂಸಿಗಳಿಗೂ ಅನುಕೂಲ* ಎಪಿಎಂಸಿಗಳು ಮುಚ್ಚುತ್ತಿವೆ ಎಂಬ ಖರ್ಗೆ ಆರೋಪಕ್ಕೆ ಪ್ರತಿಕ್ರಿಯೆ* ಯಾವ ಎಪಿಎಂಸಿಯಲ್ಲಿ ಹಣಕಾಸು ಇಲ್ಲದಿದ್ದರೂ ಸರ್ಕಾರದಿಂದಲೇ ನೀಡಲಾಗುವುದು
ಬೆಂಗಳೂರು(ಮಾ.19): ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ(Farmers) ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿದೆ. ತಿದ್ದುಪಡಿಯಿಂದ ಎಪಿಎಂಸಿಗಳಿಗೆ ಆರ್ಥಿಕ ಸಂಕಷ್ಟ ಎದುರಾದರೆ ಸರ್ಕಾರದಿಂದಲೇ ಅನುದಾನ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್(ST Somashekhar) ಹೇಳಿದರು.
ಬಜೆಟ್(Karnataka Budget) ಚರ್ಚೆಯ ವೇಳೆ ಕಾಂಗ್ರೆಸ್(Congress) ಸದಸ್ಯ ಪ್ರಿಯಾಂಕ್ ಖರ್ಗೆ(Priyank Kharge) ಅವರು ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ(Amendment of the APMC Act) ಎಪಿಎಂಸಿಗಳು(APMC) ಮುಚ್ಚುತ್ತಿವೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಮೊದಲಿಗೆ ಎಪಿಎಂಸಿ ಹೊರಗಡೆ ತಮ್ಮ ಬೆಳೆ ಮಾರಾಟ ಮಾಡಿದರೆ ರೈತರು ದಂಡ ಪಾವತಿಸಬೇಕಾಗಿತ್ತು. ಈ ರೀತಿ ಎರಡು ವರ್ಷದಲ್ಲಿ 25 ಕೋಟಿ ರು. ದಂಡವನ್ನು ರೈತರು ಪಾವತಿಸಿದ್ದಾರೆ. ಹೀಗಾಗಿ 157 ಎಪಿಎಂಸಿಗಳಲ್ಲಿ ಅಥವಾ ಹೊರಗಡೆಯಾದರೂ ಮಾರಾಟ ಮಾಡಲು ಅವಕಾಶ ನೀಡಲು ತಿದ್ದುಪಡಿ ಮಾಡಲಾಗಿದೆ. ಯಾವ ಎಪಿಎಂಸಿಯಲ್ಲಿ ಹಣಕಾಸು ಇಲ್ಲದಿದ್ದರೂ ಸರ್ಕಾರದಿಂದಲೇ ನೀಡಲಾಗುವುದು, ಯಾವ ಎಪಿಎಂಸಿಯನ್ನೂ ಮುಚ್ಚಲ್ಲ ಎಂದರು.
DCC Bank Scam: 15 ದಿನದಲ್ಲಿ ತನಿಖೆ ಪೂರ್ಣ: ಸಚಿವ ಸೋಮಶೇಖರ್
ಇದಕ್ಕೂ ಮುನ್ನ ಜೆಡಿಎಸ್(JDS) ಸದಸ್ಯ ನಾಡಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ(BS Yediyurappa), ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ರೈತರು ತಮ್ಮ ಬೆಳೆಯನ್ನು ಸೂಕ್ತ ಬೆಳೆ ದೊರಕುವವರೆಗೂ ಇಟ್ಟುಕೊಳ್ಳದೆ ಆರ್ಥಿಕ ಅಗತ್ಯಗಳಿಗಾಗಿ ಬೇಗ ಮಾರುತ್ತಿದ್ದಾರೆ. ರೈತರು ಎಪಿಎಂಸಿಗಳ ಸದುಪಯೋಗ ಪಡೆಯಬೇಕು. ಅಗತ್ಯವಿದ್ದರೆ ಇನ್ನೂ ಹೆಚ್ಚು ಎಪಿಎಂಸಿ ತೆಗೆಯೋಣ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರಿಯಾಂಕ್ ಖರ್ಗೆ, ಯಡಿಯೂರಪ್ಪ ಅವರ ಅನುಭವದಷ್ಟು ನನಗೆ ವಯಸ್ಸಾಗಿಲ್ಲ. ಆದರೂ ಅವರ ನಡೆ ಮತ್ತು ನುಡಿಗೆ ಅಜಗಜಾಂತರ ಅಂತರ ಇದೆ. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಎಪಿಎಂಸಿಗಳು ಮುಚ್ಚಿ ಹೋಗುತ್ತಿವೆ. ಎಪಿಎಂಸಿಗಳಿಗೆ ರೈತರು ಹೋಗದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಖಾಸಗಿ ಕಂಪನಿಯೊಂದು ರೈತರಿಗೆ 40 ಲಕ್ಷ ರು. ವಂಚಿಸಿರುವ ಪ್ರಕರಣ ಇತ್ತೀಚೆಗೆ ವರದಿಯಾಗಿದೆ. ಇದನ್ನು ತಪ್ಪಿಸಲು ಮೊದಲು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿದರು.
APMC ತಿದ್ದುಪಡಿ ವಾಪಸ್ ಪ್ರಶ್ನೆಯೇ ಇಲ್ಲ: ಸಚಿವ ಸೋಮಶೇಖರ್
ಈಗಾಗಲೇ 30 ಎಪಿಎಂಸಿಗಳು ನಷ್ಟದಲ್ಲಿವೆ. 600-700 ಕೋಟಿ ರು. ವ್ಯವಹಾರ ನಡೆಸುತ್ತಿದ್ದ ಎಪಿಎಂಸಿಗಳು 100 ಕೋಟಿ ರು.ಗಳಿಗೆ ಬಂದು ನಿಂತಿವೆ. ಹೀಗಾಗಿ ರೈತ ವಿರೋಧಿ ಕಾನೂನು ಹಿಂಪಡೆಯಬೇಕು ಎಂದು ಸಲಹೆ ನೀಡಿದರು.
ಸಹಕಾರಿ ಸಾಲ ಮರುಪಾವತಿ ವಿಸ್ತರಣೆ:
ಬೆಂಗಳೂರು: ಕೋವಿಡ್(Covid-19) ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್ 1ರಿಂದ ಜೂನ್ 30ರ ಅವಧಿಯಲ್ಲಿ ಮರು ಪಾವತಿಗೆ ಬರುವ ಸಾಲದ(Loan) ಕಂತುಗಳನ್ನು ಪಾವತಿಸುವ ಅವಧಿಯನ್ನು ಈ ವರ್ಷದ ಜೂನ್ 1ರವರೆಗೆ ವಿಸ್ತರಿಸಲಾಗಿದೆ. ಸಂಬಂಧಿಸಿದ 134 ಕೋಟಿ ರು. ಬಡ್ಡಿ ಸಹಾಯಧನವನ್ನು ಸರ್ಕಾರ ಭರಿಸುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದರು.
ಬಿಜೆಪಿಯ(BJP) ಪಿ.ಎಂ. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊರೋನಾ(Coronavirus) ಮೊದಲ ಎರಡು ಅಲೆಯಲ್ಲಿ ಮೃತಪಟ್ಟ ರೈತರ(Farmers) ಪೈಕಿ 10437 ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್), ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು (ಡಿಸಿಸಿ) ಮತ್ತು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ (ಪಿಕಾರ್ಡ್)ಗಳಲ್ಲಿ ಸಾಲ ಪಡೆದಿರುತ್ತಾರೆ. ಈ ಎಲ್ಲ ರೈತರಿಗೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ(Government of Karnataka) ಒಟ್ಟು ತಲಾ 1.50 ಲಕ್ಷ ರು. ನೆರವು ನೀಡಲಾಗಿದೆ. ಇದರ ಜೊತೆಗೆ ಡಿಸಿಸಿ ಬ್ಯಾಂಕುಗಳು ಸಹ ತಮ್ಮ ಲಾಭಾಂಶದಲ್ಲಿ ಪರಿಹಾರ(Compensation) ನೀಡುವಂತೆ ಮೌಖಿಕವಾಗಿ ತಿಳಿಸಲಾಗಿದೆ. ಈಗಾಗಲೇ ತುಮಕೂರು ಡಿಸಿಸಿ ಬ್ಯಾಂಕ್ 326 ಜನರಿಗೆ 1.99 ಕೋಟಿ ರು., ಮತ್ತು ವಿಜಯನಗರ ಡಿಸಿಸಿ ಬ್ಯಾಂಕು 755 ರೈತರಿಗೆ 7.03 ಕೋಟಿ ರು. ಪರಿಹಾರವನ್ನು ನೀಡಿವೆ ಎಂದು ವಿವರವಾದ ಮಾಹಿತಿ ನೀಡಿದ್ದರು.
