Asianet Suvarna News Asianet Suvarna News

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆ: ಡೋಣಿ ನದಿಯಲ್ಲಿ ಪ್ರವಾಹದ ಸ್ಥಿತಿ

ಮುಂಗಾರು ಮಳೆ ನಿಧಾನವಾಗಿ ರಾಜ್ಯಾದ್ಯಂತ ಆವರಿಸುತ್ತಿದ್ದು, ಶನಿವಾರ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಳಗಾವಿ, ಬೆಂಗಳೂರು, ಧಾರವಾಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗದಗ, ಬಳ್ಳಾರಿ, ಹಾವೇರಿ, ಬೀದರ್‌, ಚಿಕ್ಕಮಗಳೂರು, ಕೊಡಗು ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. 
 

Good rains in more than 12 districts of the state flood situation in river Doni gvd
Author
First Published Jun 9, 2024, 8:13 AM IST

ಬೆಂಗಳೂರು (ಜೂ.09): ಮುಂಗಾರು ಮಳೆ ನಿಧಾನವಾಗಿ ರಾಜ್ಯಾದ್ಯಂತ ಆವರಿಸುತ್ತಿದ್ದು, ಶನಿವಾರ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಳಗಾವಿ, ಬೆಂಗಳೂರು, ಧಾರವಾಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗದಗ, ಬಳ್ಳಾರಿ, ಹಾವೇರಿ, ಬೀದರ್‌, ಚಿಕ್ಕಮಗಳೂರು, ಕೊಡಗು ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಕರಾವಳಿಯಲ್ಲೂ ಮಳೆ ಅಬ್ಬರಿಸುತ್ತಿದ್ದು, ಶನಿವಾರ ಉತ್ತಮ ಮಳೆಯಾಗಿದೆ. ಭಾನುವಾರ ಹಾಗೂ ಸೋಮವಾರ ಈ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಭಟ್ಕಳ, ಮುಂಡಗೋಡ ಮತ್ತಿತರ ಕಡೆ ಶುಕ್ರವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದ್ದು, ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.

ದ.ಕ.ಜಿಲ್ಲೆಯಲ್ಲಿ ಸಮುದ್ರ ತೀರ ಪ್ರಕ್ಷುಬ್ದಗೊಳ್ಳುವ ಸೂಚನೆ ಕಾಣಿಸಿಕೊಂಡಿದ್ದು, ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಭಾರೀ ಗಾಳಿಯ ವೇಗಕ್ಕೆ ಅಲೆಗಳು ಅಬ್ಬರಿಸುತ್ತಿದ್ದು, ತೀರದ ನಿವಾಸಿಗಳು ಕಡಲ್ಕೊರೆತದ ಭೀತಿಯಲ್ಲಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ತಗ್ಗು ಪ್ರದೇಶಗಳಲ್ಲಿನ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಕಾಲುವೆ, ಹಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ತುಂಗಾ ನದಿಯಲ್ಲೂ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ.

ಘಟಾನುಘಟಿಗಳ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ: ಲೀಡ್ ಕೊಡಿಸದ ಸಚಿವರ ಮೇಲೆ ಕ್ರಮ ಆಗುತ್ತಾ?

ಡೋಣಿ ನದಿಯಲ್ಲಿ ಪ್ರವಾಹದ ಸ್ಥಿತಿ: ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ವಿವಿಧೆಡೆ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕೆಳಹಂತದ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಮನಗೂಳಿ-ದೇವಾಪೂರ ರಾಜ್ಯ ಹೆದ್ದಾರಿ ರಸ್ತೆ ಪ್ರವಾಹಕ್ಕೆ ಸಂಪೂರ್ಣ ಜಲಾವೃತಗೊಂಡಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ದೇವರಹಿಪ್ಪರಗಿ ಪಟ್ಟಣ ಹಾಗೂ ಯಾಳವಾರ ಗ್ರಾಮದ ಬಳಿ ಇರುವ ಬ್ರಿಡ್ಜ್‌ ಕಂ ಬ್ಯಾರೇಜ್‌ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.     

ಮೀನುಗಾರರಿಗೆ ಮುನ್ನಚ್ಚರಿಕೆ: ಮುಂದಿನ ನಾಲ್ಕು ದಿನಗಳಲ್ಲಿ ಕರ್ನಾಟಕ ಕರಾವಳಿಯಾದ್ಯಂತ ಸಮುದ್ರದ ಮೇಲಿನಿಂದ ಭಾರಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದಿನಿಂದ ಜೂನ್‌ 12ರ ವರೆಗೆ ಕರಾವಳಿಯುದ್ದಕ್ಕೂ ಗಂಟೆಗೆ 35ರಿಂದ 55 ಕಿ.ಮೀ.ವರೆಗೆ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಳೆಗಳು ಕಾಣಿಸಿಕೊಳ್ಳುವ ಸಂಭವ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ವಾಲ್ಮೀಕಿ ನಿಗಮ ಕೇಸ್‌ ತನಿಖೆಗೆ ಸಿಬಿಐನಿಂದ ಪತ್ರ ಬಂದಿಲ್ಲ: ಸಚಿವ ಪರಮೇಶ್ವರ್‌

7 ಮನೆಗಳಿಗೆ ಹಾನಿ: ಶುಕ್ರವಾರ ರಾತ್ರಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಸುಮಾರು 7 ಮನೆಗಳಿಗೆ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಲಕ್ಷ್ಮೀ ಮಡಿವಾಳ ಅವರ ಮನೆಗೆ ಗಾಳಿಯಿಂದ 25,000 ರು., ಕಮಲಶಿಲೆ ಗ್ರಾಮದ ರುಕ್ಕು ದೇವಾಡಿಗ ಅವರ ಮನೆಗೆ ಸಿಡಿಲು ಬಡಿದು 20,000 ರು., ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕರುಣಾಕರ ಶೆಟ್ಟಿ ಅವರ ಮನೆ ಮತ್ತು ಜಾನುವಾರ ಕೊಟ್ಟಿಗೆಗೆ 20,000 ರು., ಮೀಯಾರು ಗ್ರಾಮದ ಜನಾರ್ದನ ಭಟ್ ಅವರ ಮನೆ ಮೇಲೆ ಮರ ಬಿದ್ದು 10,000 ರು., ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಸಾಧಮ್ಮ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 75,000 ರು., ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಜಾನಕಿ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು 25,000 ರು. ಮತ್ತು ಮೂಡುಬೆಟ್ಟು ಗ್ರಾಮದ ಗೌರಿ ಅವರ ಮನೆ ಮೇಲೆ ಮರ ಬಿದ್ದು 10 ಸಾವಿರ ರು.ಗಳಷ್ಟು ನಷ್ಟವಾಗಿದೆ.

Latest Videos
Follow Us:
Download App:
  • android
  • ios