ಘಟಾನುಘಟಿಗಳ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ: ಲೀಡ್ ಕೊಡಿಸದ ಸಚಿವರ ಮೇಲೆ ಕ್ರಮ ಆಗುತ್ತಾ?
ಲೋಕಸಭೆ ಚುನಾವಣೆಯಲ್ಲಿ ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲೀಡ್ ಕೊಡಿಸಲು ವಿಫಲರಾಗಿ ರಾಹುಲ್ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾದ ಕೆಲವು ಸಚಿವರು ತಮ್ಮ ಪತ್ನಿ, ಪುತ್ರ ಹಾಗೂ ಸಂಬಂಧಿಕರೇ ಸ್ಪರ್ಧಿಸಿದ್ದರೂ ಅವರಿಗೆ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ.
ಬೆಂಗಳೂರು (ಜೂ.09): ಲೋಕಸಭೆ ಚುನಾವಣೆಯಲ್ಲಿ ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಲೀಡ್ ಕೊಡಿಸಲು ವಿಫಲರಾಗಿ ರಾಹುಲ್ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾದ ಕೆಲವು ಸಚಿವರು ತಮ್ಮ ಪತ್ನಿ, ಪುತ್ರ ಹಾಗೂ ಸಂಬಂಧಿಕರೇ ಸ್ಪರ್ಧಿಸಿದ್ದರೂ ಅವರಿಗೆ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಹೀಗೆ ಲೀಡ್ ಕೊಡಿಸದೆ ಇರುವವರಲ್ಲಿ ಅತ್ಯಂತ ಪ್ರಭಾವಿ ಸಚಿವರೇ ಹೆಚ್ಚಿದ್ದು, ಅವರ ಮೇಲೆ ಹೈಕಮಾಂಡ್ ನಿಜಕ್ಕೂ ಕ್ರಮ ಕೈಗೊಳ್ಳುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಸ್ವಂತ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಲೀಡ್ ಕೊಟ್ಟಿರುವ ಸಚಿವರ ಪೈಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮುಂದಿದ್ದಾರೆ.
ತಮ್ಮ ಮಗನನ್ನು ಬೆಳಗಾವಿ ಕ್ಷೇತ್ರದಿಂದ ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ ಕಣಕ್ಕಿಳಿಸಿದ್ದ ಅವರು ಸ್ವಂತ ಕ್ಷೇತ್ರವಾದ ಬೆಳಗಾವಿ ಗ್ರಾಮಾಂತರದಲ್ಲಿ ಬರೋಬ್ಬರಿ 50,529 ಮತಗಳ ಲೀಡ್ ಬಿಟ್ಟುಕೊಟ್ಟಿದ್ದಾರೆ. ಲಕ್ಷ್ಮೀ ಅವರ ಕ್ಷೇತ್ರದಲ್ಲಿ ಮೃಣಾಳ್ ಹೆಬ್ಬಾಳ್ಕರ್‌ಗೆ ಕೇವಲ 74,441 ಮತ ಬಂದಿದ್ದರೆ, ಜಗದೀಶ್ ಶೆಟ್ಟರ್ ಅವರಿಗೆ 1.24 ಲಕ್ಷ ಮತ ಬಂದಿದೆ. ತನ್ಮೂಲಕ ಸ್ವಂತ ಕ್ಷೇತ್ರದಲ್ಲಿ ಮಗನಿಗೆ ಹಿನ್ನಡೆಯಾಗುವಂತಾಗಿದೆ. ಇನ್ನು ದಾವಣಗೆರೆ ಉತ್ತರ ಶಾಸಕ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಅವರ ಕ್ಷೇತ್ರದಲ್ಲಿ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ವಿರುದ್ಧ 24,988 ಮತಗಳ ಹಿನ್ನಡೆ ಉಂಟಾಗಿದೆ.
ರಾಜ್ಯದಲ್ಲಿ ಸೋತಿರುವ ಲೋಕಸಭೆ ರಿಸಲ್ಟ್ ಬಗ್ಗೆ ವರದಿ ಕೇಳಿದ ರಾಹುಲ್ ಗಾಂಧಿ
ಅದೇ ರೀತಿ ಬೆಂಗಳೂರು ದಕ್ಷಿಣದಿಂದ ಪುತ್ರಿ ಸೌಮ್ಯಾರೆಡ್ಡಿ ಅವರನ್ನು ಕಣಕ್ಕಿಳಿಸಿದ್ದ ರಾಮಲಿಂಗಾರೆಡ್ಡಿ ಅವರು ಸ್ವಂತ ಕ್ಷೇತ್ರ ಬಿಟಿಎಂ ಲೇಔಟ್‌ನಲ್ಲಿ ಲೀಡ್ ಕೊಡಿಸಲು ವಿಫಲರಾಗಿದ್ದಾರೆ. ತೇಜಸ್ವಿ ಸೂರ್ಯ ವಿರುದ್ಧ ಬಿಟಿಎಂ ಬಡಾವಣೆಯಲ್ಲಿ ಸೌಮ್ಯಾರೆಡ್ಡಿ 9,349 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸೊರಬ ಕ್ಷೇತ್ರದಲ್ಲಿ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರಿಗೆ 17,937 ಮತಗಳ ಹಿನ್ನಡೆ ಉಂಟಾಗಿದೆ.
ಹಿನ್ನಡೆ ಅನುಭವಿಸಿದ ಇತರೆ ಸಚಿವರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪೈಕಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರದಲ್ಲಿ 23,324 ಮತಗಳ ಹಿನ್ನಡೆ, ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ದೇವನಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ 5,231 ಮತಗಳ ಹಿನ್ನಡೆ ಉಂಟಾಗಿದೆ. ಇನ್ನು ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಭಟ್ಕಳ ಶಾಸಕ ಹಾಗೂ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ಅವರ ಕ್ಷೇತ್ರದಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಅವರು 32,403 ಮತಗಳ ಹಿನ್ನಡೆ ಅನುಭವಿಸಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿನಿಧಿಸುವ ಧಾರವಾಡ ಲೋಕಸಭಾ ಕ್ಷೇತ್ರದ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನೋದ್ ಅಸೂಟಿ ವಿರುದ್ಧ ಬಿಜೆಪಿಯ ಪ್ರಹ್ಲಾದ್ ಜೋಷಿ ಅವರಿಗೆ 32,797 ಮತಗಳ ಲೀಡ್ ದೊರೆತಿದೆ. ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರ ಬಬಲೇಶ್ವರ ಕ್ಷೇತ್ರದಲ್ಲಿ ವಿಜಯಪುರ ಲೋಕಸಭೆ ಕಾಂಗ್ರೆಸ್ ಸ್ಪರ್ಧಿ ರಾಜು ಅಲಗೂರ ಅವರಿಗೆ 3,351 ಮತಗಳ ಅಲ್ಪ ಹಿನ್ನಡೆ ಆಗಿದೆ. ಸಚಿವ ಡಿ.ಸುಧಾಕರ್ ಅವರ ಚಿತ್ರದುರ್ಗದ ಹಿರಿಯೂರು ಕ್ಷೇತ್ರದಲ್ಲಿ ಬಿ.ಎನ್.ಚಂದ್ರಪ್ಪ ಅವರಿಗೆ 6,197 ಮತಗಳ ಹಿನ್ನಡೆ, ಕೋಲಾರದಲ್ಲಿ ಡಾ.ಎಂ.ಸಿ.ಸುಧಾಕರ್ ಅವರ ಚಿಂತಾಮಣಿ ಕ್ಷೇತ್ರದಲ್ಲಿ 7,250 ಮತಗಳ ಹಿನ್ನಡೆ ಉಂಟಾಗಿದೆ. ಇನ್ನು ತುಮಕೂರು ಜಿಲ್ಲೆಯ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಇಬ್ಬರ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗಿದೆ.
ನಿಗಮಗಳಿಂದ ಪ್ರಸ್ತಾವನೆ ಬಂದರೆ ಬಸ್ ಟಿಕೆಟ್ ದರ ಏರಿಕೆ ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ
ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ವಿರುದ್ಧ ಬಿಜೆಪಿಯ ವಿ.ಸೋಮಣ್ಣ ಅವರಿಗೆ ಪರಮೇಶ್ವರ್ ಅವರ ಕೊರಟಗೆರೆಯಲ್ಲಿ 25,541, ಕೆ.ಎನ್.ರಾಜಣ್ಣ ಅವರ ಮಧುಗಿರಿ ಕ್ಷೇತ್ರದಲ್ಲಿ 12,802 ಮತಗಳ ಲೀಡ್ ಲಭಿಸಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರದಲ್ಲಿ 35,051 ಮತ, ಮಂಡ್ಯ ಲೋಕಸಭೆ ಕ್ಷೇತ್ರದ ಸಚಿವ ಎನ್.ಚಲುವರಾಯಸ್ವಾಮಿ ಅವರ ನಾಗಮಂಗಲದಲ್ಲಿ 46,511, ಹಾವೇರಿ ಲೋಕಸಭೆ ಕ್ಷೇತ್ರದ ಪೈಕಿ ಸಚಿವ ಎಚ್.ಕೆ.ಪಾಟೀಲ್ ಅವರ ಗದಗ ಕ್ಷೇತ್ರದಲ್ಲಿ 10,509 ಮತಗಳ ಹಿನ್ನಡೆ ಉಂಟಾಗಿದೆ. ಸಚಿವ ಶಿವಾನಂದ ಪಾಟೀಲ್ ಅವರ ವಿಜಯಪುರ ಕ್ಷೇತ್ರದ ಬಸವನ ಬಾಗೇವಾಡಿಯಲ್ಲಿ 17,553 ಮತಗಳ ಲೀಡ್ ಪ್ರತಿಪಕ್ಷಕ್ಕೆ ದೊರೆತಿದೆ.