Asianet Suvarna News Asianet Suvarna News

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: 7ನೇ ವೇತನ ಆಯೋಗ ರಚನೆಗೆ ಸಿಎಂ ಬೊಮ್ಮಾಯಿ ಅನುಮೋದನೆ

ನೂತನ ವೇತನ ಆಯೋಗದ ಶಿಫಾರಸಿನಿಂದ ನಿವೃತ್ತ ಸರ್ಕಾರಿ ನೌಕರರು ಸೇರಿದಂತೆ ಸುಮಾರು 13.5 ಲಕ್ಷ ಸರ್ಕಾರಿ ಉದ್ಯೋಗಿಗಳು, ನಿವೃತ್ತರಿಗೆ ಅನುಕೂಲವಾಗಲಿದೆ. ಈ ಪೈಕಿ 6 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ 3 ಲಕ್ಷ ನೌಕರರು ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತ ನೌಕರರಿಗೆ ವೇತನ, ತುಟ್ಟಿಭತ್ಯೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

good news for government employees 7th pay commission formed by karnataka cm basavaraj bommai ash
Author
First Published Nov 19, 2022, 2:20 PM IST

ನಿವೃತ್ತ ಮುಖ್ಯ ಕಾರ್ಯದರ್ಶಿ (Retired Chief Secretary) ಕೆ.ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ (7th Pay Commission) ರಚನೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅನುಮೋದನೆ ನೀಡಿದ್ದಾರೆ. ಅಲ್ಲದೆ, ನಿವೃತ್ತ ಐಎಎಸ್ ಅಧಿಕಾರಿ (IAS Officer) ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ, ಅವರನ್ನು ಆಯೋಗದ ಸದಸ್ಯರನ್ನಾಗಿ (Member) ನೇಮಕ ಮಾಡಲಾಗಿದೆ. ಹಾಗೂ, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.  ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್‌ ನೇತೃತ್ವದಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 9 ರಂದು ದಾವಣಗೆರೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಇಂದು(ಬುಧವಾರ) ದಾವಣಗೆರೆಯಲ್ಲಿ ಅವರು ಈ ಕುರಿತ ಘೋಷಣೆ ಮಾಡುವ ಮೂಲಕ ಲಕ್ಷಾಂತರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದರು.  

ನೂತನ ವೇತನ ಆಯೋಗದ ಶಿಫಾರಸಿನಿಂದ ನಿವೃತ್ತ ಸರ್ಕಾರಿ ನೌಕರರು ಸೇರಿದಂತೆ ಸುಮಾರು 13.5 ಲಕ್ಷ ಸರ್ಕಾರಿ ಉದ್ಯೋಗಿಗಳು, ನಿವೃತ್ತರಿಗೆ ಅನುಕೂಲವಾಗಲಿದೆ. ಈ ಪೈಕಿ 6 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ 3 ಲಕ್ಷ ನೌಕರರು ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತ ನೌಕರರಿಗೆ ವೇತನ, ತುಟ್ಟಿಭತ್ಯೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

ಇದನ್ನು ಓದಿ: ಸರ್ಕಾರಿ ನೌಕರರಿಗೆ ಬಂಪರ್‌ ಕೊಡುಗೆ ನೀಡಿದ ಸಿಎಂ ಬೊಮ್ಮಾಯಿ

ಅಕ್ಟೋಬರ್‌ ತಿಂಗಳಲ್ಲಿ 7ನೇ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್‌ ತಿಂಗಳಲ್ಲಿ ಭರವಸೆ ನೀಡಿದ್ದರೂ, ಅಧಿಕೃತವಾಗಿ ಘೋಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇತನ ಆಯೋಗ ರಚನೆಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನವೆಂಬರ್‌  ರಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ವೇತನ ಆಯೋಗ ರಚಿಸುವುದಾಗಿ ಘೋಷಿಸಿದ್ದರು. ಇಂದು, ನವೆಂಬರ್ 19 ರಂದು ಈ ಆಯೋಗ ರಚನೆಯಾಗಿದೆ.  
7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ (ಯುಜಿಸಿ/ ಎಐಸಿಟಿಇ/ ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವವರನ್ನು ಹೊರತು ಪಡಿಸಿ) ಹಲವು ಅಂಶಗಳನ್ನು ಪರಿಶೀಲನೆ ಮಾಡಿ ಶಿಫಾರಸು ಮಾಡಲಿದೆ. 

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

ವೇತನ, ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಿ, ಕಾರ್ಯಸಾಧುವಾದ ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡುವುದು, ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುವುದು, ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲಿಸಿ ಶಿಫಾರಸು ನೀಡಲಿದೆ ಎಂದು ತಿಳಿದುಬಂದಿದೆ. 

ಮುಂಬರುವ ಬಜೆಟ್‌ನಲ್ಲಿ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಸರ್ಕಾರಿ ನೌಕರರ ಸಂಘ ಶೇ.40 ರಷ್ಟು ವೇತನ ಹೆಚ್ಚಳ ಮಾಡಬೇಕು, 1-7-2022 ರಿಂದ ಅನ್ವಯವಾಗುವಂತೆ ಕಾಲ್ಪನಿಕ ಸೌಲಭ್ಯ, 1-1-2023 ರಿಂದ ಆರ್ಥಿಕವಾಗಿ ಸೌಲಭ್ಯ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಇಟ್ಟಿದೆ. ಒಂದು ವೇಳೆ ಬೇಡಿಕೆಗೆ ಅನುಗುಣವಾಗಿ ವೇತನ ಹೆಚ್ಚಳವಾದರೆ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ವರ್ಷಕ್ಕೆ ಸುಮಾರು 12,500 ಕೋಟಿ ರೂ. ಹೊರೆ ಬೀಳಲಿದೆ.

ಇದನ್ನು ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಕೈ ಸೇರಲಿದೆ ಬಾಕಿ ತುಟ್ಟಿ ಭತ್ಯೆ

Follow Us:
Download App:
  • android
  • ios