ಬೆಂಗಳೂರು(ಜು.23): ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ತುಸು ಕಡಿಮೆ ದಾಖಲಾಗುತ್ತಿದ್ದ ಹೊಸ ಕೊರೋನಾ ಸೋಂಕಿತರ ಪ್ರಮಾಣ ಬುಧವಾರ ದಾಖಲೆಯ ಪ್ರಮಾಣದಲ್ಲಿ ವರದಿಯಾಗಿದೆ. ಒಂದೇ ದಿನ 4764 ಕೇಸ್‌ಗಳು ಪತ್ತೆಯಾಗಿವೆ. ಇದೇ ವೇಳೆ, ದಾಖಲೆಯ 48140 ಪರೀಕ್ಷೆಗಳೂ ನಡೆದಿವೆ. ಆದರೆ, ಸಮಾಧಾನಕರ ಸಂಗತಿ ಎಂದರೆ ಪರೀಕ್ಷೆ ಮತ್ತು ಸೋಂಕಿನ ಅನುಪಾತ ಶೇ.9.9ಕ್ಕೆ ಇಳಿಕೆಯಾಗಿದೆ. ಜು.16ಕ್ಕೆ ಶೇ.17.77ರಷ್ಟಿದ್ದ ಸೋಂಕಿನ ಅನುಪಾತ ಇಳಿಮುಖವಾಗುತ್ತಲೇ ಬಂದಿದ್ದು, ಜು.20ಕ್ಕೆ ಶೇ.10ಕ್ಕೆ ತಲುಪಿತ್ತು. ಇದೀಗ ಶೇ.9.9ಕ್ಕೆ ಇಳಿಕೆಯಾಗಿದ್ದು ಆಶಾದಾಯಕವಾಗಿದೆ.

ಮತ್ತೂ ಸಮಾಧಾನಕರ ಸಂಗತಿ ಎಂದರೆ, ಬುಧವಾರ ದಾಖಲೆ ಸಂಖ್ಯೆಯ 1780 ಮಂದಿ ಗುಣಮುಖರಾಗಿದ್ದಾರೆ. 55 ಮಂದಿ ಅಸುನೀಗಿದ್ದು, ಸತತ 4ನೇ ದಿನ ಸಾವಿನ ಸಂಖ್ಯೆ ಕಡಿಮೆಯಾಗಿದೆ.

ಬಿಡುಗಡೆಗೂ ಮುನ್ನವೇ ಪ್ರಭಾವಿಗಳಿಗೆ ಕೊರೋನಾ ಲಸಿಕೆ ಲಭ್ಯ!

ಇದರೊಂದಿಗೆ ಈವರೆಗಿನ ಏಕದಿನದ ಪರೀಕ್ಷೆ, ಸೋಂಕು ಮತ್ತು ಬಿಡುಗಡೆ ಮೂರೂ ಪ್ರಕರಣಗಳಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.

ಜು.21ರಂದು ಒಂದೇ ದಿನ 43,904 ಕೋವಿಡ್‌ ಪರೀಕ್ಷೆ ನಡೆಸಿದ್ದು, ಇದೇ ದಿನ 1664 ಜನರ ಬಿಡುಗಡೆ ಹಾಗೂ ಜುಲೈ 18ರಂದು ಒಂದೇ ದಿನ 4537 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದೇ ಈವರೆಗಿನ ಏಕದಿನದ ದಾಖಲೆಯಾಗಿತ್ತು. ಇದರೊಂದಿಗೆ ರಾಜ್ಯದಲ್ಲಿ ಈವರೆಗೆ ನಡೆಸಲಾದ ಕೋವಿಡ್‌ ಪರೀಕ್ಷೆಗಳ ಸಂಖ್ಯೆ 11,12,874 ಆಗಿದೆ.

ಒಟ್ಟು ಸೋಂಕಿತರ ಸಂಖ್ಯೆ 75,833ಕ್ಕೆ, ಗುಣಮುಖರಾದವರ ಸಂಖ್ಯೆ 27,239ಕ್ಕೆ ಏರಿಕೆಯಾಗಿದೆ. ಉಳಿದಂತೆ 47,069 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿದ್ದಾರೆ. ಈ ಪೈಕಿ ಆರೋಗ್ಯ ಗಂಭೀರವಾಗಿರುವ 618 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಗಸ್ಟ್‌ ಅಂತ್ಯಕ್ಕೆ ಭಾರತದಲ್ಲಿ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ!

ಸತತ 4ನೇ ದಿನ ಸಾವು ಇಳಿಕೆ:

ಸಮಾಧಾನಕರ ಸಂಗತಿ ಎಂದರೆ ಸತತ ನಾಲ್ಕನೇ ದಿನವೂ ಸೋಂಕಿತರ ಸಾವಿನ ಪ್ರಕರಣ ಕಡಿಮೆಯಾಗಿದೆ. ಬುಧವಾರ 55 ಮಂದಿ ಸಾವನ್ನಪ್ಪಿದ್ದು, ಈವರೆಗೆ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 1519ಕ್ಕೆ ಏರಿದೆ (6 ಅನ್ಯ ಕಾರಣದ ಪ್ರಕರಣ ಹೊರತುಪಡಿಸಿ).

ಬುಧವಾರ ಬೆಂಗಳೂರಿನಲ್ಲಿ 15 ಮಂದಿ, ಧಾರವಾಡ, ಮೈಸೂರು ತಲಾ ಐವರು, ಹಾವೇರಿ ನಾಲ್ವರು, ಬೀದರ್‌, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ತಲಾ ಮೂವರು, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ, ತುಮಕೂರು, ಚಿಕ್ಕಮಗಳೂರು ತಲಾ ಎರಡು, ಉಡುಪಿ, ಕಲಬುರಗಿ, ಕೋಲಾರ, ಚಾಮರಾಜನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ 46 ಮಂದಿ ‘ಸಾರಿ’ (ಉಸಿರಾಟ ತೊಂದರೆ) ಮತ್ತು ‘ಐಎಲ್‌ಐ’ (ವಿಷಮಶೀತ ಜ್ವರ) ಹಿನ್ನೆಲೆಯಿಂದ ಸೋಂಕು ದೃಢಪಟ್ಟವರು, ಉಳಿದ ಒಂಬತ್ತು ಜನರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೊರೋನಾ ಪರೀಕ್ಷೆ, ಸೋಂಕಿತರು ಗುಣಮುಖ ಎರಡರಲ್ಲೂ ದಾಖಲೆ!

ಜಿಲ್ಲಾವಾರು ಸೋಂಕಿತರು:

ಬುಧವಾರ ಬೆಂಗಳೂರು ನಗರದಲ್ಲಿ 2050 ಮಂದಿಗೆ ಸೋಂಕು ಹರಡಿದ್ದು, ಇದರೊಂದಿಗೆ ನಗರದ ಒಟ್ಟು ಸೋಂಕಿತರ ಸಂಖ್ಯೆ 36,993ಕ್ಕೆ ಏರಿಕೆಯಾಗಿದೆ. ಬಿಡುಗಡೆಯಾದ 812 ಮಂದಿ ಸೇರಿ ನಗರದ ಒಟ್ಟು ಗುಣಮುಖರ ಸಂಖ್ಯೆ 8288ಕ್ಕೆ ಏರಿಕೆಯಾಗಿದೆ. 27,969 ಮಂದಿ ಸಕ್ರಿಯ ಸೋಂಕಿತರಿದ್ದಾರೆ.

ಉಳಿದಂತೆ ಉಡುಪಿಯಲ್ಲಿ 281, ಬೆಳಗಾವಿ 219, ಕಲಬುರಗಿ 175, ದಕ್ಷಿಣ ಕನ್ನಡ 162, ಧಾರವಾಡ 158, ಮೈಸೂರು 145, ಬೆಂಗಳೂರು ಗ್ರಾಮಾಂತರ 139, ರಾಯಚೂರು 135, ಬಳ್ಳಾರಿ 134, ಚಿಕ್ಕಬಳ್ಳಾಪುರ 110, ದಾವಣಗೆರೆ 96, ಕೋಲಾರ 88, ಚಿಕ್ಕಮಗಳೂರು 82, ಬೀದರ್‌ 77, ಹಾಸನ 72, ಗದಗ 71, ಬಾಗಲಕೋಟೆ 70, ಉತ್ತರ ಕನ್ನಡ 63, ಶಿವಮೊಗ್ಗ 59, ವಿಜಯಪುರ, ತುಮಕೂರು ತಲಾ 52, ಹಾವೇರಿ 50, ರಾಮನಗರ 45, ಯಾದಗಿರಿ 43, ಚಿತ್ರದುರ್ಗ 40, ಮಂಡ್ಯ 37, ಚಾಮರಾಜನಗರ 31, ಕೊಪ್ಪಳ 21 ಹಾಗೂ ಕೊಡಗಿನಲ್ಲಿ 7 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!

ರಾಜ್ಯದ ಲೆಕ್ಕ

75833 ಜನ: ರಾಜ್ಯದಲ್ಲಿ ಈವರೆಗೆ ಒಟ್ಟಾರೆ ಸೋಂಕಿತರು

47069 ಜನ: ರಾಜ್ಯದಲ್ಲಿ ಈಗ ಸಕ್ರಿಯ ಸೋಂಕಿತರ ಸಂಖ್ಯೆ

27239 ಜನ: ರಾಜ್ಯದಲ್ಲಿ ಒಟ್ಟಾರೆ ಗುಣಮುಖರಾದವರು

618 ಮಂದಿ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು

1519 ಜನ: ಕೊರೋನಾದಿಂದ ರಾಜ್ಯದಲ್ಲಿ ಸಾವಿಗೀಡಾದವರು