ಬೆಂಗಳೂರು(ಜು.22): ರಾಜ್ಯದಲ್ಲಿ ಕೊರೋನಾ ತೀವ್ರತೆಯ ನಡುವೆಯೂ ಮಂಗಳವಾರ ಸಮಾಧಾನದ ಸುದ್ದಿ ಬಂದಿದೆ.ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ದಾಖಲೆ ಸಂಖ್ಯೆಯ 43,904 ಜನರ ಕೊರೋನಾ ಪರೀಕ್ಷೆ ನಡೆದಿದ್ದು, ಈ ಪೈಕಿ 3,649 ಜನರಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ಜೊತೆಗೆ ಒಂದೇ ದಿನ ದಾಖಲೆ ಸಂಖ್ಯೆಯ 1664 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 71,069ಕ್ಕೆ ಏರಿಕೆಯಾದರೆ, ಒಟ್ಟು ಬಿಡುಗಡೆಯಾದವರ ಸಂಖ್ಯೆ 25,549ಕ್ಕೇರಿದೆ. ಜು.19ರಂದು 1290 ಮಂದಿ ಬಿಡುಗಡೆಯೇ ಈವರೆಗಿನ ಏಕದಿನದ ದಾಖಲೆಯಾಗಿತ್ತು.

ದೆಹಲಿಯಲ್ಲೂ ಶೇ. 24 ಜನಕ್ಕೆ ಸೋಂಕು: ಲಕ್ಷಣವಿಲ್ಲ, 74 ಲಕ್ಷ ಚೇತರಿಕೆ!

ಉಳಿದಂತೆ 44,140 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ ಬೆಂಗಳೂರಿನ 336 ಮಂದಿ ಸೇರಿದಂತೆ 583 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ 61 ಮಂದಿ ಮಂಗಳವಾರ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಆತ್ಮಹತ್ಯೆ ಸೇರಿದಂತೆ ಆರು ಅನ್ಯ ಕಾರಣದ ಪ್ರಕರಣಗಳನ್ನು ಹೊರತುಪಡಿಸಿ 1464ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ 36,473 ಪರೀಕ್ಷೆ ನಡೆಸಿದ್ದೇ ಈ ವರೆಗಿನ ಏಕದಿನದ ದಾಖಲೆಯಾಗಿತ್ತು. ಮಂಗಳವಾರ ಕೋವಿಡ್‌ ಪ್ರಯೋಗಾಲಯಗಳಲ್ಲಿ 23,885, ರಾರ‍ಯಪಿಡ್‌ ಆ್ಯಂಟಿಜೆನ್‌ ಕಿಟ್‌ನಿಂದ 19,328, ಟ್ರೂನಾಟ್‌ ಮೂಲಕ 551 ಮತ್ತು ಸಿಬಿ ನಾಟ್‌ ಮೂಲಕ 140 ಸೇರಿ ಒಟ್ಟು 43,904 ಪರೀಕ್ಷೆ ನಡೆಸಲಾಗಿದ್ದು, ಹೊಸ ದಾಖಲೆಯಾಗಿದೆ. ಕಳೆದ ಒಂದು ವಾರದಿಂದ ಪರೀಕ್ಷೆ ಹೆಚ್ಚಿದಂತೆ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಜೊತೆಗೆ ಸಾವಿನ ಪ್ರಮಾಣವೂ ಕೆಲ ದಿನಗಳಿಂದ ಇಳಿಕೆಯಾಗುತ್ತಿರುವುದು ಸಮಾಧಾನಕರವಾಗಿದೆ.

ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!

ಬೆಂಗಳೂರಲ್ಲೇ 1714 ಪ್ರಕರಣ:

ಮಂಗಳವಾರದ ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲೇ 1714 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ನಗರದ ಒಟ್ಟು ಸೋಂಕಿತರ ಸಂಖ್ಯೆ 34,943ಕ್ಕೆ ಏರಿಕೆಯಾಗಿದ್ದು, ಮಂಗಳವಾರ ಸೋಂಕಿನಿಂದ ಗುಣಮುಖರಾದ 520 ಮಂದಿಯ ಬಿಡುಗಡೆಯೊಂದಿಗೆ ನಗರದ ಒಟ್ಟು ಗುಣಮುಖರಾದವರ ಸಂಖ್ಯೆ7,476 ಆಗಿದೆ.

ಉಳಿದಂತೆ ಬಳ್ಳಾರಿಯಲ್ಲಿ 190, ದಕ್ಷಿಣ ಕನ್ನಡ 149, ಮೈಸೂರು 135, ಯಾದಗಿರಿ 117, ಉತ್ತರ ಕನ್ನಡ 109, ಹಾಸನ 107, ಕೋಲಾರ 103, ಕಲಬುರಗಿ 99, ದಾವಣಗೆರೆ, ಬೆಂಗಳೂರು ಗ್ರಾಮಾಂತರ ತಲಾ 95, ಉಡುಪಿ, ಧಾರವಾಡ ತಲಾ 84, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 68, ಬೀದರ್‌ 66, ಬಾಗಲಕೋಟೆ 65, ತುಮಕೂರು 47, ಕೊಪ್ಪಳ 45, ಹಾವೇರಿ 39, ಚಾಮರಾಜನಗರ 34, ಬೆಳಗಾವಿ, ಚಿತ್ರದುರ್ಗ ತಲಾ 23, ಶಿವಮೊಗ್ಗ 20, ಗದಗ 15, ವಿಜಯಪುರ, ಮಂಡ್ಯ 13, ರಾಮನಗರ 8, ರಾಯಚೂರು 4 ಹಾಗೂ ಕೊಡಗು ಇಲ್ಲೆಯಲ್ಲಿ ಒಂದು ಪ್ರಕರಣ ದೃಢಪಟ್ಟಿವೆ.

ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!

ಸಾವು ಎಲ್ಲಿ ಎಷ್ಟು?:

ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದ್ದು ಮಂಗಳವಾರ 22 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ, ದಾವಣಗರೆಗೆ, ಮೈಸೂರು ಜಿಲ್ಲೆಗಳಲ್ಲಿ ತಲಾ 5, ಕೋಲಾರ, ಬೆಳಗಾವಿಯಲ್ಲಿ ತಲಾ 4, ಹಾವೇರಿ, ತುಮಕೂರು, ಹಾಸನ ತಲಾ 3, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಗದಗ, ವಿಜಯಪುರ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಒಟ್ಟು 61 ಸಾವಿನ ಪ್ರಕರಣದಲ್ಲಿ 59 ಪ್ರಕರಣ ಸಾರಿ (ಉಸಿರಾಟ ತೊಂದರೆ) ಮತ್ತು ಐಎಲ್‌ಐ (ವಿಷಮಶೀತ ಜ್ವರ) ಹಿನ್ನೆಲೆಯಿಂದ ಕೂಡಿವೆ. ಉಳಿದ ಎರಡು ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.