ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ಮನೆಯ ಮೇಲೆ ಇಡಿ ದಾಳಿ ನಡೆದಿದೆ. ರನ್ಯಾ ರಾವ್ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಭಾಗಿಯಾಗಿದ್ದ ಫೋಟೋಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರು (ಮಾ.13): ದುಬೈನಿಂದ ಅಕ್ರಮ ಚಿನ್ನ ಸಾಗಾಟ ಕೇಸ್‌ನಲ್ಲಿ ಗುರುವಾರ ಸಾಕಷ್ಟು ಬೆಳವಣಿಗೆಯಾಗಿದೆ. ನಟಿ ರನ್ಯಾ ರಾವ್‌ ಹಾಗೂ ಅವರ ಪತಿ ಜತಿನ್‌ ಹುಕ್ಕೇರಿ ಮನೆಯ ಮೇಲೆ ಇಡಿ ದಾಳಿ ಮಾಡಿದ್ದು, ಮನೆಯಿಂದ ಚಿನ್ನವನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ ಎನ್ನುವ ವರದಿಗಳಿವೆ. ಇದರ ನಡುವೆ ರಾಜಕಾರಣಿಗಳು ಹಾಲಿ ಸಚಿವರ ಜೊತೆಗೂ ರನ್ಯಾ ರಾವ್‌ಗೆ ಲಿಂಕ್‌ ಇದೆ ಎನ್ನುವ ವರದಿಗಳು ಬಂದಿವೆ. ಕರಾವಳಿಯ ಪ್ರಖ್ಯಾತ ಜ್ಯೋತಿಷಿ ಹೆಸರೂ ಕೂಡ ಗುರುವಾರ ಕೇಳಿಬಂದಿದೆ. ಈ ಎಲ್ಲಾ ಸುದ್ದಿಗಳ ನಡುವೆ ಸಿಎಂ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್‌, ಚಿನ್ನದ ಚೋರಿ ರನ್ಯಾ ರಾವ್‌ ಹಾಗೂ ಜತಿನ್‌ ಹುಕ್ಕೇರಿ ಮದುವೆಗೆ ಹೋಗಿದ್ದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದನ್ನೇ ಇರಿಸಿಕೊಂಡು ಬಿಜೆಪಿ, ಆಡಳಿತ ಪಕ್ಷವನ್ನೇ ಟೀಕಿಸಿ ಗಂಭೀರ ಆರೋಪ ಮಾಡಿದೆ.

ಅಂದಾಜು ನಾಲ್ಕು ತಿಂಗಳ ಹಿಂದೆ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ನಡೆದ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಕೂಡ ಇರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಕೂಡ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದು, ಭಾರೀ ಮಟ್ಟದಲ್ಲಿ ವೈರಲ್‌ ಆಗಿದೆ. ಈ ಫೋಟೊದೊಂದಿಗೆ ʼಗೋಲ್ಡ್‌ ಸ್ಮಗ್ಲರ್‌ ರನ್ಯಾ ಜೊತೆ ನಂಟಿರುವ ಸಚಿವರು ಯಾರು ಎಂಬುದನ್ನು ಬಹಿರಂಗಪಡಿಸುವಿರಾ ಕಾಂಗ್ರೆಸ್‌? ಎಂದು ವ್ಯಂಗ್ಯವಾಡಿದೆ. ಆದರೆ ಮತ್ತೊಂದೆಡೆ ನಟಿಯ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್‌ ಇರುವ ಫೋಟೋ ಹಲವು ಚರ್ಚೆಗಳನ್ನು ಸಂಭಾವ್ಯ ರಾಜಕೀಯ ಲಿಂಕ್‌ನ ಬಗ್ಗೆ ಸಂಶಯ ಹುಟ್ಟುಹಾಕುವಂತೆ ಮಾಡಿದೆ.

ನಟಿ ರನ್ಯಾ ರಾವ್‌ ಅವರು ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯದ ದುರ್ಬಳಕೆ ಮಾಡಿಕೊಂಡು ಚಿನ್ನದ ಅಕ್ರಮ ಸಾಗಾಣಿಕೆ ನಡೆಸಿರುವುದು ವರದಿಯಾಗಿದೆ. ಈ ಪ್ರಕರಣದಲ್ಲಿ ರನ್ಯಾ ರಾವ್‌ ಅವರ ತಂದೆ, ಐಪಿಎಸ್‌ ಅಧಿಕಾರಿಯೂ ಆಗಿರುವ ರಾಮಚಂದ್ರ ರಾವ್‌ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ಅವರನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕೇಸ್‌ ಬಗ್ಗೆ ಜಿ.ಪರಮೇಶ್ವರ್‌ ಕೂಡ ಮಾತನಾಡಿದ್ದಾರೆ.ತನಿಖೆ ಆಗಲಿ ನೋಡೋಣ. ಇದರಲ್ಲಿ ಯಾರಾದರೂ ಇದ್ದರೆ ತನಿಖೆಯಲ್ಲಿ ಗೊತ್ತಾಗಲಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಸಿಬಿಐ ತನಿಖೆ ಮಾಡುತ್ತಿದ್ದು, ನಮ್ಮ ಪೊಲೀಸರಿಗೆ ಯಾವುದೇ ಮಾಹಿತಿ ಕೊಡಲ್ಲ. ರಾಜ್ಯ ಪೊಲೀಸರಿಗೆ ಈ ಕೇಸ್‌ ಬಗ್ಗೆ ಏನೂ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಚಿನ್ನದ ಕಳ್ಳಿ ರನ್ಯಾ ರಾವ್‌ ಸ್ವಂತ ತಮ್ಮ ನಟಿ ಜಯಮಾಲಾ ಅಳಿಯ; ನವ ಜೋಡಿ ಮೇಲೆ ಬಿತ್ತು ಜನರ ಕಣ್ಣು!

ಗುರುವಾರ ಕೂಡ ಈ ಬಗ್ಗೆ ಪರಮೇಶ್ವರ್‌ ಅವರಿಗೆ ಪ್ರಶ್ನೆ ಮಾಡಿದಾಗ ಆಕ್ರೋಶ ವ್ಯಕ್ತಪಡಿಸಿರುವ ಪರಮೇಶ್ವರ್‌, 'ಏ ನಡೀರಿ..' ಎಂದು ಹೇಳಿದ್ದಾರೆ.ನಟಿ ರನ್ಯಾ ಮದುವೆಯಲ್ಲಿ ಸಿಎಂ ಜೊತೆ ಭಾಗಿಯಾಗಿರೋ ಫೋಟೊ ಬಗ್ಗೆ ಕೇಳಿದ್ದಕ್ಕೆ 'ಸಾವಿರ ಮದುವೆಗೆ ಹೋಗ್ತೀವಿ' ಎಂದು ಸಿಡಿಮಿಡಿಯಲ್ಲೇ ಉತ್ತರಿಸಿದ್ದಾರೆ.

ರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್‌ ಫೋಟೋಗಳನ್ನು ಡಿಲೀಟ್ ಮಾಡಿದ ಸ್ಟಾರ್ ನಟಿಯರು!