*   ಕೇಂದ್ರದ ಮಾದರಿ ರಾಜ್ಯವೂ ವಿಶೇಷ ಅನುದಾನ ನೀಡಲಿ: ಎ.ಎಸ್‌. ಪಾಟೀಲ ನಡಹಳ್ಳಿ*  ಇಲಾಖಾವಾರು ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶಾಸಕರು*  ಅಸಲಿಗೆ ಹಿಂದುಳಿದ ಪ್ರದೇಶಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು 

ಬೆಂಗಳೂರು(ಮಾ.18):  ಕೇಂದ್ರ ಸರ್ಕಾರ ಬಿಹಾರ, ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗಾಗಿ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಅನುದಾನ ನೀಡುವಂತೆ ರಾಜ್ಯ ಸರ್ಕಾರವೂ ಕೂಡ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಉತ್ತರ ಕರ್ನಾಟಕ(North Karnataka) ಭಾಗದ ಜಿಲ್ಲೆಗಳಿಗೆ ಪ್ರತೀ ವರ್ಷ ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ಅನುದಾನ ನೀಡಬೇಕೆಂದು ಬಿಜೆಪಿ ಸದಸ್ಯ ಎಸ್‌.ಎಸ್‌.ಪಾಟೀಲ ನಡಹಳ್ಳಿ(AS Patil Nadahalli) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸದನದಲ್ಲಿ ಗುರುವಾರ ಇಲಾಖಾವಾರು ಅನುದಾನ(Grants) ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಹಳೇ ಮೈಸೂರು ಪ್ರಾಂತದ ಭಾಗಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ ಎಲ್ಲ ಪ್ರದೇಶಗಳೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಎಲ್ಲ ರೀತಿಯಲ್ಲೂ ಹಿಂದುಳಿದಿವೆ. ಸರ್ಕಾರ ಜಿಲ್ಲೆ, ತಾಲ್ಲೂಕು, ಹೋಬಳಿವಾರು ಅನುದಾನ ಹಂಚಿಕೆ ಮಾಡುತ್ತದೆ. ದಕ್ಷಿಣ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಭಾಗದ ಭೌಗೋಳಿಕ ಪ್ರದೇಶ, ಜನಸಂಖ್ಯೆ ಸಮನಾಗಿದೆ. ಆದರೆ, ಆ ಭಾಗದಲ್ಲಿ ತಾಲ್ಲೂಕು, ಹೋಬಳಿಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಅನುದಾನ ಕಡಿಮೆಯಾಗುತ್ತದೆ. ಅಸಲಿಗೆ ಹಿಂದುಳಿದ ಪ್ರದೇಶಗಳಿಗೆ ಸರ್ಕಾರ(Government of Karnataka) ಹೆಚ್ಚಿನ ಅನುದಾನ ನೀಡಬೇಕು. ಆದರೆ, ಅದು ಆಗುತ್ತಿಲ್ಲ. ಇದರಿಂದ ಅಭಿವೃದ್ಧಿ ವಿಚಾರದಲ್ಲಿ ಸಾಮಾಜಿಕ ಅಸಮತೋಲನತೆ ಮುಂದುವರೆದಿದೆ. ಹೀಗೇ ಆದರೆ ಇನ್ನೂ ಹತ್ತಾರು ವರ್ಷಗಳು ಕಳೆದರೂ ಉತ್ತರ ಕರ್ನಾಟಕ ಭಾಗ ಹಾಗೇ ಇರುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದ(Central Government) ಮಾದರಿಯಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕ ಭಾಗಕ್ಕೆ ಪ್ರತಿ ಬಜೆಟ್‌ನಲ್ಲೂ(Budget) ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಕೋರಿದರು.

North Karnataka: ಉತ್ತರ ಕರ್ನಾಟಕ ಜನರಿಗೆ ಬೆಂಗಳೂರಲ್ಲಿ 3 ಎಕರೆ ಜಾಗ

ಪ್ರತ್ಯೇಕ ಕೆಪಿಎಸ್ಸಿಗೆ ಬೇಡಿಕೆ: 

ಶೈಕ್ಷಣಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ(KPSC) ಪರೀಕ್ಷೆಗಳಲ್ಲಿ ಇತರೆ ಅಭ್ಯರ್ಥಿಗಳಿಗೆ ಸಮನಾಗಿ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಆ ಭಾಗದವರಿಗೆ ನೇಮಕಾತಿಯಲ್ಲಿ(Recruitment) ಭಾರೀ ಅನ್ಯಾಯವಾಗುತ್ತಿದೆ. ಇದರಿಂದ ವಿಧಾನಸೌಧದಲ್ಲಿ ರಾಜ್ಯದ ಒಂದು ಭಾಗದ ಅಧಿಕಾರಿ, ಸಿಬ್ಬಂದಿಗಳೇ ಬಹುಪಾಲು ತುಂಬಿದ್ದಾರೆ. ಹಾಗಾಗಿ ಅವರಿಗೆ ಪ್ರತ್ಯೇಕ ಕೆಪಿಎಸ್ಸಿ ರಚಿಸಬೇಕೆಂದು ಎಂದು ಕೂಡ ಶಾಸಕ ನಡಹಳ್ಳಿ ಸರ್ಕಾರಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಕೆಪಿಎಸ್ಸಿ ಪರೀಕ್ಷೆಯಲ್ಲಿ ಸೂಕ್ತ ಅಂಕ ಪಡೆಯಲು ವಿಫಲವಾಗುತ್ತಿರುವುದಕ್ಕೆ ಪ್ರತ್ಯೇಕ ಕೆಪಿಎಸ್ಸಿ ಕೇಳಿದರೆ ಹೇಗೆ ಎಂದರು.

North Karnataka Railway Line: ದಶಕವಾದರೂ ಮುಗಿಯದ ಬಾಗಲಕೋಟೆ-ಕುಡಚಿ ರೈಲು ಮಾರ್ಗ

ಮಧ್ಯಪ್ರವೇಶಿಸಿದ ಜೆಡಿಎಸ್‌(JDS) ಸದಸ್ಯ ನಾಡಗೌಡ, ಹಳೇ ಮೈಸೂರು(Mysuru) ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ರಾಜ ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದರು. ಹಾಗಾಗಿ ಈ ಭಾಗ ಶೈಕ್ಷಣಿಕವಾಗಿ ಮುಂದಿದೆ. ಆದರೆ, ಉ.ಕ. ಭಾಗದಲ್ಲಿ ಅಗತ್ಯ ಶಾಲೆ, ಕಾಲೇಜುಗಳಿರಲಿಲ್ಲ. ಈಗಷ್ಟೇ ಅಭಿವೃದ್ಧಿ ಕಾಣುತ್ತಿದೆ. ಹೀಗಿರುವಾಗ ಆ ಮಕ್ಕಳು ಹೇಗೆ ಇತರರೊಂದಿಗೆ ಸ್ಪರ್ಧೆ ಎದುರಿಸಲು ಸಾಧ್ಯ. ಹಾಗಾಗಿ ನಡಹಳ್ಳಿ ಅವರ ಬೇಡಿಕೆ ಸರಿಯಾಗಿದೆ ಎಂದರು.

ನೀರಾವರಿ ಯೋಜನೆ(Irrigation Project) ವಿಚಾರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗಿರುವಷ್ಟು ಅನ್ಯಾಯ ಬೇರೆ ಯಾವುದಕ್ಕೂ ಆಗಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು(National Project) ಘೋಷಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ತರಬೇಕು. ಬೆಂಗಳೂರಿಗೆ ವಲಸೆ ಬರುವ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.