North Karnataka Railway Line: ದಶಕವಾದರೂ ಮುಗಿಯದ ಬಾಗಲಕೋಟೆ-ಕುಡಚಿ ರೈಲು ಮಾರ್ಗ
* 142 ಕಿಮೀನಲ್ಲಿ ಆಗಿದ್ದು 30 ಕಿಮೀ ಮಾತ್ರ
* ಗದಗ-ಸೊಲ್ಲಾಪುರ, ಹುಬ್ಬಳ್ಳಿ-ಮೀರಜ್ ಸಂಪರ್ಕ ಕಲ್ಪಿಸುವ ಯೋಜನೆಯಿದು
* ಈ ಯೋಜನೆಗೆ 2486 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಫೆ.10): ಉತ್ತರ ಕರ್ನಾಟಕದ(North Karnataka) ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾದ ಕುಡಚಿ-ಬಾಗಲಕೋಟೆ(Bagalkot Kudachi) ರೈಲು ಮಾರ್ಗ ಕಾಮಗಾರಿ ಪ್ರಾರಂಭವಾಗಿ ದಶಕ ದಾಟಿದರೂ ಅರ್ಧದಷ್ಟು ತಲುಪಿಲ್ಲ.
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಬಾಗಲಕೋಟೆ ಭಾಗದ ಕಾರ್ಖಾನೆಗಳಿಗೆ(Factories), ರೈತರಿಗೆ(Farmers) ಅನುಕೂಲವಾಗುವ ಮಾರ್ಗ. ಈ ಮಾರ್ಗ ಮಾಡಬೇಕೆಂಬ ಬೇಡಿಕೆ ಈಗಿನದ್ದಲ್ಲ. ದಶಕಗಳ ಹಿಂದಿನದು. 2007ರಲ್ಲಿ ಇದಕ್ಕಾಗಿ ಪ್ರತ್ಯೇಕ ಹೋರಾಟ ಸಮಿತಿಯೇ ಅಸ್ತಿತ್ವಕ್ಕೆ ಬಂದಿತ್ತು. ಆಗ ನಿರಂತರವಾಗಿ 3 ವರ್ಷಗಳ ಕಾಲ ಹೋರಾಟ ನಡೆದ ಪ್ರತಿಫಲವಾಗಿ ಕೇಂದ್ರ ಸರ್ಕಾರ(Central Government) 2010ರಲ್ಲಿ ಈ ಯೋಜನೆಗೆ ಅಸ್ತು ಎಂದಿತ್ತು.
2010-11ರ ಸಾಲಿನಲ್ಲಿ 816 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಈ ಯೋಜನೆ ಈ ವರೆಗೂ ಅರ್ಧದಷ್ಟುಆಗಿಲ್ಲ. 142 ಕಿಮೀ ದೂರದ ಈ ಮಾರ್ಗದ ನಿರ್ಮಾಣ 2016ರಲ್ಲೇ ಪೂರ್ಣವಾಗಬೇಕಿತ್ತು. ಆದರೆ ಈ ವರೆಗೆ ಆಗಿದ್ದು ಕೇವಲ 30 ಕಿಮೀ ಮಾತ್ರ. 816 ಕೋಟಿ ವೆಚ್ಚದ ಯೋಜನೆ ಇದೀಗ 3 ಸಾವಿರ ಕೋಟಿಗೆ ತಲುಪಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಶೇ. 50ರ ಅನುಪಾತದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿವೆ.
South Western Railway: ಕರ್ನಾಟಕಕ್ಕೆ ಬಂಪರ್ 6900 ಕೋಟಿ ರೈಲ್ವೆ ಅನುದಾನ, ಯಾವೆಲ್ಲ ಹೊಸ ಯೋಜನೆ?
ವಿಳಂಬವೇಕೆ?:
ಈ ಯೋಜನೆಗೆ 2486 ಎಕರೆ ಭೂ ಸ್ವಾಧೀನ(Land Acquisition) ಪಡಿಸಿಕೊಳ್ಳಬೇಕಿದೆ. ಆದರೆ, ಈ ವರೆಗೆ 1346 ಎಕರೆ ಮಾತ್ರ ರೈಲ್ವೆ ಇಲಾಖೆಗೆ(Department of Railways) ಹಸ್ತಾಂತರವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಲೇ ಈ ಕಾಮಗಾರಿ ಕುಂಟುತ್ತಾ ಸಾಗಿದೆ ಎಂಬುದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಏನೇನು ಲಾಭ:
ಹುಬ್ಬಳ್ಳಿ-ಮೀರಜ್ ಹಾಗೂ ಗದಗ-ಸೊಲ್ಲಾಪುರ ರೈಲು ಮಾರ್ಗಗಳಿಗೆ ಬಾಗಲಕೋಟೆ-ಕುಡಚಿ ಸಂಪರ್ಕ ಕಲ್ಪಿಸುವ ಮಾರ್ಗ. ಇದು ಪೂರ್ಣಗೊಂಡರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ಗೋವಾಕ್ಕೆ ಸಂಪರ್ಕಿಸಬಹುದಾಗಿದೆ. ಬಾಗಲಕೋಟೆಯಲ್ಲಿ ಬರೋಬ್ಬರಿ 14 ಸಕ್ಕರೆ ಕಾರ್ಖಾನೆಗಳಿದ್ದರೆ, 8 ಸಿಮೆಂಟ್ ಫ್ಯಾಕ್ಟರಿಗಳಿವೆ. ಈ ಕಾರ್ಖಾನೆಗಳಿಂದ ಉತ್ಪಾದನೆಯನ್ನು ಸಾಗಿಸಲು ಅನುಕೂಲವಾಗುತ್ತದೆ. ಕಲಾದಗಿ ಸೇರಿದಂತೆ ವಿವಿಧೆಡೆ ಚಿಕ್ಕು, ದಾಳಿಂಬೆ, ಪೇರಲ ಸೇರಿದಂತೆ ಹತ್ತು ಹಲವು ಬಗೆಯ ತೋಟಗಾರಿಕೆ ಬೆಳೆ(Horticulture Crop) ಬೆಳೆಯಲಾಗುತ್ತದೆ. ಇದರೊಂದಿಗೆ ಬಾಗಲಕೋಟೆ(Bagalkot) ಜಿಲ್ಲೆಯಲ್ಲಿ ಉತ್ಕೃಷ್ಟಮಟ್ಟದ ಸೀರೆ ಖಣ ನೇಯಲಾಗುತ್ತದೆ. ಈ ಎಲ್ಲ ಸರಕುಗಳ ಸಾಗಾಣಿಕೆಗೆ ಈಗ ಬೇರೆ ಬೇರೆ ಮಾರ್ಗವನ್ನು ಅನುಸರಿಸಲಾಗುತ್ತದೆ. ರೈಲು ಮಾರ್ಗವಾದರೆ(Raliway Line) ಇವುಗಳ ರಫ್ತು ವಹಿವಾಟಿಗೆ ಅನುಕೂಲವಾಗಲಿದೆ.
ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ತುಂಡು ಗುತ್ತಿಗೆ ಕೊಟ್ಟು ತ್ವರಿತಗತಿಯಲ್ಲಿ ಕಾಮಗಾರಿ ಮಾಡಿ ಮುಗಿಸಬೇಕು ಎಂಬ ಬೇಡಿಕೆ ಜನರದ್ದು. ಇಲ್ಲದಿದ್ದಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಜನರು ಎಚ್ಚರಿಸಿದ್ದಾರೆ.
Bengaluru: ರೈಲ್ವೆ ನಿಲ್ದಾಣದಲ್ಲಿ ಹಮಾಲಿಗಳಿಂದ ನಮಾಜ್: ಹಿಂದೂ ಪರ ಸಂಘಟನೆಗಳ ಆಕ್ರೋಶ
ಭೂಸ್ವಾಧೀನ ಪ್ರಕ್ರಿಯೆಯಿಂದ ಕೊಂಚ ವಿಳಂಬವಾಗಿದೆ. ಇದೀಗ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ರಾಜ್ಯ ಸರ್ಕಾರ ಉತ್ತಮವಾಗಿ ಸಹಕಾರ ನೀಡುತ್ತಿದ್ದು ಕಾಮಗಾರಿ ಇದೀಗ ಚುರುಕುಕೊಂಡಿದೆ ಅಂತ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಅತ್ಯಂತ ಆಮೆಗತಿಯಲ್ಲಿ ಸಾಗಿದೆ. 142 ಕಿಮೀ ಪೈಕಿ ಈ ವರೆಗೆ 30ರಿಂದ 33 ಕಿಮೀ ಮಾತ್ರ ಕಾಮಗಾರಿ ಆಗಿದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಶೀಘ್ರ ಮುಗಿಸಬೇಕು. 10 ಕಿಮೀ ಒಬ್ಬರಿಗೆ ಗುತ್ತಿಗೆ ಕೊಟ್ಟು ಕೆಲಸ ಮುಗಿಸಬೇಕು. ಅಂದಾಗ ತ್ವರಿತವಾಗಿ ಕಾಮಗಾರಿ ಮುಗಿಯುತ್ತದೆ ಅಂತ ಕರ್ನಾಟಕ ರೈಲು ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿ ಹೇಳಿದ್ದಾರೆ.