* ಉತ್ತರ ಕರ್ನಾಟಕದ ಜನರಿಗಾಗಿ ಬೆಂಗಳೂರಲ್ಲಿ 3 ಎಕರೆ ಜಾಗ* ವಸತಿ ನಿಲಯ ಮತ್ತಿತರ ಕಟ್ಟಡ ನಿರ್ಮಾಣಕ್ಕೆ ಜಾಗ* ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ನಿಯೋಗಕ್ಕೆ ಸಿಎಂ ಭರವಸೆ

ಬೆಂಗಳೂರು(ಫೆ. 21) ರಾಜಧಾನಿಯಲ್ಲಿ (Bengaluru) ನೆಲೆಸಿರುವ ಉತ್ತರ ಕರ್ನಾಟಕ (North Karnataka) ಭಾಗದ ಜನರ ಅನುಕೂಲಕ್ಕಾಗಿ ಬೆಂಗಳೂರಲ್ಲಿ ಕನಿಷ್ಠ ಮೂರು ಎಕರೆ ಜಾಗ ನೀಡುವುದಾಗಿ ನಗರದಲ್ಲಿರುವ ಉತ್ತರ ಕರ್ನಾಟಕ ಸಂಘಸಂಸ್ಥೆಗಳ ಮಹಾಸಂಸ್ಥೆಯ ನಿಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭರವಸೆ ನೀಡಿದ್ದಾರೆ.

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ನೇತೃತ್ವದ ನಿಯೋಗಕ್ಕೆ ಈ ಆಶ್ವಾಸನೆ ನೀಡಿದರು. ಬೆಂಗಳೂರಿನ ಉತ್ತರ ಕರ್ನಾಟಕದ ಜನರ ಅನುಕೂಲಕ್ಕೆ ಕಟ್ಟಡ, ಆ ಭಾಗದಿಂದ ಬರುವ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗಲು ವಸತಿ ನಿಲಯ ನಿರ್ಮಾಣ ಮಾಡಲು ಶೀಘ್ರವೇ ಜಮೀನು ಮಂಜೂರು ಮಾಡಲಾಗುವುದು ಎಂದರು. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡುವಂತೆ ನಿಯೋಗ ಮಾಡಿದ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದರು.

ನಿಯೋಗದಲ್ಲಿ ಪದಾಧಿಕಾರಿಗಳಾದ ಬಸವರಾಜ ಬೇಳೂರು, ಶ್ರೀಧರ ಕಲ್ಲೂರು, ಗಂಗಾಧರ ವಾಲಿ, ಅಯ್ಯನಗೌಡ ಬಿರಾದಾರ, ಸಂತೋಷ ಬಸೆಟ್ಟಿ, ಭೀಮಣ್ಣ ನಲತ್ವಾಡ ಇತರರು ಉಪಸ್ಥಿತರಿದ್ದರು.

North Karnataka Railway Line: ದಶಕವಾದರೂ ಮುಗಿಯದ ಬಾಗಲಕೋಟೆ-ಕುಡಚಿ ರೈಲು ಮಾರ್ಗ

 ಕಾಶಿ ಮಾದರಿಯಲ್ಲೇ ಹರಿಹರ ಅಭಿವೃದ್ಧಿ: ಭಾರತವಷ್ಟೇ ಅಲ್ಲ, ಇಡೀ ಜಗತ್ತೇ ಅಚ್ಚರಿಪಡುವಂತೆ ಕಾಶಿ ವಿಶ್ವನಾಥನ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸಿದ್ದಾರೆ. ಅದೇ ಮಾದರಿಯಲ್ಲಿ ಹರಿಹರ ತುಂಗಭದ್ರಾ ತಟವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಹರಹರದ ತುಂಗಭದ್ರಾ ತಟದಲ್ಲಿ .30 ಕೋಟಿ ವೆಚ್ಚದಲ್ಲಿ ತುಂಗಾರತಿ ಮಂಟಪ, 108 ಯೋಗ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಶಿಯಲ್ಲಿ ಹಿಂದೆ ವಿಶ್ವನಾಥನ ದೇಗುಲವನ್ನೇ ಹುಡುಕುವ ಪರಿಸ್ಥಿತಿ ಇತ್ತು. ದೇವಸ್ಥಾನ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಅಂಗಡಿ, ಮುಂಗಟ್ಟುಗಳು ತಲೆ ಎತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಕಾರಿಡಾರ್‌ ಯೋಜನೆ ಕೈಗೊಂಡ ನಂತರ ಇಡೀ ಕಾಶಿಯ ಚಿತ್ರಣವೇ ಬದಲಾಗಿದೆ ಎಂದರು.

ಇದೊಂದು ಅಪರೂಪದ, ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ನಮ್ಮ ಬದುಕಿನ ಮೂಲವಾದ ಜಲ ಮೂಲ ಸಂರಕ್ಷಣೆ ಮಾಡಬೇಕು. ನದಿ, ಕೆರೆ, ಕಟ್ಟೆಗಳ ಸ್ವಚ್ಛತೆ ಮಾಡಬೇಕು. ಇಂತಹದ್ದೊಂದು ಕೆಲಸ ಹರಿಹರದಲ್ಲಿ ನಡೆದಿದೆ. ಕಟ್ಟಡ ಉದ್ಘಾಟನೆ, ರಸ್ತೆ, ಸೇತುವೆ ನಿರ್ಮಾಣವನ್ನೇನೋ ಮಾಡುತ್ತೇವೆ. ಅದೇ ರೀತಿ ಜಲ ಮೂಲ ಸಂರಕ್ಷಣೆ ನಮ್ಮ ಆದ್ಯತೆ ಆಗಬೇಕು. ಜಗತ್ತಿನ ಎಲ್ಲಾ ನಾಗರಿಕತೆಗಳು ಹುಟ್ಟಿ, ಬೆಳೆದಿದ್ದೆಲ್ಲಾ ನದಿಗಳ ತಟದಲ್ಲೇ. ನಾಗರಿಕತೆ ಮತ್ತು ಸಂಸ್ಕೃತಿ ಎರಡೂ ಒಟ್ಟಿಗೆ ಬೆಳೆಯಬೇಕು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ತುಂಗಭದ್ರಾ ತಟದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ರೈಲ್ವೇ ಬ್ರಿಡ್ಜ್‌ವರೆಗೂ ವಾಕಿಂಗ್‌ ಪಾಥ್‌, ತುಂಗಭದ್ರಾ ನದಿ ಶುದ್ಧೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.

ಹರಿಹರ ಅಭಿವೃದ್ಧಿಗೆ ಬದ್ಧ: ಶ್ರದ್ಧಾಭಕ್ತಿಯ ಕೇಂದ್ರವಾದ ಹರಿಹರದಲ್ಲಿ ಹರಿ-ಹರ ಶಕ್ತಿಯ ಸಂಗಮವಾಗಿದೆ. ಹಿಂದೆ ಆಗಿದ್ದೆಲ್ಲಾ ಬಿಡಿ, ಹರಿಹರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾನು ಸಿಎಂ ಆಗಿ ಅಧಿಕಾರಕ್ಕೆ ವಹಿಸಿಕೊಂಡ ನಂತರ ಈ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯಿಂದ 40 ಕಿ.ಮೀ. ರಸ್ತೆ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ . 22 ಕೋಟಿ ನೀಡಿದ್ದೇವೆ. 59 ಕಿ.ಮೀ. ಗ್ರಾಮೀಣ ರಸ್ತೆಗೆ ಅನುಮೋದನೆ ಕೊಟ್ಟಿದೆ. ಕರ್ನಾಟಕ ಪಬ್ಲಿಕ್‌ ಸ್ಕೂಲ್‌, ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಕೆಲಸವಾಗಿದೆ. ನಗರೋತ್ಥಾನದಡಿ . 40 ಕೋಟಿ ಮಂಜೂರಾಗಿದೆ. ಭೈರನಪಾದ ಏತ ನೀರಾವರಿ ಯೋಜನೆ ಗೆ ಕ್ರಮ ಕೈಗೊಳ್ಳಲಾಗುವುದು. ಹರಿಹರವನ್ನು ಕೈಗಾರಿಕಾ ಕೇಂದ್ರವಾಗಿ ಮಾಡಲಾಗುವುದು. ಮುಂಬೈ-ಚೆನ್ನೈ ಕಾರಿಡಾರ್‌ನಡಿ ಹರಿಹರವೂ ಬರುತ್ತದೆ. ಎಷ್ಟುಸಾಧ್ಯವೋ ಅಷ್ಟುಪ್ರಯತ್ನವನ್ನು ಕಾನೂನಿನ ಇತಿಮಿತಿಯಲ್ಲಿ, ಆರ್ಥಿಕ ಚೌಕಟ್ಟಿನಲ್ಲಿ ಹರಿಹರ ಕ್ಷೇತ್ರಕ್ಕೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹರಿಹರ ಜನತೆಗೆ ಭರವಸೆ ನೀಡಿದರು.