ಕರ್ನಾಟಕದ ಸ್ತಬ್ಧಚಿತ್ರಕ್ಕೆ ಚಾನ್ಸ್‌ ಕೊಡಿ: ಕೇಂದ್ರಕ್ಕೆ ಸಿದ್ದು

ಸ್ತಬ್ಧಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಏಳು ಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಹೀಗಾಗಿ ಇದನ್ನು ಸರಿಪಡಿಸಲು ರಾಜ್ಯದ ಸ್ತಬ್ಧಚಿತ್ರವನ್ನು ಕೆಂಪುಕೋಟೆಯ ಭಾರತ ಪರ್ವದಲ್ಲಿ ಪ್ರದರ್ಶನಕ್ಕೆ ಸೀಮಿತಗೊಳಿಸದೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Give a Chance to Karnataka's Tableau  says CM Siddaramaiah grg

ಬೆಂಗಳೂರು(ಜ.12):  ನವದೆಹಲಿಯ ಕರ್ತವ್ಯ ಪಥದಲ್ಲಿ ಜ.26ರ ಗಣರಾಜ್ಯೋತ್ಸವ ದಿನದಂದು ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಕ್ಷಣಾ ಇಲಾಖೆಯ ಈ ಕ್ರಮದಿಂದ 7 ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆಯಾಗುವಂತಾಗಿದೆ ಎಂದಿದ್ದಾರೆ. ಜತೆಗೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ವಿನಂತಿಸಿದ್ದಾರೆ.

ಕರ್ನಾಟಕವು ಕಳೆದ 14 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್‌ಗೆ ತನ್ನ ಸ್ತಬ್ಧಚಿತ್ರವನ್ನು ಕಳುಹಿಸುತ್ತಿದೆ. 2005ರಲ್ಲಿ ಶ್ರವಣಬೆಳಗೊಳದ ಭಗವಾನ್‌ ಬಾಹುಬಲಿಯ ಮಹಾ ಮಸ್ತಕಾಭಿಷೇಕ, 2008ರಲ್ಲಿ ಹೊಯ್ಸಳರ ವಾಸ್ತುಶಿಲ್ಪ, 2011ರಲ್ಲಿ ಬೀದರ್‌ನ ಬಿದರಿ ಕಲೆ, 2012ರಲ್ಲಿ ಭೂತಾರಾಧನೆ, 2015ರಲ್ಲಿ ಚನ್ನಪಟ್ಟಣದ ಗೊಂಬೆಗಳು ಮತ್ತು 2022ರಲ್ಲಿ ರಾಜ್ಯದ ಸಾಂಪ್ರದಾಯಿಕ ಕಲೆಗಳ ಕುರಿತ ಸ್ತಬ್ಧಚಿತ್ರಕ್ಕೆ ಬಹುಮಾನಗಳು ಲಭಿಸಿವೆ. ಆದರೆ 2024ರ ಗಣರಾಜ್ಯೋತ್ಸವ ಪರೇಡ್‌ಗಾಗಿ ಕರ್ನಾಟಕವು 5 ಪರಿಕಲ್ಪನೆಗಳನ್ನು ಸ್ತಬ್ಧಚಿತ್ರಕ್ಕಾಗಿ ಕಳುಹಿಸಿತ್ತು. ಅದರಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯನ್ನು ರಕ್ಷಣಾ ಸಚಿವಾಲಯ ಆಯ್ಕೆ ಮಾಡಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಕರೆದಿದ್ದ ಎಲ್ಲ ಸಭೆಗಳಿಗೂ ರಾಜ್ಯದ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ, ಕೊನೆಯ ಸುತ್ತಿನ ಸಭೆಯ ನಂತರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ಸೇರಿಸಿಲ್ಲ. ಅದರ ಬದಲು ಕೆಂಪುಕೋಟೆಯ ಭಾರತ ಪರ್ವ ವಿಭಾಗದಲ್ಲಿ ರಾಜ್ಯದ ಸ್ತಬ್ಧಚಿತ್ರ ಇರಿಸಲು ಹೇಳಲಾಗಿದೆ ಎಂದಿದ್ದಾರೆ.

ಟ್ಯಾಬ್ಲೋ ಆಯ್ಕೆಗೆ ಸಿದ್ದು ಯತ್ನಿಸಲಿ: ಮಾಜಿ ಸಿಎಂ ಬೊಮ್ಮಾಯಿ

ರಾಜ್ಯವನ್ನು ಪ್ರತಿನಿಧಿಸುವ ಬ್ರ್ಯಾಂಡ್ ಬೆಂಗಳೂರು ಸ್ತಬ್ಧಚಿತ್ರವು ವಿಷಯಾಧಾರಿತವಾಗಿದ್ದು, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತಿಳಿಸುವುದಾಗಿದೆ. ತಂತ್ರಜ್ಞಾನ, ಉದ್ಯಮಶೀಲತೆ, ತೆರಿಗೆಯಲ್ಲಿನ ಕೊಡುಗೆಗಳ ಮೂಲಕ ವಿಕಸಿತ ಭಾರತಕ್ಕೆ ರಾಜ್ಯದ ಕೊಡುಗೆಯನ್ನು ಅದು ಪ್ರತಿಬಿಂಬಿಸುತ್ತದೆ. ಆದರೆ, ಆ ಸ್ತಬ್ಧಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ. ಏಳು ಕೋಟಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಹೀಗಾಗಿ ಇದನ್ನು ಸರಿಪಡಿಸಲು ರಾಜ್ಯದ ಸ್ತಬ್ಧಚಿತ್ರವನ್ನು ಕೆಂಪುಕೋಟೆಯ ಭಾರತ ಪರ್ವದಲ್ಲಿ ಪ್ರದರ್ಶನಕ್ಕೆ ಸೀಮಿತಗೊಳಿಸದೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios