ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರ ಪ್ರಮುಖ ಬೆಂಬಲಿಗರು ಹಾಗೂ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸೋಮವಾರ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ತನ್ಮೂಲಕ ಘರ್‌ವಾಪ್ಸಿಯ ಮೊದಲ ಹಂತಕ್ಕೆ ಚಾಲನೆ ದೊರಕಿತು.

ಬೆಂಗಳೂರು (ಆ.22) :  ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರ ಪ್ರಮುಖ ಬೆಂಬಲಿಗರು ಹಾಗೂ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಸೋಮವಾರ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ತನ್ಮೂಲಕ ಘರ್‌ವಾಪ್ಸಿಯ ಮೊದಲ ಹಂತಕ್ಕೆ ಚಾಲನೆ ದೊರಕಿತು.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ನಡೆದ ಸಭೆಯಲ್ಲಿ ಸೋಮಶೇಖರ್‌ ಅವರ ಆಪ್ತರಾದ ರಾಜಣ್ಣ, ಆರ್ಯ ಶ್ರೀನಿವಾಸ್‌, ಶಿವಮಾದಯ್ಯ, ಹನುಮಂತಯ್ಯ, ಚಿಕ್ಕರಾಜು ಹಾಗೂ ಜೆಡಿಎಸ್‌ ಮುಖಂಡರಾದ ಉಮಾಶಂಕರ್‌, ರಘು, ಸತೀಶ್‌ ಮತ್ತಿತರರನ್ನು ಪಕ್ಷದ ಬಾವುಟ ನೀಡಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಇದೇ ವೇಳೆ ಬಿಜೆಪಿಯ ಯಶವಂತಪುರ ಕ್ಷೇತ್ರದ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇದರೊಂದಿಗೆ ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಹಾಗೂ ಶಿವರಾಮ ಹೆಬ್ಬಾರ್‌ ಅವರು ಪಕ್ಷ ಸೇರುವುದು ನಿಚ್ಚಳವಾದಂತಾಗಿದೆ.

Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್‌ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್‌ ಟಾಸ್ಕ್

ಸೋಮಶೇಖರ್‌ ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ‘ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿದ್ದು ಹತಾಶೆಗೊಂಡಿರುವ ಎಲ್ಲರನ್ನೂ ಕಾಂಗ್ರೆಸ್‌ ಪಕ್ಷಕ್ಕೆ ಕರೆದುಕೊಂಡು ಬನ್ನಿ. ಒಬ್ಬೊಬ್ಬರು ಕನಿಷ್ಠ ಹತ್ತು ಮಂದಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿ ಎಂದು ಕರೆ ನೀಡಿದರು. ಜತೆಗೆ, ದೊಡ್ಡ ದೊಡ್ಡ ನಾಯಕರೊಂದಿಗೆ ನಾನು ಮಾತನಾಡುತ್ತೇನೆ’ ಎನ್ನುವ ಮೂಲಕ ಘರ್‌ ವಾಪ್ಸಿ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂಬ ಸೂಚನೆ ನೀಡಿದರು.

ಅಲ್ಲದೆ, ‘ಈ ಕಾರ್ಯಕ್ರಮದಲ್ಲಿ ನಿಮ್ಮ ಜತೆ ಸೋಮಶೇಖರ್‌ ಕೂಡ ಪಕ್ಷ ಸೇರಬೇಕಾಗಿತ್ತು. ಸೋಮಶೇಖರ್‌ಗೆ ವಿಧಾನಸಭೆ ಚುನಾವಣೆಗೂ ಮೊದಲೇ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದೆ. ಅಲ್ಲದೆ, ರೈಲು ಹೊರಟ ಮೇಲೆ ಟಿಕೆಟ್‌ ತೆಗೆದುಕೊಳ್ಳಬೇಡ ಎಂದು ಎಚ್ಚರಿಸಿದ್ದೆ. ಆದರೆ, ಈಗ ಸೋಮಶೇಖರ್‌ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ನನ್ನ ಜತೆಗೂ ಮಾತನಾಡಿದ್ದು, ಆ.26ರಂದು ಕ್ಷೇತ್ರಕ್ಕೆ ಬರುವ ಭರವಸೆ ನೀಡಿದ್ದೇನೆ. ಏಕೆಂದರೆ, ರಾಜಕಾರಣ ಬೇರೆ, ಅಭಿವೃದ್ಧಿ ಬೇರೆ. ಮುಂದೆ ಏನಾಗುತ್ತೋ ನೋಡೋಣ’ ಎಂದು ಸೂಚ್ಯವಾಗಿ ಹೇಳಿದರು.

ಅಲ್ಲದೆ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಬಾಂಬೆ ಬಾಯ್‌್ಸಗಳು ಕಟ್ಟರ್‌ ಕಾಂಗ್ರೆಸ್ಸಿಗರು ಎಂದು ಪರೋಕ್ಷವಾಗಿ ಹೇಳಿದ ಶಿವಕುಮಾರ್‌ ಅವರು, ಬೆಂಗಳೂರಿನಲ್ಲಿ ಬಡವರಿಗೆ ಕ್ಯಾಂಟಿನ್‌ ಯೋಜನೆಗೆ ಹೆಸರಿಡುವ ವಿಚಾರ ಬಂದಾಗ ಅದಕ್ಕೆ ಇಂದಿರಾ ಕ್ಯಾಂಟೀನ್‌ ಎಂದು ಹೆಸರಿಡಬೇಕು ಎಂದು ಇದೇ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜು ಅವರು ಹಠ ಮಾಡಿ 40 ಜನ ಎಂಎಲ್‌ಎಗಳ ಸಹಿ ಹಾಕಿಸಿ ಕೊಟ್ಟಿದ್ದರು. ಈ ಶಾಸಕರ ಕ್ಷೇತ್ರಗಳ ಜನರ ಮನೆಯ ಮೇಲೆ ಕಾಂಗ್ರೆಸ್‌ ಧ್ವಜದ ಚಿತ್ರಗಳನ್ನು ಆಗ ಹಾಕಿಸಿದ್ದರು. ಈಗ ಪೂರ್ತಿ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಕೊಟ್ಟು ಕೊಟ್ಟು ನಮ್ಮ ಅಂಗೈಯಲ್ಲಿ ಕೂದಲು ಇಲ್ಲದಂತಾಗಿದೆ. ಪಡೆದುಕೊಂಡ ಜನರ ಅಂಗೈಯಲ್ಲಿ ಕೂದಲು ಇಲ್ಲದಂತಾಗಿದ್ದರೆ, ಇದನ್ನು ನೋಡಿ ನಮಗಿಲ್ಲವಲ್ಲ ಎಂದು ಕೈ ಹೊಸೆದುಕೊಂಡು ಬಿಜೆಪಿಯವರ ಅಂಗೈಯಲ್ಲಿ ಕೂದಲಿಲ್ಲದಂತಾಗಿದೆ ಎನ್ನುವ ಮೂಲಕ ಅಕ್ಬರ್‌-ಬೀರಬಲ್‌ ಕಥೆಯ ಹೋಲಿಕೆಯನ್ನು ಗ್ಯಾರಂಟಿ ಯೋಜನೆಯೊಂದಿಗೆ ಮಾಡಿದ ಅವರು, ಈ ರೀತಿ ಕೈ ಹೊಸೆದುಕೊಂಡು ಇರುವವರನ್ನು ಬಿಡಬೇಡಿ. ಅವರನ್ನು ಕರೆತಂದು ಕಾಂಗ್ರೆಸ್‌ಗೆ ಸೇರಿಸಿ. ಒಬ್ಬೊಬ್ಬರು ಹತ್ತು ಮಂದಿಯನ್ನು ಸೇರಿಸಿ. ದೊಡ್ಡ ದೊಡ್ಡ ನಾಯಕರ ಜತೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಆನೇಕಲ್‌ ಶಾಸಕ ಶಿವಣ್ಣ ಮಾತನಾಡಿ, ನಾನು ಹಾಗೂ ಎಸ್‌.ಟಿ. ಸೋಮಶೇಖರ್‌ ಒಂದೇ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆವು. 2004ರಲ್ಲಿ ಕಾಂಗ್ರೆಸ್‌ ಪಕ್ಷ ನಮಗೆ ಟಿಕೆಟ್‌ ನೀಡಿತ್ತು. ನಾವಿಬ್ಬರೂ ಎರಡು ಬಾರಿ ಸೋತರೂ ಮತ್ತೆ ಟಿಕೆಟ್‌ ನೀಡಿತ್ತು. ಇದರ ಅರ್ಥ ಕಾಂಗ್ರೆಸ್‌ ನಮ್ಮ ಕೈಬಿಡುವುದಿಲ್ಲ. ಹೀಗಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಹೋಗಿಲ್ಲ. ಕೆಲವೊಂದು ಕಾರಣಗಳಿಗೆ ಸೋಮಶೇಖರ್‌ ಬಿಜೆಪಿಗೆ ಹೋಗಿರಬಹುದು. ಆದರೆ ಕಾಂಗ್ರೆಸ್‌ ಕಲ್ಪಿಸಿದ ಅವಕಾಶ ಹಾಗೂ ನೀಡಿದ ಪ್ರೋತ್ಸಾಹ ಮರೆಯಲಾಗಲ್ಲ ಎಂದು ಹೇಳಿದರು.

ಸೋಮಶೇಖರ್‌ ಬೇಗ ಸೇರಲಿ- ರಾಜಣ್ಣ:

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ ಮಾತನಾಡಿ, ಶಾಸಕರಾದ ಎಸ್‌.ಟಿ. ಸೋಮಶೇಖರ್‌ ಅವರಿಗೆ ಬಿಜೆಪಿಯಲ್ಲಿ ಇಲ್ಲ ಸಲ್ಲದ ಕಾಟ ನೀಡುತ್ತಿದ್ದಾರೆ. ಹೀಗಾಗಿ ಸೋಮಶೇಖರ್‌ ಅವರು ಆದಷ್ಟುಬೇಗ ಕಾಂಗ್ರೆಸ್‌ಗೆ ಬರಬೇಕು ಎಂದು ಎಂದು ವೇದಿಕೆ ಮೇಲೆಯೇ ಸೋಮಶೇಖರ್‌ ಅವರಿಗೆ ಬಹಿರಂಗ ಆಹ್ವಾನ ನೀಡಿದರು.

ಈ ವೇಳೆ ರಾಜ್ಯಸಭೆ ಸದಸ್ಯ ಹಾಗೂ ಸಿಡಬ್ಲ್ಯುಸಿ ಸದಸ್ಯರಾದ ನಾಸೀರ್‌ ಹುಸೇನ್‌, ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್‌ ಸೇರಿದಂತೆ ಹಲವರು ಹಾಜರಿದ್ದರು.

ಕಾಂಗ್ರೆಸ್‌ ಘರ್‌ ವಾಪ್ಸಿ ಆರಂಭ: ಲೋಕಸಭೆ ಚುನಾವಣೆಗೂ ಮುನ್ನ 'ಕೈ' ಹಿಡಿಯುವರೇ ರೆಬೆಲ್‌ ಶಾಸಕರು

ನಾಸೀರ್‌ ಹುಸೇನ್‌ಗೆ ಅಭಿನಂದನೆ

ಕಾಂಗ್ರೆಸ್‌ನ ಸಿಡಬ್ಲ್ಯುಸಿ ಸದಸ್ಯರಾಗಿ ನೇಮಕಗೊಂಡ ನಾಸೀರ್‌ ಹುಸೇನ್‌ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾಗಿದ್ದವರು ಅಲಂಕರಿಸುವ ಮಹತ್ವದ ಹುದ್ದೆಯದು. ನಮ್ಮ ರಾಜ್ಯದಿಂದ ಯುವಕರಾದ ನಾಸೀರ್‌ ಅವರು ಆಯ್ಕೆಯಾಗಿರುವುದು ಅದೃಷ್ಟ. ಹೀಗಾಗಿ ಅವರನ್ನು ಮೂರು ಮಂದಿ ಶಾಸಕರು ಸನ್ಮಾನಿಸಬೇಕು ಎಂದು ಕೋರುವ ಮೂಲಕ ಡಿ.ಕೆ. ಶಿವಕುಮಾರ್‌ ಅವರು ಅಭಿನಂದನೆ ತಿಳಿಸಿದರು.