Asianet Suvarna News Asianet Suvarna News

ಅನುಕಂಪದ ಆಧಾರದಲ್ಲಿ ನೌಕರಿ ಪಡೆಯುವುದು ಹಕ್ಕಲ್ಲ: ಹೈಕೋರ್ಟ್‌

ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ರಂಗನಾಥ್‌ ತಂದೆ ಎನ್‌.ರಾಮಯ್ಯ 2002ರ ಅ.7ರಿಂದ ದಿಢೀರ್‌ ನಾಪತ್ತೆಯಾಗಿದ್ದರು. 2010ರಲ್ಲಿ ಅನುಕಂಪದ ಆಧಾರದಲ್ಲಿ ತಮಗೆ ಉದ್ಯೋಗ ನೀಡುವಂತೆ ಕೋರಿ ರಂಗನಾಥ್‌ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್‌ ತಿರಸ್ಕರಿಸಿತ್ತು.

Getting Job on Compassionate is Not Right Says High Court of Karnataka grg
Author
First Published Jan 24, 2023, 2:00 PM IST

ಬೆಂಗಳೂರು(ಜ.24):  ಕುಟುಂಬವೊಂದರ ಸದಸ್ಯ ಈಗಾಗಲೇ ಸರ್ಕಾರದ ಅಧೀನದ ಸಂಸ್ಥೆಯಲ್ಲಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅದೇ ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲಾಗದು ಎಂದು ಆದೇಶಿಸಿರುವ ಹೈಕೋರ್ಟ್‌, ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವುದು ಹಕ್ಕು ಅಲ್ಲ ಎಂದು ಸ್ಪಷ್ಟಪಡಿಸಿದೆ.

ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ನಿರಾಕರಿಸಿದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್‌) ಕ್ರಮ ಪ್ರಶ್ನಿಸಿ ಬೆಂಗಳೂರಿನ ಉಲ್ಲಾಳದ ನಿವಾಸಿ ರಂಗನಾಥ್‌ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಮೇಲ್ಮನವಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ರಂಗನಾಥ್‌ ಅವರಿಗೂ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿದೆ.

High Court of Karnataka: ತಂದೆಯ ಸಾಲಕ್ಕೆ ಮಗ ಚೆಕ್‌ ನೀಡಿದ್ದರೆ ಸಾಲ ತೀರಿಸುವ ಹೊಣೆ ಮಗನದ್ದೇ!

ಪ್ರಕರಣದ ವಿವರ:

ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ರಂಗನಾಥ್‌ ತಂದೆ ಎನ್‌.ರಾಮಯ್ಯ 2002ರ ಅ.7ರಿಂದ ದಿಢೀರ್‌ ನಾಪತ್ತೆಯಾಗಿದ್ದರು. 2010ರಲ್ಲಿ ಅನುಕಂಪದ ಆಧಾರದಲ್ಲಿ ತಮಗೆ ಉದ್ಯೋಗ ನೀಡುವಂತೆ ಕೋರಿ ರಂಗನಾಥ್‌ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್‌ ತಿರಸ್ಕರಿಸಿತ್ತು. ಬಳಿಕ, ತಂದೆ ನಾಪತ್ತೆಯಾದ ಕಾರಣ ಸಿವಿಲ್‌ ನ್ಯಾಯಾಲಯಕ್ಕೆ ದಾವೆ ಹೂಡಿದ್ದ ರಂಗನಾಥ್‌, ತಂದೆ ಹೆಸರಿನಲ್ಲಿ ಮರಣ ಪತ್ರ ವಿತರಿಸಲು ಬಿಬಿಎಂಪಿಗೆ ಆದೇಶಿಸುವಂತೆ ಕೋರಿದ್ದರು. ದಾವೆಯನ್ನು ಪುರಸ್ಕರಿಸಿ ಸಿವಿಲ್‌ ನ್ಯಾಯಾಲಯ ನೀಡಿದ್ದ ಸೂಚನೆ ಮೇರೆಗೆ ರಾಮಯ್ಯ ಹೆಸರಿನಲ್ಲಿ ಬಿಬಿಎಂಪಿಯು 2011ರಲ್ಲಿ ಮರಣ ಪ್ರಮಾಣ ಪತ್ರ ನೀಡಿತ್ತು.

2012ರಲ್ಲಿ ರಂಗನಾಥ್‌ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ, ಅನುಕಂಪದ ಆಧಾರದಲ್ಲಿ ತಮಗೆ ನೌಕರಿ ಕಲ್ಪಿಸಲು ಕೆಪಿಟಿಸಿಎಲ್‌ಗೆ ಸೂಚಿಸುವಂತೆ ಕೋರಿದ್ದರು. ಆದರೆ, ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ, ರಂಗನಾಥ್‌ ಮನವಿಯನ್ನು ಕಾನೂನು ಪ್ರಕಾರದಲ್ಲಿ ಪರಿಗಣಿಸುವಂತೆ ಕೆಪಿಟಿಸಿಎಲ್‌ಗೆ ನಿರ್ದೇಶಿಸಿತ್ತು. ಪ್ರಕರಣ ಪರಿಶೀಲಿಸಿದ್ದ ಕೆಪಿಟಿಸಿಎಲ್‌, ರಂಗನಾಥ್‌ ಕುಟುಂಬದ ಸದಸ್ಯರು ಇದೇ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದ ಕಾರಣ ಅದೇ ಕುಟುಂಬದ ಮತ್ತೊಬ್ಬರಿಗೆ ಉದ್ಯೋಗಾವಕಾಶ ಕಲ್ಪಿಸಲಾಗದು ಎಂದು ತಿಳಿಸಿ 2013ರಲ್ಲಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರಂಗನಾಥ್‌ ಮತ್ತೆ ಸಲ್ಲಿಸಿದ್ದ ಅರ್ಜಿಯನ್ನು 2014ರಲ್ಲಿ ತಿರಸ್ಕರಿಸಿದ್ದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ, ಕೆಪಿಟಿಸಿಎಲ್‌ ಆದೇಶ ಎತ್ತಿಹಿಡಿದಿತ್ತು. ಇದರಿಂದ ರಂಗನಾಥ್‌ ಮೇಲ್ಮನವಿ ಸಲ್ಲಿಸಿದ್ದು, ಅದನ್ನೂ ಈಗ ವಿಭಾಗೀಯ ಪೀಠ ವಜಾಗೊಳಿಸಿದೆ.

Follow Us:
Download App:
  • android
  • ios