ಬ್ರಿಟನ್ನಿಂದ ಬಂದವರಲ್ಲಿ ಸೋಂಕಿದ್ದರೆ ಜೆನೆಟಿಕ್ ಪರೀಕ್ಷೆ
378 ಮಂದಿಯ ಫಲಿತಾಂಶ ಬಾಕಿ| ಸೋಂಕಿತರಲ್ಲಿ ‘ಬ್ರಿಟನ್ ವೈರಸ್’ ಇದೆಯೇ? ಹೆಚ್ಚಿನ ಪರೀಕ್ಷೆ| ವೈರಸ್‌ನ ಆರ್‌ಎನ್‌ಎ, ಡಿಎನ್‌ಎ ಬೇರ್ಪಡಿಸಿ ‘ಬ್ರಿಟನ್ ವೈರಸ್’ಗೆ ಹುಡುಕಾಟ: ತಜ್ಞರು|
ಬೆಂಗಳೂರು(ಡಿ.24): ಕೊರೋನಾ ಹೊಸ ಪ್ರಭೇದ ಕಾಣಿಸಿಕೊಂಡಿರುವ ಬ್ರಿಟನ್ ದೇಶದಿಂದ ರಾಜ್ಯಕ್ಕೆ ಬಂದು ಪಾಸಿಟಿವ್ ಆಗಿರುವವರ ಮಾದರಿಯನ್ನು ವಂಶವಾಹಿ ಅನುಕ್ರಮಣಿಕೆ (ಜೆನೆಟಿಕ್ ಸೀಕ್ವೆನ್ಸ್ ಅಥವಾ ಡಿಎನ್‌ಎ ಸಿಕ್ವೆನ್ಸ್) ಪರೀಕ್ಷೆ ಮಾಡಲಾಗುತ್ತದೆ.
ವಂಶವಾಹಿ ಅನುಕ್ರಮಣಿಕೆ ಪತ್ತೆ ಪ್ರಯೋಗದಲ್ಲಿ ವೈರಸ್ಸನ್ನು ತುಂಡರಿಸಿ ಅದರ ಆರ್‌ಎನ್‌ಎ ಅಥವಾ ಡಿಎನ್‌ಎಯನ್ನು ಬೇರ್ಪಡಿಸಲಾಗುತ್ತದೆ. ಉದಾಹರಣೆಗೆ ಆರ್‌ಎನ್‌ಎಯನ್ನು ಪ್ರಯೋಗಕ್ಕೆ ತೆಗೆದುಕೊಂಡರೆ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಆ ಬಳಿಕ ಈಗಾಗಲೇ ಪ್ರಚಲಿತದಲ್ಲಿರುವ ವೈರಸ್‌ಗಳ ಆರ್‌ಎನ್‌ಎಯ ಫಲಿತಾಂಶದೊಂದಿಗೆ ತಾಳೆ ನೋಡಲಾಗುತ್ತದೆ. ಈ ಸಂದರ್ಭದಲ್ಲಿ ಈಗಾಗಲೇ ಇರುವ ವೈರಸ್‌ಗಳ ಆರ್‌ಎನ್‌ಎಯ ಗುಣಲಕ್ಷಣದೊಂದಿಗೆ ಹೊಸ ವೈರಸ್‌ನ ಗುಣಲಕ್ಷಣಗಳು ತಾಳೆ ಆಗದಿದ್ದರೆ ಅದನ್ನು ಹೊಸ ರೂಪಾಂತರ ಎಂದು ಪರಿಗಣಿಸಲಾಗುತ್ತದೆ ಎಂದು ವೈರಾಲಜಿ ತಜ್ಞರು ಹೇಳುತ್ತಾರೆ.
ಈ ಸಂದರ್ಭದಲ್ಲಿ ಹಳೆಯ ವೈರಸ್‌ಗೂ ಹೊಸ ವೈರಸ್‌ಗೂ ಏನೆಲ್ಲಾ ವ್ಯತ್ಯಾಸಗಳಿವೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಮುಕ್ತಾಯಗೊಂಡು ಫಲಿತಾಂಶ ಪ್ರಕಟಗೊಳ್ಳಲು ಒಂದು ದಿನದಿಂದ ಒಂದು ವಾರದವರೆಗೂ ಸಮಯ ತೆಗೆದುಕೊಳ್ಳಬಹುದು. ಈಗ ನಿಮ್ಹಾನ್ಸ್ ಪ್ರಯೋಗಾಲಯದಲ್ಲಿ ರಾಜ್ಯದಲ್ಲಿ ಈ ಹಿಂದೆ ಕಂಡುಬಂದಿದ್ದ ವೈರಸ್‌ನ ಪ್ರಭೇದದ ಆರ್‌ಎನ್‌ಎಗೂ ಬ್ರಿಟನ್‌ನಿಂದ ಬಂದಿರುವ ವ್ಯಕ್ತಿಗಳ ಆರ್‌ಎನ್‌ಎಗೂ ತಾಳೆ ನೋಡಲಾಗುತ್ತಿದೆ.
ಬ್ರಿಟನ್ ವೈರಸ್ ಭೀತಿ ನಡುವೆಯೂ: ಕರ್ನಾಟಕದಲ್ಲಿ ಇಳಿಕೆ ಕಂಡ ಕೊರೋನಾ
ಬ್ರಿಟನ್ನಿಂದ ಬಂದ 1161 ಜನರ ಪೈಕಿ 3 ಜನರಲ್ಲಿ ಸೋಂಕು
ರಾಜ್ಯಕ್ಕೆ ಇತ್ತೀಚೆಗೆ ಬ್ರಿಟನ್‌ನಿಂದ ಆಗಮಿಸಿರುವ 1,161 ಮಂದಿಗೆ ಈವರೆಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ್ದು, ಈ ಪೈಕಿ 3 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನೂ 378 ಮಂದಿಯ ಪರೀಕ್ಷಾ ವರದಿ ಬರಬೇಕಿರುವುದರಿಂದ ಕೊರೋನಾ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಇನ್ನು ಪಾಸಿಟಿವ್ ವರದಿ ಬಂದ 3 ಮಂದಿಯ ಮಾದರಿಗಳನ್ನು ನಿಮ್ಹಾನ್ಸ್‌ನ ಪ್ರಯೋಗಾಲಯಕ್ಕೆ ಆನುವಂಶಿಕ ವಿವರಗಳ ಅಧ್ಯಯನಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಅದು ಬ್ರಿಟನ್‌ನ ರೂಪಾಂತರಗೊಂಡ ವೈರಸ್ ಅಥವಾ ಸಾಮಾನ್ಯ ಕೊರೋನಾ ವೈರಸ್ ಎಂಬುದು ತಿಳಿಯಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರಿನಿಂದ ಆಗಮಿಸಿರುವ ಒಟ್ಟು ಪ್ರಯಾಣಿಕರ ಪೈಕಿ ಡಿ.22 ಹಾಗೂ 23ರಂದು ಆರೋಗ್ಯ ಇಲಾಖೆ 980 ಮಂದಿಗೆ ಪರೀಕ್ಷೆ ನಡೆಸಿದೆ. ಇನ್ನು ಡಿ.20 ಹಾಗೂ 21ರಂದು ಆಗಮಿಸಿದ್ದ 211 ಮಂದಿ ಪೈಕಿ 181 ಮಂದಿಯ ಮಾದರಿಯನ್ನು ಬಿಬಿಎಂಪಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಒಟ್ಟು 1,161 ವರದಿಗಳ ಪೈಕಿ 783 ವರದಿ ಬಂದಿದ್ದು, ಈ ಪೈಕಿ ಮೂರು ಪಾಸಿಟಿವ್ ಎಂದು ತಿಳಿದುಬಂದಿದೆ. ಉಳಿದಂತೆ 378 ವರದಿಗಳು ಇನ್ನೂ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.