ಬೆಂಗಳೂರು(ಆ.20): ಸೋಂಕಿತರು ಮತ್ತವರ ಮೃತದೇಹಗಳನ್ನು ಸಾಗಿಸೋ ಆ್ಯಂಬುಲೆನ್ಸ್‌ಗಳ ದುರಸ್ತಿ ಮತ್ತು ವಾಟರ್‌ ಸರ್ವೀಸ್‌(ತೊಳೆಯುವ) ಮಾಡಲು ಗ್ಯಾರೇಜ್‌ಗಳ ಸಿಬ್ಬಂದಿ ಮುಂದೆ ಬರುತ್ತಲೇ ಇಲ್ಲ. ಅಷ್ಟೇ ಅಲ್ಲ ಆ್ಯಂಬುಲೆನ್ಸ್‌ ಚಾಲಕರನ್ನು ಕಂಡರೆ ಕೊರೋನಾ ವೈರಸ್‌ ಕಂಡಷ್ಟು ದೂರಕ್ಕೆ ಜನರು ಸರಿಯುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚುತ್ತಿದೆ.

ಇದರಿಂದಾಗಿ ಕರೋನಾ ವಾರಿಯರ್ಸ್‌ ಆಗಿರುವ ಆ್ಯಂಬುಲೆನ್ಸ್‌ ಚಾಲಕರ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಕೊರೋನಾ ಸೋಂಕು ದಿನೇ ದಿನೆ ಹೆಚ್ಚುತ್ತಿದೆ. ಜತೆಗೆ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಆ್ಯಂಬುಲೆನ್ಸ್‌ಗಳ ಕೊರತೆಯೂ ಹೆಚ್ಚಿದೆ. ಹೀಗಾಗಿ ಇರುವ ಆ್ಯಂಬುಲೆನ್ಸ್‌ಗಳ ಮೇಲೆ ಒತ್ತಡ ಹೆಚ್ಚಿದೆ. ಇದರ ಪರಿಣಾಮವಾಗಿ ವಾಹನಗಳು ದುರಸ್ತಿಗೆ ಬರುತ್ತಿವೆ. ಆದರೆ, ಖಾಸಗಿ ಆ್ಯಂಬುಲೆನ್ಸ್‌ಗಳು ರಿಪೇರಿ ಮತ್ತು ವಾಟರ್‌ ಸರ್ವೀಸ್‌ಗೆ ಹೋದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ರಿಪೇರಿಗೆ ನಿರಾಕರಿಸಿದ ಘಟನೆಗಳು ನಡೆದ ಬಗ್ಗೆ ಆ್ಯಂಬುಲೆನ್ಸ್‌ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು: ಕೇವಲ 5 ದಿನದಲ್ಲಿ 228 ಮಂದಿ ಬಲಿ ಪಡೆದ ಮಹಾಮಾರಿ ಕೊರೋನಾ

ಒಮ್ಮೆ ಕೊರೋನಾ ಸೋಂಕಿತರನ್ನು ಕರೆದುಕೊಂಡು ಬರುವಂತೆ ಸೂಚನೆ ನೀಡಲಾಗಿತ್ತು. ಪಿಪಿಇ ಕಿಟ್‌ ಧರಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಆ್ಯಂಬುಲೆನ್ಸ್‌ ಕೈಕೊಟ್ಟಿತ್ತು. ಸಮೀಪದಲ್ಲೇ ಜೆಸಿ ರಸ್ತೆಯ ಗ್ಯಾರೇಜ್‌ವೊಂದಕ್ಕೆ ರಿಪೇರಿ ಮಾಡಿಸಲು ಆ್ಯಂಬುಲೆನ್ಸನ್ನು ತಳ್ಳಿಕೊಂಡು ಹೋದೆವು. ನಮ್ಮನ್ನು ನೋಡುತ್ತಿದ್ದಂತೆ ಗ್ಯಾರೇಜಿನ ಮೆಕ್ಯಾನಿಕ್‌ ಸಾರಿ ಸರ್‌ ಇಲ್ಲಿ ಆ್ಯಂಬುಲೆನ್ಸ್‌ ರಿಪೇರಿ ಮಾಡುವುದಿಲ್ಲ ಎಂದು ಹೇಳಿದ ಎನ್ನುತ್ತಾರೆ ಆ್ಯಂಬುಲೆನ್ಸ್‌ ಚಾಲಕ ರಾಘವೇಂದ್ರ.
ಸ್ಟಾರ್ಟಿಂಗ್‌ ಟ್ರಬಲ್‌ ಇದೆ. ಸ್ವಲ್ಪ ನೋಡಿ ಎಮರ್ಜೆನ್ಸಿ ಇದೆ ಎಂದು ವಿನಂತಿಸಿದರೂ ಆತ ಆ್ಯಂಬುಲೆನ್ಸ್‌ ಬಳಿ ಬರಲು ತಯಾರಿರಲಿಲ್ಲ. ದೂರದಿಂದಲೇ ಆಗಲ್ಲವೆಂದು ಕಳುಹಿಸಿ ಬಿಟ್ಟ, ಜತೆಗೆ ಪಿಪಿಇ ಕಿಟ್‌ ಎಲ್ಲ ಹಾಕಿಕೊಂಡು ಇಲ್ಲಿಗೆ ಬರಬೇಡಿ ಸರ್‌, ಕಸ್ಟಮರ್‌ ನೋಡಿದರೆ ಹೆದರಿಕೆಯಿಂದ ಇಲ್ಲಿಗೆ ಬರೋದನ್ನೆ ನಿಲ್ಲಿಸುತ್ತಾರೆ ಎಂದು ಗದರುವ ದನಿಯಲ್ಲೇ ಹೇಳಿದ ಎಂದು ತಮ್ಮ ಕಹಿ ಅನುಭವವನ್ನು ರಾಘವೇಂದ್ರ ಹಂಚಿಕೊಳ್ಳುತ್ತಾರೆ.

ಗ್ಯಾರೇಜ್‌ ಮಾಲಿಕ ಸಯ್ಯದ್‌ ಅಬ್ಬಾಸ್‌ ಆಲಿ ಹೇಳುವಂತೆ ನಮಗೂ ಕುಟುಂಬ, ಮಕ್ಕಳು ಇದ್ದಾರೆ. ಸೋಂಕಿತರನ್ನು ಸಾಗಿಸುವ ಆ್ಯಂಬುಲೆನ್ಸ್‌ನಿಂದ ಎಲ್ಲಾದರೂ ಸೋಂಕು ಬಂದು ಬಿಡಬಹುದೆಂಬ ಆತಂಕ ನಮ್ಮ ಹುಡುಗರಿ(ಸಿಬ್ಬಂದಿ)ಗಿದೆ. ಆದರೂ ಕೆಲವೊಮ್ಮೆ ಆ್ಯಂಬುಲೆನ್ಸ್‌ ವಾಟರ್‌ ವಾಶ್‌ ಮಾಡಿಕೊಟ್ಟಿದ್ದೇವೆ. ಅವರ ಕೆಲಸದ ಬಗ್ಗೆ ತುಂಬಾ ಗೌರವವಿದೆ. ಆದರೊಂದಿಗೆ ಭಯವೂ ಇದೆ ಎಂದು ಅಳಲು ತೋಡಿಕೊಂಡರು.

ನಗರದಲ್ಲಿ 2 ಸಾವಿರ ಆ್ಯಂಬುಲೆನ್ಸ್‌ಗಳು

ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಖಾಸಗಿ ಟ್ರಾವೆಲ್‌ ಏಜೆನ್ಸಿ ವಾಹನ(ಟೆಂಪೋ ಟ್ರಾವೆಲ್ಸ್‌)ಗಳನ್ನು ಬಾಡಿಗೆ ಆಧಾರದಲ್ಲಿ ಜಿಲ್ಲಾಡಳಿತಗಳು ಕರ್ತವ್ಯಕ್ಕೆ ನೇಮಿಸಿವೆ. ಹೀಗೆ ಸುಮಾರು ನಾಲ್ಕರಿಂದ ಐದು ಸಾವಿರ ಖಾಸಗಿ ಆ್ಯಂಬುಲೆನ್ಸ್‌ಗಳು ಹಗಲಿರುಳು ಕೆಲಸ ಮಾಡುತ್ತಿವೆ. ಬೆಂಗಳೂರು ಒಂದರಲ್ಲೇ 500ರಿಂದ 600 ಖಾಸಗಿ ಆ್ಯಂಬುಲೆನ್ಸ್‌ಗಳು, 108 ಆ್ಯಂಬುಲೆನ್ಸ್‌ಗಳು 150ರಿಂದ 200 ಸೇರಿದಂತೆ ಬಿಬಿಎಂಪಿ ಮತ್ತು ಇತರೆ ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್‌ ಸೇರಿ ಬರೋಬ್ಬರಿ ಎರಡು ಸಾವಿರ ಆ್ಯಂಬುಲೆನ್ಸ್‌ಗಳು ಇವೆ.

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲ ಗ್ಯಾರೇಜ್‌ ಮತ್ತು ಸವೀಸ್‌ ಸೆಂಟರ್‌ಗಳು ಬಂದ್‌ ಆಗಿದ್ದವು. ಆದ್ದರಿಂದ ಬಾಡಿಗೆಗೆ ಪಡೆದಿದ್ದ ಬಿಬಿಎಂಪಿ ಆ್ಯಂಬುಲೆನ್ಸ್‌ ಸ್ವಚ್ಛತೆಗೆಂದೇ ಗುತ್ತಿಗೆ ಆಧಾರದಲ್ಲಿ ಸಂಸ್ಥೆಯೊಂದನ್ನು ನೇಮಿಸಿತ್ತು. ಆ್ಯಂಬುಲೆನ್ಸ್‌ಗಳ ಸ್ಯಾನಿಟೈಸಿಂಗ್‌ ಮತ್ತು ಸ್ವಚ್ಛತೆಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಬಹುತೇಕ ಸಮಯದಲ್ಲಿ ಆ್ಯಂಬುಲೆನ್ಸ್‌ ಚಾಲಕರೇ ಅದನ್ನು ನಿರ್ವಹಿಸುತ್ತಿದ್ದಾರೆ. ಕೆಲವೆಡೆ ಆ್ಯಂಬುಲೆನ್ಸ್‌ ಮತ್ತು ಅದರ ಚಾಲಕರನ್ನು ಜನ ಭೀತಿಯಿಂದಲೇ ನೋಡಿದ ಘಟನೆ ನಡೆದಿದ್ದರೂ ಈಗ ಸ್ವಲ್ಪ ಜನರಲ್ಲಿ ಅರಿವು ಮೂಡಿದೆ ಎಂದು ಅಖಿಲ ಕರ್ನಾಟಕ ಆ್ಯಂಬುಲೆನ್ಸ್‌ ಅಸೋಸಿಯೇಷನ್‌ ಸದಸ್ಯ ಬಿ.ವಿಶ್ವನಾಥ್‌ ಮಾಹಿತಿ ನೀಡುತ್ತಾರೆ.