ಗಂಗಾ ಆರತಿ ಮಾದರಿಯಲ್ಲಿ, ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 26 ರಿಂದ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಐದು ದಿನಗಳ ಕಾಲ ಕಾವೇರಿ ಆರತಿ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು (ಸೆ.24): ಗಂಗಾ ಆರತಿ ಮಾದರಿಯ ಕಾವೇರಿ ಆರತಿಯನ್ನು ಸೆ. 26ರಿಂದ 5 ದಿನಗಳ ಕಾಲ ನಡೆಸಲಾಗುತ್ತಿದ್ದು, ಶುಕ್ರವಾರ ಸಂಜೆ 5 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೃಷಿ ಸಚಿವ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕಾವೇರಿ ತಾಯಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಕಾವೇರಿ ಆರತಿ ಕಾರ್ಯಕ್ರಮ ಆರಂಭಿಸುತ್ತಿದೆ. ಸೆ. 26ರಂದು ಸಂಜೆ 5 ಗಂಟೆಗೆ ಡಿ.ಕೆ. ಶಿವಕುಮಾರ್ ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾವೇರಿ ಆರತಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ಶಾಸಕರಾದ ರಮೇಶ್‌ಬಾಬು ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿ ಗಣಿಗ, ಕೆ.ಎನ್.ಉದಯ್, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಸೇರಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ದಸರಾದಲ್ಲಿ 3000 ಡ್ರೋನ್ ಗಿನ್ನೆಸ್ ದಾಖಲೆಗೆ ಪ್ರಯತ್ನ, ಯಾವ ದಿನ ನೋಡಬಹುದು? ಇಲ್ಲಿದೆ ವಿವರ
ಸಾಂಕೇತಿಕ ಕಾರ್ಯಕ್ರಮ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದರು. ಅದರಂತೆ ಎನ್.ಚಲುವರಾಯಸ್ವಾಮಿ ನೇತೃತ್ವದ ಶಾಸಕರ ನಿಯೋಗ ವಾರಾಣಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾರತಿಯನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಅದರ ಆಧಾರದ ಮೇಲೆ ಕಾವೇರಿ ಆರತಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, 10 ಸಾವಿರ ಜನ ಮಂದಿ ಕಾವೇರಿ ಆರತಿ ವೀಕ್ಷಣೆಗೆ ಅನುವು ಮಾಡಿಕೊಡುವುದಕ್ಕೆ ಯೋಜಿಸಲಾಗಿದೆ. ಅದರ ಭಾಗವಾಗಿ ಈ ಬಾರಿ ದಸರಾ ಹಬ್ಬದಂದು ಸಾಂಕೇತಿಕವಾಗಿ 5 ದಿನಗಳ ಕಾಲ ಕೆಆರ್‌ಎಸ್ ಜಲಾಶಯದಲ್ಲಿ ಕಾವೇರಿ ಆರತಿ ಮಾಡಲಾಗುತ್ತಿದೆ.
