Asianet Suvarna News Asianet Suvarna News

ಈ ಬಾರಿ ಮಣ್ಣಿನ ಬದಲು ಅರಶಿಣ ಗಣಪನ ಪೂಜಿಸೋಣ!

ಗೌರಿ ಗಣೇಶ ಪ್ರತಿಮೆಗಳು ಪೈಪೋಟಿಯ ಮೇಲೆ ಮಾರುಕಟ್ಟೆಗೆ ಬರುವ ಮೊದಲು ಅರಿಶಿಣ ಗೌರಮ್ಮ ಹಾಗೂ ಸಗಣಿಯ ಪಿಳ್ಳಾರಾಯನನ್ನು ಮನೆಯಲ್ಲಿಯೇ ಮಾಡಿಕೊಂಡು ಪೂಜಿಸುತ್ತಿದ್ದರು. ಕೋವಿಡ್‌ ವಿರುದ್ಧದ ಶಕ್ತಿಯಾಗಿ ನಾವೂ ಅದೇ ಹಾದಿಯನ್ನು ಅನುಸರಿಸಬಹುದು.

Ganesha Chaturthi Lets make eco friendly Turmeric Ganesha
Author
Bangalore, First Published Aug 21, 2020, 5:48 PM IST

ಶ್ರೀನಿವಾಸುಲು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ

ಈ ಶತಮಾನದ 2ನೇ ದಶಕದ ಕೊನೆಯ ವರ್ಷ ವಿಶ್ವಕ್ಕೆ ಶಾಪಗ್ರಸ್ತ ವರ್ಷ. ಕಳೆದ ವರ್ಷಾಂತ್ಯದಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌-19 ವೈರಾಣು ಕ್ರಮೇಣ ಇಡೀ ವಿಶ್ವಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡಿತು. ಈ ಹೊಸ ರೋಗಾಣು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಪಾರ ಸಾವು ನೋವು ತರುವ ಮೂಲಕ ಜನರ ಬದುಕನ್ನು ತಲ್ಲಣಗೊಳಿಸಿತು. ಈ ವರ್ಷದ ಯುಗಾದಿಯ ಆದಿಯಿಂದ ನಮ್ಮ ದೇಶದಲ್ಲಿಯೂ ಜನತೆ ಆತಂಕದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಪರಂಪರೆಯಲ್ಲಿ ವೈವಿಧ್ಯಮಯ ಹಬ್ಬ ಹರಿದಿನಗಳು, ಉತ್ಸವಗಳು ಮುಂತಾದ ವಿಶೇಷ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ಸಾಮಾಜಿಕ ಪಿಡುಗು, ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಾವು-ನೋವುಗಳ ನಡುವೆಯೂ ನಮ್ಮ ಆಚರಣೆಗಳು ನಿಲ್ಲದೆ ಸಾಗಿ ಬಂದಿವೆ. ಇಂತಹ ಸಂಕಷ್ಟಸ್ಥಿತಿಯಲ್ಲಿ ವಿಘ್ನನಿವಾರಕ, ಪ್ರಥಮ ಪೂಜಾಧಿಪತಿ ವಿನಾಯಕನ ಹಬ್ಬ ಮರಳಿ ಬಂದಿದೆ.

ಈ ಬಾರಿಯ ವಿನಾಯಕ ಚೌತಿಯನ್ನು ಪರಿಸರಸ್ನೇಹಿಯಷ್ಟೇ ಅಲ್ಲ, ಕೋವಿಡ್‌-19 ಸೋಂಕಿನ ವಿರುದ್ಧ ಹೋರಾಟ ಮಾಡಲು ನಾವು ಅಣಿಗೊಳಿಸಿಕೊಳ್ಳಬೇಕಿದೆ. ಗಣಪತಿ ಹಬ್ಬದಲ್ಲಿ ಬಳಸುವ ಗರಿಕೆ, ಇಪ್ಪತ್ತೊಂದು ವಿಧದ ಪತ್ರೆಗಳು, ಅಂದಿನ ಹಬ್ಬದಲ್ಲಿ ವಿಶೇಷವಾಗಿ ನೈವೇದ್ಯಕ್ಕೆಂದು ಮಾಡುವ ಕಡುಬಿಗೆ ಬಳಸುವ ಎಳ್ಳು ಈ ಎಲ್ಲವೂ ಔಷಧಯುಕ್ತವಾಗಿವೆ. ಮನುಷ್ಯನ ಜೀವ ಉಳಿಸುವಲ್ಲಿ ಒಂದಲ್ಲಾ ಒಂದು ಬಗೆಯಲ್ಲಿ ಈ ನೈಸರ್ಗಿಕ ಉತ್ಪನ್ನಗಳು ಅನುಕೂಲಕರವಾಗಿವೆ. ನಮ್ಮ ಹಬ್ಬ ಹರಿದಿನಗಳ ವೈಶಿಷ್ಟ್ಯವೇ ಹಾಗಿದೆ. ಸಂಕ್ರಾಂತಿಗೆ ಸಿದ್ಧ ಮಾಡುವ ಎಳ್ಳು ಬೆಲ್ಲ, ಯುಗಾದಿಗೆ ಭಕ್ಷಿಸುವ ಬೇವು ಬೆಲ್ಲ, ಹಲವಾರು ಹಬ್ಬಗಳಲ್ಲಿ ಬಲಸುವ ವೈವಿಧ್ಯಮಯ ತರಕಾರಿ, ಹಣ್ಣು ಹಂಪಲು ಎಲ್ಲವೂ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿವೆ.

ಪೂಜಾದ್ರವ್ಯಗಳಲ್ಲಿ ರೋಗನಿರೋಧ ಶಕ್ತಿ

ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಪಂಚಭೂತಗಳಾದ ವಾಯು, ಜಲ, ಭೂಮಿ, ಅಗ್ನಿ ಮತ್ತು ಆಕಾಶ ಇವೆಲ್ಲವು ಅತಿ ಪೂಜನಿಯವಾಗಿದ್ದು ಭಗವಂತನ ಸ್ವರೂಪ ಹೊಂದಿವೆ. ನಮ್ಮ ಪರಿಸರದ ಸಕಲ ಜೀವರಾಶಿ ಸೃಷ್ಟಿಗೆ, ಈ ಪಂಚಭೂತಗಳೇ ಕಾರಣ ಎಂದು ಹೇಳಲಾಗಿದೆ. ಹಿಂದೂ ಧರ್ಮದ ಆಚರಣೆಗಳಲ್ಲಿನ ಪಂಚಭೂತಗಳ ಪೂಜೆಯು ಪರಿಸರ ಸಂರಕ್ಷಣೆಯ ಪ್ರತಿರೂಪವಾಗಿದೆ ಎಂಬುದು ಸಮರ್ಥನೀಯವಾಗಿದೆ. ನಾವು ಕುಡಿಯುವ ನೀರು, ಸೇವಿಸುವ ಗಾಳಿ ಹಾಗೂ ಭೂಮಿಯನ್ನು ಮಾಲಿನ್ಯ ಮಾಡುವುದು ದೇವರಿಗೆ ಮಾಡುವ ಅಪಚಾರವಾಗುತ್ತದೆ ಎಂದು ಬಣ್ಣಿಸಲಾಗಿದೆ. ದೇವರ ಆರಾಧನೆ ಮಾಡುವುದು ಪರಿಸರ ಪೂರಕವಾಗಿರುವುದೇ ಹೊರತು ಇದರಿಂದ ಎಂದೂ ಪರಿಸರ ಹಾನಿಯಾಗುವುದಿಲ್ಲ.

ನಮ್ಮ ದಾರ್ಮಿಕ ಆಚರಣೆಗಳಲ್ಲಿ ಬಳಸುವ ಅರಿಶಿಣ, ಗೋಮೂತ್ರ, ಸಗಣಿ, ಬೇವು, ತುಳಸಿ ಮುಂತಾದವು ನಮ್ಮ ಮನಸ್ಸು ಮತ್ತು ದೇಹವನ್ನು ಶುಚಿಗೊಳಿಸುವಂತ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಪೂಜಾದ್ರವ್ಯಗಳಾದ ಅರಿಶಿಣ, ಗಂಧ, ಕರ್ಪೂರ, ಸಾಮ್ರಾಣಿ ಮುಂತಾದವುಗಳಲ್ಲಿ ರೋಗನಿರೋಧಕ ಶಕ್ತಿಯಷ್ಟೇ ಅಲ್ಲ, ಕೆಲವು ಕೀಟನಾಶಕಗಳೂ ಹೌದು.ಅಡುಗೆಯಲ್ಲಿ ನಾವು ಬಳಸುವ ದಾಲ್ಚಿನ್ನಿ, ಲವಂಗ, ಏಲಕ್ಕಿ, ಧನಿಯಾ, ಜೀರಿಗೆ, ಮೆಣಸು ಹಲವಾರು ಚಿಕಿತ್ಸಕ ಗುಣಗಳನ್ನು ಹೊಂದಿದೆ. ಅರಿಶಿಣ ವೈದ್ಯಕೀಯವಾಗಿ ಬಹಳವಷ್ಟುಗುಣಗಳನ್ನು ಹೊಂದಿದ್ದು, ಪ್ರಬಲ ರೋಗನಿರೋಧಕವಾಗಿದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬಳಸುವ ಇನ್ನೂ ಹಲವು ಸಂಬಾರ ಜಿನಿಸು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಾಗೆಯೇ ತರಕಾರಿಗಳಲ್ಲೂ ಉತ್ತಮ ಔಷಧೀಯ ಗುಣಗಳಿವೆ. ಬೆಳ್ಳುಳ್ಳಿ, ಈರುಳ್ಳಿ ದೇಹದ ಆರೋಗ್ಯ ಕಾಪಾಡುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ.

ಅರಿಶಿಣದ ಮಹತ್ವವೇನು?

ಅರಿಶಿಣವನ್ನು ಸರಿಯಾದ ಪ್ರಮಾಣದಲ್ಲಿ ಬಿಸಿ ಹಾಲಿಗೆ ಬೆರೆಸಿ ಕುಡಿಯುವುದರಿಂದ ಬಹಳಷ್ಟುಪ್ರಯೋಜನಗಳುಂಟು. ಹಳದಿ ಬಣ್ಣದ ಅರಿಶಿಣಕ್ಕೆ ಸನಾತನ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ಮಂಗಳ ಕಾರ್ಯಗಳಲ್ಲಿ ಅರಿಶಿಣವೇ ಪ್ರಧಾನ. ಇದು ಗ್ರಹಗಳಲ್ಲಿ ಗುರುವಿಗೆ ಸಂಬಂಧಿಸಿದ ದ್ರವ್ಯ ಎಂದು ಹೇಳಲಾಗುತ್ತದೆ. ಇಡೀ ಕುಂಡಲಿಯಲ್ಲಿ ಯೋಗ ಪ್ರಾಪ್ತಿಯನ್ನೂ, ದುರ್ಯೋಗ ನಿವಾರಣೆಯನ್ನೂ ಮಾಡುವವನೇ ಗುರು ಎಂಬುದು ಜ್ಯೋತಿಶ್ಯಾಸ್ತ್ರದ ಅಭಿಮತ.

ಹಳದಿ ಬಣ್ಣ ಜ್ಞಾನದ ಸಂಕೇತ. ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಅರಿಶಿಣ ಮಹತ್ವ ಪಡೆದಿದೆ. ಮಾನಸಿಕ ಉದ್ವೇಗಗಳನ್ನು ನಿಯಂತ್ರಿಸುವ ಶಕ್ತಿ ಇದರಲ್ಲಿದೆ. ಅಲ್ಲದೆ, ಅರಿಶಿಣಕ್ಕೆ ಸೋಂಕು ನಿವಾರಕ ವಿಶೇಷ ಗುಣವೂ ಇದೆ. ಹಳದಿ ಬಣ್ಣದ ಅರಿಶಿಣವನ್ನು ರೋಗನಿರೋಧಕವಾಗಿ ಬಳಸಲಾಗುತ್ತದೆ. ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಸಾಮಾನ್ಯವಾಗಿ ಹಳದಿ ಬಣ್ಣದ ದೀಪಗಳನ್ನು ಬಳಸುತ್ತಾರೆ. ಹಳದಿ ಬಣ್ಣ ರೋಗಿಗೆ ನೋವಿನ ಅನುಭವದ ಅರಿವು ಕಡಿಮೆಯಾಗುತ್ತದೆಂಬ ವೈಜ್ಞಾನಿಕ ಕಾರಣಕ್ಕೆ ಹಳದಿ ದೀಪ ಬಳಸಲಾಗುತ್ತದೆ. ಆಧುನಿಕ ವಿಜ್ಞಾನಕ್ಕೂ ನಿಲುಕದ ಹಲವು ಸತ್ಯಗಳು ಪ್ರಕೃತಿಯಲ್ಲಿ ಅಡಗಿವೆ.

ಜನಜಾಗೃತಿಯ ಅನಿವಾರ‍್ಯತೆ

ನಮ್ಮ ಹಬ್ಬ ಹರಿದಿನಗಳ ಆಚರಣೆಯಲ್ಲಿ ಕ್ರಮೇಣ ಬಹಳಷ್ಟುಸುಧಾರಣೆಗಳಾಗಿರುವುದನ್ನು ಗಮನಿಸಬಹುದು. ಗಣೇಶನ ಹಬ್ಬ ನಮ್ಮ ಸಂಸ್ಕೃತಿಯ ಮಹತ್ವದ ಹಬ್ಬವಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾದರ ತಿಲಕರು ನಮ್ಮಲ್ಲಿನ ರಾಷ್ಟ್ರೀಯ ಅಭಿಮಾನವನ್ನು ಜಾಗೃತಗೊಳಿಸಲು ಸಾಮೂಹಿಕ ಗಣಪತಿ ಉತ್ಸವಗಳ ಪದ್ಧತಿಯನ್ನು ಬಳಕೆಗೆ ತಂದದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ನೂರು ವರ್ಷದ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ವಿಷಯ ಬಹಳ ಮುಖ್ಯವಾಗಿತ್ತು. ಆದರೆ ಇಂದು ಪರಿಸರ ಮಾಲಿನ್ಯ ತಡೆ ಮತ್ತು ಪರಿಸರ ಅಸಮತೋಲನ ಮಾಡದಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಅದರಲ್ಲೂ ಈ ವರ್ಷವಂತೂ ಕೋವಿಡ್‌-19 ವಿಶ್ವವಿಡೀ ವ್ಯಾಪಿಸಿರುವ ಪರಿಸ್ಥಿತಿಯಲ್ಲಿ ಜನಜಾಗೃತಿ ಅನಿವಾರ್ಯವೂ ಆಗಿದೆ. ಮನುಷ್ಯ ತನ್ನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದರಿಂದ ಕೋವಿಡ್‌-19 ಸೋಂಕನ್ನು ಎದುರಿಸಬಹುದೆಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿಯೂ ಆಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಪರಿಶುದ್ಧವಾದ ಮನಸ್ಸು, ಧ್ಯಾನ, ಯೋಗ, ಕುಟುಂಬದವರೊಂದಿಗೆ ಪ್ರೀತಿಯ ಮಾತುಕತೆ ಕೊರೋನಾ ಹಿಮ್ಮೆಟ್ಟಿಸಲು ಸಹಕಾರಿ.

ಪಿಒಪಿ ಗಣೇಶ ಬೇಡವೇ ಬೇಡ

ಪಿ.ಒ.ಪಿ ಮತ್ತು ಬಣ್ಣದ ಗಣೇಶನ ಮೂರ್ತಿ ಬಳಕೆಯಿಂದ ಪರಿಸರಕ್ಕೆ ಅಪಾರ ಹಾನಿಯುಂಟಾಗುತ್ತದೆ. ಇಂತಹ ಕೃತ್ಯ ನಾವು ಪ್ರಕೃತಿಗೆ ಎಸಗುವ ದ್ರೋಹ ಮತ್ತು ಅಪರಾಧವೂ ಆಗುತ್ತದೆ. ನೀರಿನಲ್ಲಿ ಕರಗದ, ಮಣ್ಣಿನಲ್ಲಿ ಮಣ್ಣಾಗದ ಪಿಒಪಿ ಪರಿಸರವನ್ನು ಹಾಳುಗೆಡುಹುತ್ತದೆ. ಗಣೇಶ ಮೂರ್ತಿಗಳಿಗೆ ಬಳಿಯುವ ಅಪಾಯಕಾರಿ ಬಣ್ಣಗಳು ವಿಷಯುಕ್ತವಾಗಿದ್ದು, ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ಅವುಗಳ ವಿಷಲೇಪನ ನೀರು ಹಾಗೂ ಮಣ್ಣಿನಲ್ಲಿ ಬೆರೆತು ಪ್ರಕೃತಿಯನ್ನು ಹಾಳು ಮಾಡುತ್ತವೆ.

ಹಬ್ಬದ ಸಮಯದಲ್ಲಿ ಹಚ್ಚುವ ಪಟಾಕಿಗಳಿಂದ ಬರುವ ಇಂಗಾಲದ ಡೈ ಆಕ್ಸೈಡ್‌ ಹಾಗೂ ಇತರ ವಿಷಾನಿಲಗಳು ಗಾಳಿಗೆ ಸೇರಿ ವಾಯುಮಾಲಿನ್ಯ ಉಂಟು ಮಾಡುತ್ತವೆ. ಪ್ರಕೃತಿಯಲ್ಲಿ ನಾವು ನೈಸರ್ಗಿಕವಾದ ಮಣ್ಣನ್ನೂ ಅಲಕ್ಷ ಮಾಡುವಂತಿಲ್ಲ. ಒಂದು ಇಂಚು ಮಣ್ಣು ರೂಪುಗೊಳ್ಳಲು ಸುಮಾರು ಒಂದು ಸಾವಿರ ವರ್ಷ ಬೇಕಾಗುತ್ತದೆ. ಇಂತಹ ಮಹತ್ವಯುತ ಮೃತ್ತಿಕೆಯನ್ನು ಗಣೇಶನ ವಿಗ್ರಹಕ್ಕೆ ಬಳಕೆ ಮಾಡಿದರೆ ಫಲವತ್ತಾದ ಮಣ್ಣನ್ನು ಪ್ರಕೃತಿ ಕಳೆದುಕೊಳ್ಳುತ್ತದೆ. ಗಣಪತಿ ಪ್ರತಿಮೆ ಮಾಡಲು ಬಳಸುವ ಜೇಡಿಮಣ್ಣು ನಮ್ಮ ಕೃಷಿಗೆ ಹಾಗೂ ಜೀವರಾಶಿಗೆ ಬಹಳ ಮುಖ್ಯ. ಗೌರಿ ಗಣೇಶ ಪ್ರತಿಮೆಗಳು ಪೈಪೋಟಿಯ ಮೇಲೆ ಮಾರುಕಟ್ಟೆಗೆ ಬರುವ ಮೊದಲು ಅರಿಶಿಣ ಗೌರಮ್ಮ ಹಾಗೂ ಸಗಣಿಯ ಪಿಳ್ಳಾರಾಯನನ್ನು ಮನೆಯಲ್ಲಿಯೇ ಮಾಡಿಕೊಂಡು ಪೂಜಿಸುತ್ತಿದ್ದರು.

ಅರಿಶಿಣ ಗಣೇಶನ ಪೂಜಿಸೋಣ

ಇಂತಹ ಸಂದಿಗ್ಧ ಕಾಲದಲ್ಲಿ ಮನೆ ಮನೆಗಳಲ್ಲಿ ಮಣ್ಣಿನ ಅಥವಾ ರೋಗನಿರೋಧಕ ಶಕ್ತಿಯುಳ್ಳ ಅರಿಶಿಣ ಮಿಶ್ರಿತವಾದ ಗೋಧಿ ಹಿಟ್ಟು ಅಥವಾ ರಾಗಿಹಿಟ್ಟಿನಿಂದ ಮಾಡಿದ ಪುಟ್ಟಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ನಮ್ಮ ಹಾಗೂ ಕುಟುಂಬದ ರೋಗ ನಿರೋಧÜಕ ಶಕ್ತಿ ಹೆಚ್ಚುತ್ತದೆ ಎಂಬ ಹೊಸತನವನ್ನು ನಾವು ತಂದುಕೊಳ್ಳಬೇಕಾಗಿದೆ. ಪ್ಲಾಸ್ಟಿಕ್‌ರಹಿತ ವಸ್ತುಗಳಾದ ಹೂವು ಪತ್ರೆಗಳಿಂದ ಸಿಂಗರಿಸಿ ಆನಂದ ಪಡಬಹುದು. ಅರಿಶಿಣ ಗಣೇಶನ್ನು ಕೂರಿಸಲು ಪೀಠವಾಗಿ ತೆಂಗಿನ ಕರಟವನ್ನು ಉಪಯೋಗಿಸಬಹುದು. ರೋಗನಿರೋಧಕ ಪರಿಕರ ಬಳಸಿ ಮನೆಯಲ್ಲಿ ಗಣೇಶನ ವಿಗ್ರಹ ಮಾಡಿ ಮನೆಯಲ್ಲೇ ವಿಸರ್ಜಸಿದರೆ ಹೊರಗಿನ ಸಂಪರ್ಕ ಹೊಂದುವ ಅವಶ್ಯಕತೆ ಬರುವುದಿಲ್ಲ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಂತಾಗುತ್ತದೆ. ವಿಸರ್ಜಿತ ನೀರಿನಿಂದ ಮನೆಯನ್ನು ಶುಚಿ ಮಾಡಿಕೊಂಡರೆ ಕ್ರಿಮಿನಾಶÜಕವಾಗಿಯೂ ಬಳಕೆಗೆ ಬರುತ್ತದೆ. ಈ ಬಾರಿ ಗೌರಿ ಗಣೇಶ ಹಬ್ಬವನ್ನು ಕೋವಿಡ್‌ ನಿರೋಧಕ ಅರಿಶಿಣ ಬಳಸಿದ ಪುಟ್ಟಪ್ರತಿಮೆಗಳನ್ನು ಇರಿಸಿ ಆಚರಿಸುವ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕಾದ ಅನಿವಾರ್ಯತೆಯಿದೆ.

ನೂರು ವರ್ಷದ ಹಿಂದೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಸಹಕಾರಿಯಾದ ಗಣೇಶನ ಹಬ್ಬ ಆಚರಣೆಯು ಇಂದು ಪರಿಸರ ಸ್ನೇಹಿ ಅರಿಶಿಣ ಗಣೇಶ ಹಬ್ಬದ ಆಚರಣೆ ಮೂಲಕ ನಮ್ಮ ಪರಿಸರದ ಉಳಿವಿಗೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ. ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆಯ ಬಗ್ಗೆ ತಿಳಿಯಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಲತಾಣವನ್ನು ವೀಕ್ಷಿಸಬಹುದು.

Follow Us:
Download App:
  • android
  • ios