ಬೆಂಗಳೂರು(ಜು.31): ಪ್ರತಿ ವರ್ಷ ಗೌರಿ ಗಣೇಶ ಹಬ್ಬದ ಸಮಯದಲ್ಲಿ ವಿಗ್ರಹ ಮಾರಾಟದಿಂದ ಸಾವಿರಾರು ರುಪಾಯಿ ಲಾಭ ಗಳಿಸುತ್ತಿದ್ದ ಕುಂಬಾರರಿಗೆ ಕೊರೋನಾ ಸವಾಲಾಗಿ ಪರಿಣಮಿಸಿದೆ. ನಗರದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ವಿಗ್ರಹಗಳ ಮಾರಾಟಕ್ಕೆ ಅವಕಾಶವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೋನಾ ಸೋಂಕು ಜನಸಾಮಾನ್ಯರ ಬದುಕನ್ನೇ ಛಿದ್ರಗೊಳಿಸಿದೆ. ಇದರಿಂದ ಈಗ ಕುಂಬಾರರೂ ಹೊರತಾಗಿಲ್ಲ. ಮಣ್ಣಿನ ಮಡಿಕೆ, ದೀಪಗಳು, ದೇವರ ವಿಗ್ರಹಗಳನ್ನು ಮಾಡಿ ಅದನ್ನು ಮಾರಿ ಬಂದ ಹಣದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಇರುವುದರಿಂದ ಬೀದಿ ಬದಿಯಲ್ಲಿ ಮಾರಾಟಕ್ಕೆ ಅವಕಾಶ ನೀಡಿಲ್ಲ. ಇದರಿಂದ ಕುಂಬಾರರು ದುಡಿಮೆ ಇಲ್ಲದೆ ಕಣ್ಣೀರಿನಲ್ಲಿ ಬಾಳು ದೂಡಬೇಕಾಗಿದೆ.

ಕೊರೋನಾ ಕಾಟ: ಬೆಂಗಳೂರಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್‌?

ಶ್ರಾವಣ ಮಾಸಕ್ಕೂ ಮುನ್ನವೇ ವರಮಹಾಲಕ್ಷ್ಮಿ, ಗೌರಿ ಗಣೇಶ, ದೀಪಾವಳಿ ಹಬ್ಬಕ್ಕಾಗಿ ದೇವರ ವಿಗ್ರಹಗಳು, ಅಲಂಕಾರಿಕ ದೀಪಗಳನ್ನು ತಯಾರಿಸುತ್ತಾರೆ. ವರ್ಷಾರಂಭದಲ್ಲೇ ಗೌರಿ ಗಣೇಶ ಹಬ್ಬಕ್ಕಾಗಿ ಗಣೇಶ, ಗೌರಿ ವಿಗ್ರಹಗಳನ್ನು ತಯಾರಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ಕುಂಬಾರರರು ಗೌರಿ ಗಣೇಶ ಹಬ್ಬದ ಹಿನ್ನೆಲೆ ಲಕ್ಷಾಂತರ ರು. ಬಂಡವಾಳ ಹಾಕಿ ಫೆಬ್ರವರಿಯಲ್ಲೇ ಗೌರಿ, ಗಣೇಶನ ವಿಗ್ರಹಗಳನ್ನು ರೂಪಿಸಿದ್ದಾರೆ. ಆದರೆ, ಕೊರೋನಾ ವ್ಯಾಪಾರಕ್ಕೆ ತೊಡಕ್ಕಾಗಿದ್ದು, ಮಾರಾಟಕ್ಕೆ ಅವಕಾಶ ಸಿಕ್ಕಿಲ್ಲ.

ಪಾಟರಿ ಟೌನ್‌ನಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆ ವೃತ್ತಿಯನ್ನು ಅವಲಂಬಿಸಿದ್ದಾರೆ. ಇನ್ನು ಕುಂಬಳಗೋಡು, ನೆಲಮಂಗಲದ ಕಡೆಯಲ್ಲೂ ಬಹುತೇಕ ಕುಂಬಾರರು ವಿಗ್ರಹಗಳ ತಯಾರಿಕೆಯನ್ನೇ ಬದುಕಾಗಿಸಿಕೊಂಡಿದ್ದಾರೆ. ವಿಗ್ರಹಗಳ ಮಾರಾಟವನ್ನು ಅವಲಂಬಿಸಿದವರಿಗೆ ಈಗ ದಿಕ್ಕು ಕಾಣದಂತಾಗಿದೆ. ಇದರಿಂದ ಪ್ರತಿ ವರ್ಷ ಸಾವಿರಾರು ರು. ವಹಿವಾಟು ನಡೆಸುತ್ತಿದ್ದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಕೊರೋನಾದಿಂದ ಜನರು ಮನೆಯಲ್ಲಿಯೇ ಪ್ರತಿಷ್ಠಾಪಿಸುವ ಪುಟ್ಟಪುಟ್ಟ ಮಣ್ಣಿನ ಗಣೇಶನನ್ನು ತಯಾರಿಸಿದ್ದೇವೆ. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಬಹಳಷ್ಟು ಮುಂಗಡ ಬುಕ್ಕಿಂಗ್‌ ಆಗುತ್ತಿತ್ತು. ಆದರೆ, ಇದುವರೆಗೂ ಯಾವುದೇ ಆರ್ಡರ್‌ ಬಂದಿಲ್ಲ. ಸದ್ಯ ನಗರದಲ್ಲಿ ಸೀಲ್‌ಡೌನ್‌ ತೆರವುಗೊಳಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ನಮಗೂ ಹಬ್ಬದ ನಿಮಿತ್ತ ವ್ಯಾಪಾರ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ನಾವೂ ಆರ್ಥಿಕವಾಗಿ ನಲುಗಿ ಹೋಗಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಕುಂಬಾರರಿಗೂ ಪರಿಹಾರ ಘೋಷಿಸಬೇಕು ಎಂದು ಕುಂಬಾರರು ಆಗ್ರಹಿಸಿದ್ದಾರೆ.