ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಚಂದ್ರು ಕುರಿ ಎಂಬ ಯುವಕ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಇದೀಗ ಹೊಂಬಳ ಗ್ರಾಮದ ಬಳಿ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 

ಗದಗ (ಮಾ.28): ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೊಲೆ ನಡೆಸಿ ಶವವನ್ನು ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ನಿವಾಸಿ ಚಂದ್ರು ಕುರಿ (28) ಕೊಲೆಯಾದ ದುರ್ದೈವಿ. ಕಳೆದ 24ನೇ ತಾರೀಕು ಮಂಗಳವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಚಂದ್ರುಗೆ, ಯಾರೋ ಪರಿಚಿತರು ಫೋನ್ ಮಾಡಿದ್ದರು ಎನ್ನಲಾಗಿದೆ. ಕರೆ ಬಂದ ಕೂಡಲೇ ಮನೆಯಿಂದ ಹೊರಗೆ ಹೋದ ಯುವಕ ಮತ್ತೆ ಮರಳಿ ಬಂದಿರಲಿಲ್ಲ. ಇಂದು ಹೊಂಬಳ ಗ್ರಾಮದ ಹೊರವಲಯದ ಸೇತುವೆ ಕೆಳಭಾಗದಲ್ಲಿ ಯುವಕನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಟುಂಬಸ್ಥರ ಆಕ್ರೋಶ

ಚಂದ್ರು ಕುಟುಂಬದ ಏಳಿಗೆಯನ್ನು ಸಹಿಸದವರೇ ಯಾರೋ ಸಂಚು ರೂಪಿಸಿ, ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಪುರಾವೆ ನಾಶಪಡಿಸಲು ಶವವನ್ನು ಸುಟ್ಟು ಸೇತುವೆಯ ಕೆಳಗೆ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಗದಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.