ಬೆಂಗಳೂರು (ಮೇ.13):  ಕೊರೋನಾದಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ದತ್ತು ಪಡೆಯುವುದಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದಿದ್ದು, ಮೋಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ತಿಳಿಸಿದೆ.

ಅನಾಥ ಮಕ್ಕಳನ್ನು ದತ್ತು ಪಡೆಯುವುದಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ಇಂತಹ ಮೋಸಗಾರರು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ಹಾಗೂ ಆಪ್ತ ಸಮಾಲೋಚನೆಗಾಗಿ 14499 ಅನ್ನು ಸಂಪರ್ಕಿಸಬಹುದು. ಇಲ್ಲವಾದಲ್ಲಿ ಪ್ರತಿ ಜಿಲ್ಲೆಯಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಮಕ್ಕಳ ಕಲ್ಯಾಣ ಸಮಿತಿಗಳನ್ನು ಸಂಪರ್ಕಿಸಿ ದೂರು ನೀಡಬಹುದು. ವೆಬ್‌ಸೈಟ್‌  www.icps.karanataka.govt.in ದಲ್ಲಿಯೂ ದೂರು ದಾಖಲಿಸಬಹುದು.

ಕೋವಿಡ್‌ಗೆ ಪೋಷಕರ ಕಳಕೊಂಡ ಮಕ್ಕಳಿಗಾಗಿ ವಿಶೇಷ ಕಾರ್ಯಪಡೆ!

ಈ ರೀತಿಯ ಅನಾಥ ಮಕ್ಕಳನ್ನು ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಸರ್ಕಾರಿ ಬಾಲಕರು, ಬಾಲಕಿಯರ ಬಾಲಮಂದಿರ ಹಾಗೂ ಶಿಶುಮಂದಿರಗಳನ್ನು ಮತ್ತು ವಿಶೇಷ ದತ್ತು ಸಂಸ್ಥೆಗಳನ್ನು ಜಿಲ್ಲೆಗಳಲ್ಲಿ ನಡೆಸುತ್ತಿದ್ದು, ಮಕ್ಕಳಿಗೆ ಅವಶ್ಯವಿರುವ ಪಾಲನೆ ಮತ್ತು ರಕ್ಷಣೆಯನ್ನು ಒದಗಿಸಲಾಗುತ್ತಿದೆ.

ದತ್ತು ಪಡೆಯಲು ಸಂಪರ್ಕಿಸಿ :  ಸುಳ್ಳು ಪ್ರಚಾರಗಳಿಗೆ ಕಿವಿಗೊಡದೆ, ನಿಜವಾಗಿಯೂ ತಾವು ದತ್ತು ಪಡೆಯಲು ಇಚ್ಛಿಸಿದ್ದಲ್ಲಿ ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌  www.icps.karanataka.govt.in ನ್ನು ಅಥವಾ ದತ್ತು ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳನ್ನು ಸ್ಥಾಪಿಸುವಂತೆ ತಿಳಿಸಿದೆ.

ನಿಮ್ಮನೆಯಲ್ಲಿ ಪುಟ್ಟ ಮಕ್ಕಳಿದ್ರೆ ಎಚ್ಚರ : ಅವ್ರನ್ನ ಹೆಚ್ಚಾಗಿ ಕಾಡುತ್ತಿದೆ ಮಹಾಮಾರಿ .

ಇನ್ನು ಯಾವುದೇ ಮಕ್ಕಳನ್ನು ದತ್ತು ಪಡೆಯುವುದಕ್ಕೂ ಮೊದಲು ನಿಯಮಾನುಸಾರ ಮಕ್ಕಳ ಕಲ್ಯಾಣ ಸಮಿತಿಯ ಮಂದೆ ಹಾಜರುಪಡಿಸಬೇಕು. ನಂತರ ಮಕ್ಕಳನ್ನು ವಿಶೇಷ ದತ್ತು ಸಂಸ್ಥೆಗಳಿಗೆ ದಾಖಲು ಮಾಡಲಾಗುತ್ತದೆ. ಮಗುವಿಗೆ ಪೋಷಕರು ಯಾರೂ ಇಲ್ಲವೆಂದು ಖಾತ್ರಿಪಡಿಸಿಕೊಂಡ ಬಳಿಕ ಮಗುವನ್ನು ವಿಶೇಷ ದತ್ತು ಸಂಸ್ಥೆಗಳ ಮೂಲಕ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಂಡು ದತ್ತು ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಮಕ್ಕಳ ಮಾರಾಟ ಅಪರಾಧ: ಈ ಮೇಲಿನ ನಿಯಮವನ್ನು ಹೊರತುಪಡಿಸಿ ಉಳಿದ ರೀತಿಯಲ್ಲಿ ಮಗುವನ್ನು ದತ್ತು ಪಡೆಯುವುದು ಕಾನೂನು ಬಾಹಿರವಾಗಿದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) 2015ರ 81ರ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಮಗುವನ್ನು ಕೊಳ್ಳುವವರು ಮತ್ತು ಮಾರುವವರು ಇಬ್ಬರಿಗೂ ಒಂದು ಲಕ್ಷ ರು. ದಂಡ ಹಾಗೂ ಐದು ವರ್ಷಗಳ ಜೈಲು ವಿಧಿಸಲಾಗುವುದು ಎಂದು ತಿಳಿಸಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona