ಸುಧಾಮೂರ್ತಿ ಹೆಸರಲ್ಲಿ ಎನ್‌ಆರ್‌ಐಗಳಿಂದ ಹಣ ವಸೂಲಿ; ಆರೋಪಿ ಅರುಣ್ ಸುದರ್ಶನ್ ಬಂಧನ
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್(40) ಬಂಧಿತ.
ಬೆಂಗಳೂರು (ಅ.17): ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಅರುಣ್ ಸುದರ್ಶನ್(40) ಬಂಧಿತ. ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಎಂದು ಸುಳ್ಳು ಹೇಳಿ 40 ಡಾಲರ್ ಪಡೆದು ಟಿಕೆಟ್ ಮಾರಾಟ ಮಾಡಿ ವಂಚಿಸಿದ ಆರೋಪದಡಿ ಲಾವಣ್ಯ, ಶೃತಿ ಎಂಬುವವರ ವಿರುದ್ಧ ಸುಧಾಮೂರ್ತಿ ಅವರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಮಮತಾ ಸಂಜಯ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.
ಅಮೆರಿಕಾದಲ್ಲಿ ಸುಧಾಮೂರ್ತಿ ಹೆಸರು ಬಳಸಿಕೊಂಡು ಹಣ ವಸೂಲಿ: ಇಬ್ಬರು ಮಹಿಳೆಯರ ವಿರುದ್ಧ ದೂರು
ಶ್ರುತಿ ಕುಟುಂಬದ ಮೇಲಿನ ದ್ವೇಷ:
ಬಂಧಿತ ಆರೋಪಿ ಅರುಣ್ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಶ್ರುತಿ ಪತಿ ಹತ್ತಿರದ ಸಂಬಂಧಿಕರು. ಬಾಲ್ಯದಲ್ಲಿ ಅರುಣ್ ಮತ್ತು ಶ್ರುತಿಯ ಪತಿಯ ಜತೆಯಲ್ಲೇ ಬೆಳೆದಿದ್ದರು. ವರ್ಷಗಳು ಕಳೆದಂತೆ ಎರಡೂ ಕುಟುಂಬಗಳು ದೂರವಾಗಿದ್ದವು. ಅಮೆರಿಕದಲ್ಲಿ ನೆಲೆಸಿದ್ದ ಶ್ರುತಿ ದಂಪತಿ ಕಳೆದ 10 ವರ್ಷಗಳಿಂದ ಅರುಣ್ ಜತೆಗೆ ಸಂಪರ್ಕ ಕಡಿದುಕೊಂಡಿದ್ದರು. ಹೀಗಾಗಿ ಅರುಣ್, ಶ್ರುತಿ ದಂಪತಿ ವಿರುದ್ಧ ದ್ವೇಷ ಕಾರುತ್ತಿದ್ದ. ಈ ನಡುವೆ 'ಕನ್ನಡ ಕೂಟ ಆಫ್ ನಾರ್ತ್ ಕ್ಯಾಲಿಫೋನಿರ್ಯಾ' (ಕೆಎನ್‌ಸಿ) ವತಿಯಿಂದ ಅಮೆರಿಕದ ಸೇವಾ ಮಿಲಿಟಸ್‌ನಲ್ಲಿ ಸೆ.26ರಂದು ಡಾ| ಸುಧಾಮೂರ್ತಿ ಜತೆಗೆ 'ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ| ಸುಧಾಮೂರ್ತಿ' ಕಾರ್ಯಕ್ರಮ ಆಯೋಜಿಸಲು ಆಸಕ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಶ್ರುತಿ ದಂಪತಿ ಬೆಂಗಳೂರಿನಲ್ಲಿದ ಸಂಬಂಧಿ ಅರುಣ್ ಗೆ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಡಾ.ಸುಧಾಮೂರ್ತಿ ಅವರನ್ನು ಮುಖ್ಯ ಅತಿಥಿ ಯಾಗಿ ಕರೆತರಲು ಸಾಧ್ಯವೇ ಎಂದು ಕೇಳಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಅರುಣ್, ಈ ವಿಚಾರ ಇರಿಸಿಕೊಂಡು ಅಮೆರಿಕದಲ್ಲಿ ಶ್ರುತಿ ದಂಪತಿ ಮರ್ಯಾದೆ ಕಳೆಯಲು ನಿರ್ಧರಿಸಿದ್ದ.
ಲಾವಣ್ಯ ಹೆಸರಿನಲ್ಲಿ ನಂಬಿಸಿ ವಂಚನೆ
ಪ್ಲಾನ್ ಮಾಡಿದಂತೆ ಅರುಣ್, ಸುಧಾಮೂರ್ತಿ ಅವರ ಆಪ್ತಸಹಾಯಕಿ - ಲಾವಣ್ಯ ಎಂಬುವವರೊಂದಿಗೆ ಮಾತನಾಡಿದ್ದೇನೆ. ಸುಧಾಮೂರ್ತಿ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶ್ರುತಿ ದಂಪತಿಗೆ ಹೇಳಿದ್ದ. ಸುಧಾಮೂರ್ತಿ ಅವರನ್ನು ಅಮೆರಿಕಕ್ಕೆ ಕರೆತರಲು ಖರ್ಚು ವೆಚ್ಚಕ್ಕಾಗಿ 25 ಲಕ್ಷ ಸಹ ಪಡೆದಿದ್ದ. ವಾಸ್ತವದಲ್ಲಿ ಸುಧಾಮೂರ್ತಿಗೆ ಲಾವಣ್ಯ ಹೆಸರಿನ ಆಪ್ತ ಸಹಾಯಕಿ ಇಲ್ಲ. ಆರೋಪಿ ಅರುಣ್, ಲಾವಣ್ಯ ಹೆಸರಿನಲ್ಲಿ ಶ್ರುತಿ ದಂಪತಿಗೆ ಸಂದೇಶ ಕಳುಹಿಸಿ ನಂಬಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಲತಾಣದಲ್ಲಿ ಹಣ ವಸೂಲಿ ಗಮನಿಸಿ ಪೊಲೀಸರಿಗೆ ದೂರು
ಈತನ ಮಾತು ನಂಬಿದ ಶ್ರುತಿ ದಂಪತಿ ಅಮೆರಿಕದಲ್ಲಿ 'ಮೀಟ್ ಆ್ಯಂಡ್ ಗ್ರೀಟ್ ವಿತ್ ಡಾ| ಸುಧಾಮೂರ್ತಿ' ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಸಹ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಟಿಕೆಟ್ ದರ ತಲಾ 40 ಡಾಲರ್ ನಿಗದಿಗೊಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಗಮನಿಸಿದ್ದ ಸುಧಾಮೂರ್ತಿ ಅವರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಮಮತಾ ಸಂಜಯ್ ಆಶ್ಚರ್ಯಗೊಂಡು ಕಾರ್ಯಕ್ರಮ ಆಯೋಜಕರನ್ನು ಸಂಪರ್ಕಿಸಿದಾಗ ಲಾವಣ್ಯ ಮತ್ತು ಶ್ರುತಿ ಹೆಸರು ಹೇಳಿದ್ದರು.
ಎಲಾನ್ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್ ಇನ್ ಪೋಸ್ಟ್ ವೈರಲ್
ಹೀಗಾಗಿ ಮಮತಾ ಸಂಜಯ್ ಅವರು ಸುಧಾಮೂರ್ತಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿ ವಂಚಿಸಿದ ಆರೋಪದಡಿ ಶ್ರುತಿ ಮತ್ತು ಲಾವಣ್ಯ - ವಿರುದ್ಧ ದೂರುನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಮಾಡಿದಾಗ ಆರೋಪಿ ಅರುಣ್ ಸುದರ್ಶನ್, ಶ್ರುತಿ ದಂಪತಿ ಮೇಲೆ ತನ್ನ ದ್ವೇಷ ತೀರಿಸಿಕೊಳ್ಳಲು ಸುಧಾಮೂರ್ತಿ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ ಎಂದು ಸುಳ್ಳು ಹೇಳಿ ಅವಾಂತರ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.