ಸಿಎಂ ಕಚೇರಿ ಹೆಸರು ಹೇಳಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ 15 ಲಕ್ಷ ರು. ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಬೆಂಗಳೂರು (ಮೇ.30) : ಸಿಎಂ ಕಚೇರಿ ಹೆಸರು ಹೇಳಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ 15 ಲಕ್ಷ ರು. ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಗೆ ಹೈಕೋರ್ಟ್ ಜಾಮೀನು ನೀಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ದಾವಣಗೆರೆಯ ಚನ್ನಗಿರಿ ತಾಲೂಕಿನ ನಿವಾಸಿ ಆರ್‌. ಪ್ರದೀಪ್‌(R Pradeep) ಎಂಬಾತ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಜಿ.ಬಸವರಾಜ ಅವರ ಪೀಠ ಈ ಆದೇಶ ಮಾಡಿದೆ.

ಟಿಂಡರ್‌ನಲ್ಲಿ ಜೊತೆಯಾದ ಸ್ನೇಹಿತ, 4.5 ಲಕ್ಷ ಕಳೆದುಕೊಂಡ ಬೆಂಗ್ಳೂರು ಯುವತಿ!

ಪ್ರಕರಣ ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರ ಪ್ರದೀಪ್‌ ಲಂಚ ಸ್ವೀಕರಿಸಿಲ್ಲ. ಬದಲಿಗೆ ಅವರ ಭಾವ ಮೈದುನ ಅರುಣ್‌ಕುಮಾರ್‌ ಲಂಚ ಪಡೆದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ ಜಾಮೀನು ನೀಡಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ, ಅರ್ಜಿದಾರ 50 ಸಾವಿರ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷಿಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರಬಾರದು, ತನಿಖಾಧಿಕಾರಿಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ:

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಆರ್‌.ಪ್ರದೀಪ್‌ಗೆ ದೂರುದಾರೆ ಕೆ.ಜಿ. ನಾಗರತ್ನಮ್ಮ ಅವರು ಕುಟುಂಬ ಸ್ನೇಹಿತರಾಗಿದ್ದಾರೆ. ತನ್ನ ಭಾವ ಮೈದುನ ಕೆ.ಎಚ್‌. ಅರುಣ್‌ ಕುಮಾರ್‌ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯಮಂತ್ರಿ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗುವ ಹಂತದಲ್ಲಿದ್ದಾರೆ. ಲಂಚ ಪಡೆದು ಹಲವರಿಗೆ ಉದ್ಯೋಗ ಪಡೆಯಲು ನೆರವಾಗಿರುವುದಾಗಿ ನಾಗರತ್ನಮ್ಮಗೆ ಪ್ರದೀಪ್‌ ತಿಳಿಸಿದ್ದರು.

183 ದಿನಗಳಿಂದ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವು!

ಅಲ್ಲದೆ, ನಾಗರತ್ನಮ್ಮಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ಅದಕ್ಕಾಗಿ ಲಂಚ ನೀಡಲು ಬೇಡಿಕೆ ಇಟ್ಟಿದ್ದರು. ಪೋನ್‌ ಮೂಲಕ ಸಂಪರ್ಕಿಸಿದ್ದ ಅರುಣ್‌ ಕುಮಾರ್‌ ಸಹ ಸರ್ಕಾರಿ ಉದ್ಯೋಗ ಉದ್ಯೋಗದ ಭರವಸೆ ನೀಡಿದ್ದ. ಅದನ್ನು ನಂಬಿದ್ದ ನಾಗರತ್ನಮ್ಮ, 2020ರ ಜನವರಿಯಲ್ಲಿ ಅರುಣ್‌ಕುಮಾರ್‌ ಬ್ಯಾಂಕ್‌ ಖಾತೆಗೆ ಒಟ್ಟು 15 ಲಕ್ಷ ರು. ವರ್ಗಾಯಿಸಿದ್ದರು. ಹಲವು ದಿನ ಕಳೆದರೂ ಸರ್ಕಾರಿ ನೌಕರಿ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ನಾಗರತ್ನಮ್ಮ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರದೀಪ್‌, ಅರುಣ್‌ಕುಮಾರ್‌ ಮತ್ತು ಶೈಲಜಾ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಮಾಚ್‌ರ್‍ನಲ್ಲಿ ಪ್ರದೀಪ್‌ಗೆ ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದರಿಂದ ಆತ ಹೈಕೋರ್ಚ್‌ ಮೊರೆ ಹೋಗಿದ್ದರು.