ಜಲ ಜೀವನ್ ಮಿಷನ್ ಕಾಮಗಾರಿ ಎಡವಟ್ಟು; ಕಲುಷಿತ ನೀರು ಸೇವಿಸಿ 112 ಜನ ಅಸ್ವಸ್ಥ : ನಾಲ್ವರ ಸಾವು?
ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 76 ವರ್ಷದ ಚಿಕ್ಕದಾಸಪ್ಪ, 74 ವರ್ಷದ ಪೆದ್ದಣ್ಣ ಕೊನೆಯುಸಿರೆಳೆದಿದ್ದಾರೆ.
ತುಮಕೂರು (ಜೂ.13) : ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 76 ವರ್ಷದ ಚಿಕ್ಕದಾಸಪ್ಪ, 74 ವರ್ಷದ ಪೆದ್ದಣ್ಣ ಕೊನೆಯುಸಿರೆಳೆದಿದ್ದಾರೆ.
300 ಮನೆಗಳಿರುವ ಚಿನ್ನೇನಹಳ್ಳಿ ಗ್ರಾಮದಲ್ಲಿ ಜೂನ್ 7ರಿಂದ 11ರವರೆಗೂ ಗ್ರಾಮದಲ್ಲಿ ಕೆಂಪಮ್ಮ, ಲಕ್ಷ್ಮಿದೇವಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿದ ತಕ್ಷಣವೇ ಗ್ರಾಮದ ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. ಕೆಲವರು ಮಧುಗಿರಿ ತಾಲ್ಲೂಕು ಆಸ್ಪತ್ರೆ, ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 17 ಜನರಲ್ಲಿ ಇಬ್ಬರು ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಕಲುಷಿತ ನೀರು ಕುಡಿದ ಪರಿಣಾಮ ಸಾವನಪ್ಪಿದ್ದಾರೆ ಎಂದು ದೃಢಪಟ್ಟಿದೆ.
ಬೀಗರೂಟ ಮಾಡಿ ಮದುಮಕ್ಕಳ ಸಹಿತ 500+ ಮಂದಿ ಅಸ್ವಸ್ಥ: ಸಚಿವ ವೆಂಕಟೇಶ್ ಸಹ ಭಾಗಿ!
ಸೋಮವಾರ (ಜೂನ್10) ತಾರೀಕು ಒಂದಿಬ್ಬರಲ್ಲಿ ಮಾತ್ರ ವಾಂತಿ ಭೇದಿ ಕಾಣಿಸಿಕೊಂಡಿದೆ. ಮಂಗಳವಾರದ ಹೊತ್ತಿಗೆ ವಾಂತಿ ಭೇದಿಯಾದವರ ಈ ಸಂಖ್ಯೆ 40ಕ್ಕೆ ಏರಿದೆ. ಬಳಿಕ ದಿನೇ ದಿನೇ 20- 30 ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಕೂಡಲೇ ಎಚ್ಚೆತ್ತ ಜಿಲ್ಲಾಢಳಿತ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದೆ. ಐವರು ವೈದ್ಯರು 25ಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ಗ್ರಾಮದ 80 ಮನೆಗಳಲ್ಲಿ ಹೆಚ್ಚಿನ ಜನರು ಅಸ್ವಸ್ಥಗೊಂಡಿದ್ದಾರೆ.
ಜಲ ಜೀವನ್ ಮಿಷನ್ ಕಾಮಗಾರಿ ಯಡವಟ್ಟು
ಗ್ರಾಮದಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ ಕಾಮಗಾರಿ ಕೆಲಸ ನಡೆಯುತ್ತಿದೆ. ಪ್ರತಿ ಮನೆಗೂ ಪೈಪ್ ಲೈನ್ ಆಳವಡಿಸಲಾಗಿತ್ತಿದೆ. ಈ ಕಾಮಗಾರಿಯಿಂದಾಗಿ ಕುಡಿಯುವ ನೀರಿನ ಪೈಪ್ಗೆ ಚರಂಡಿ ನೀರು ಸೇರ್ಪಡೆಗೊಂಡು ಈ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಇಡಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ ಹಾಗೂ ಸ್ವಚ್ಚತೆ ಕೊರತೆಯಿದೆ.
ನಾಲ್ವರ ಸಾವು?
10 ನೇ ತಾರೀಕು ಇದೆ ಗ್ರಾಮದ ಹನುಮಕ್ಕ ಎಂಬ 80 ವರ್ಷದ ಮಹಿಳೆ ಸಾವನಪ್ಪಿದ್ದಾಳೆ. 11 ನೇ ತಾರೀಕು 85 ವರ್ಷದ ನಿಂಗಮ್ಮ ಹಾಗೂ 76 ವರ್ಷದ ನಾಗಪ್ಪ ಸಾವನಪ್ಪಿದ್ದಾರೆ. ಈ ಮೂವರು ವಯೋ ಸಹಜ ಸಾವು ಹಾಗೂ ಮದ್ಯಪಾನ ವ್ಯಸನದಿಂದ ಸಾವನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ವರದಿ ನೀಡಿದೆ. ಆದರೆ ಗ್ರಾಮದ ಜನರು ಹೇಳುವುದೇ ಬೇರೆ ಅವರಿಗೂ ವಾಂತಿ ಬೇಧಿ ಕಾಣಿಸಿಕೊಂಡು ಅಸ್ವಸ್ಥಗೊಂಡು ಸಾವನಪ್ಪಿದ್ದಾರೆ ಅಂತ ಹೇಳಿದ್ದಾರೆ. ಇದರ ಜೊತೆಗೆ 3 ವರ್ಷದ ಮೀನಾಕ್ಷಿ ಎಂಬ ಹೆಣ್ಣು ಮಗು ಊಸಿರಾಟದ ತೊಂದರೆಯಿಂದ ಸಾವನಪ್ಪಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಚಿಕ್ಕಮಗಳೂರು: ಬಿರಿಯಾನಿ ತಿಂದು 17 ಜನ ಅಸ್ವಸ್ಥ..!
ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡು
ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಪ್ರಭು, ಡಿಎಚ್ಒ ಮಂಜುನಾಥ್, ಮಧುಗಿರಿ ಎಸಿ, ಸೇರಿದ್ದಂತೆ ಅಧಿಕಾರಿಗಳ ತಂಡವೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಅರಿತು ಪರಿಹಾರ ಹುಡುಕು ಪ್ರಯತ್ನ ನಡೆಸಿದೆ. ಏತನ್ಮಧ್ಯೆ ಪಿಡಿಒ ಹಾಗೂ ವಾಟರ್ ಮೆನ್ ಅನ್ನು ಅಮಾನತು ಮಾಡಲಾಗಿದೆ. ಜೊತೆಗೆ ಇಂದು ಬೆಳಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ 50ಕ್ಕೂ ಹೆಚ್ಚು ಜನರ ಆರೋಗ್ಯ ಸುಧಾರಿಸಿದೆ. ಅಸ್ವಸ್ಥಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಡೀ ಘಟನೆಯಿಂದ ಗ್ರಾಮದಲ್ಲಿ ಭಯ ಆವರಿಸಿದೆ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು.