ಬೆಂಗಳೂರು(ಫೆ.06]: ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕುಮಾರಕೃಪಾ ರಸ್ತೆಯಲ್ಲಿರುವ ತಮ್ಮ ಕಾವೇರಿ ನಿವಾಸದಲ್ಲಿ ಸರ್ಕಾರದ ಎಲ್ಲ ಕಾಂಗ್ರೆಸ್‌ ಸಚಿವರಿಗೂ ಔತಣ ಕೂಟ ಏರ್ಪಡಿಸಿದ್ದರು.

ರಾತ್ರಿ 7 ಗಂಟೆಗೆ ಕರೆಯಲಾಗಿದ್ದ ಈ ಔತಣ ಕೂಟದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಜಯಮಾಲಾ, ಜಮೀರ್‌ ಅಹಮ್ಮದ್‌ ಖಾನ್‌ ಸೇರಿದಂತೆ ಹಲವು ಸಚಿವರು ಪಾಲ್ಗೊಂಡಿದ್ದರು. ವಿವಿಧ ಕಾರಣಗಳಿಂದ ನಾಲ್ವರು ಸಚಿವರು ಔತಣ ಕೂಟಕ್ಕೆ ಗೈರು ಹಾಜರಾಗಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಮತ್ತು ಶಿವಶಂಕರರೆಡ್ಡಿ ಔತಣ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮೊದಲೇ ತಿಳಿಸಿದ್ದರು. ಅದೇ ರೀತಿ ಸಚಿವರಾದ ಸಿ.ಎಸ್‌. ಶಿವಳ್ಳಿ, ಎಂ.ಟಿ.ಬಿ. ನಾಗರಾಜು ಹಾಗೂ ಪ್ರಿಯಾಂಕ್‌ ಖರ್ಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದಾರೆ. ಯು.ಟಿ.ಖಾದರ್‌ ಪ್ರಮುಖ ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಬರಲಾಗಿಲ್ಲ ಎಂದು ತಿಳಿದು ಬಂದಿದೆ.

ಬಜೆಟ್‌ ಬಗ್ಗೆ ಚರ್ಚೆ: ಔತಣ ಕೂಟದ ವೇಳೆ ಸಿದ್ದರಾಮಯ್ಯ ಅವರು ಬಜೆಟ್‌ ಕುರಿತು ಪ್ರಸ್ತಾಪಿಸಿ, ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿನ ಅಂಶಗಳಿಗೂ ಬಜೆಟ್‌ನಲ್ಲಿ ಆದ್ಯತೆ ನೀಡುವಂತೆ ತಮ್ಮೆಲ್ಲರಿಗೂ ಮನವಿ ಮಾಡಿದ್ದೆ, ತಮ್ಮ ತಮ್ಮ ಇಲಾಖಾವಾರು ಸಭೆಯಲ್ಲಿ ತಾವೆಲ್ಲಾ ಏನು ಹೇಳಿದ್ದೀರೋ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕನಿಷ್ಠ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭೆಯನ್ನೂ ನಡೆಸಲಿಲ್ಲ. ಪಟ್ಟಿಯನ್ನೂ ಸಿದ್ಧಪಡಿಸಲಿಲ್ಲ ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹಾಗಾಗಿ ಈ ಬಾರಿಯ ಬಜೆಟ್‌ ಬಹಳ ಮಹತ್ವ ಪಡೆದುಕೊಳ್ಳಲಿದೆ. ಬಜೆಟ್‌ ಎರಡೂ ಪಕ್ಷಗಳಿಗೂ ಲಾಭ ತರುವ ರೀತಿ ಇದ್ದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ, ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಪರಮೇಶ್ವರ್‌ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ಅವರು, ಮುಖ್ಯಮಂತ್ರಿ ಅವರು ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಎಲ್ಲರನ್ನೂ ಕೇಳಿಯೇ ಕಾರ್ಯಕ್ರಮ ರೂಪಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಪ್ರಣಾಳಿಕೆಯ ಅಂಶಗಳೂ ಬಜೆಟ್‌ನಲ್ಲಿ ಘೋಷಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದೆ.

ಇದೇ ವೇಳೆ, ಆಪರೇಷನ್‌ ಕಮಲ ಬಗ್ಗೆಯೂ ಔತಣ ಕೂಟದಲ್ಲಿ ಚರ್ಚೆ ನಡೆದಿದ್ದು, ಎಲ್ಲ ಸಚಿವರು ತಮ್ಮ ಉಸ್ತುವಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್‌ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು ಎನ್ನಲಾಗಿದೆ.