ಬೆಂಗಳೂರು(ಆ.20): ಕಾವೇರಿ ಕೂಗು ವಿಶೇಷ ಅಭಿಯಾನವಾಗಿದ್ದು, ದೇಶದ ಜೀವಸೆಲೆಗಳಾದ ನದಿಗಳನ್ನು ಪುನರುಜ್ಜೀವನಗೊಳಿಸುವ ಮಾನದಂಡಗಳನ್ನು ತಿಳಿಸಲಿದೆ ಎಂದು ಉತ್ತರಾಖಂಡದ ಕಂಟೆಂಪ್ಲೇಷನ್‌ ಆನ್‌ ನೇಚರ್‌ ಸ್ಥಾಪಕ ಸದಸ್ಯ ಅಜಯ್‌ ರಸ್ತೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೂಗು ಅಭಿಯಾನ ಕುರಿತು ಮಾತನಾಡಿರುವ ಅವರು, ಈ ಅಭಿಯಾನವು ಕಾವೇರಿ ನದಿ ಜಲಾಯನ ಪ್ರದೇಶದಲ್ಲಿನ ರೈತರಿಗೆ ಹೆಚ್ಚಿನ ಸಹಾಯವಾಗಲಿದೆ. ಮರ ಬೆಳಸುವುದರಿಂದ ಎಲೆಗಳು, ಕೊಂಬೆಗಳು, ಬೀಜಗಳು, ಹಣ್ಣುಗಳಿಂದ ಮಣ್ಣಿನ ಸಾವಯವ ಅಂಶ ಹೆಚ್ಚಳವಾಗುವ ಮೂಲಕ ನೀರನ್ನು ಹೀರಿಕೊಳ್ಳುವ ಮತ್ತು ಅಂತರ್ಜಲ ಕೋಷ್ಟಕಗಳನ್ನು ಪುನರ್‌ ಭರ್ತಿ ಮಾಡುವ ಸಾಮರ್ಥ್ಯ ವೃದ್ಧಿಯಾಗಲಿದೆ ಎಂದರು.

ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

ಮರಗಳನ್ನು ಬೆಳೆಯುವ ವಿಧಾನ, ಕೃಷಿ, ಹವಾಮಾನ ಪರಿಸ್ಥಿತಿಗಳನ್ನು ಒಳಗೊಂಡ ನೀರಾವರಿ ವ್ಯವಸ್ಥೆಯನ್ನು ಸುಧಾರಣೆಯಾಗಲಿದೆ. ಈ ಕೃಷಿ ಮಾದರಿಯಿಂದ 5ರಿಂದ 7 ವರ್ಷಗಳಲ್ಲಿ ರೈತರ ಆದಾಯವನ್ನು 3ರಿಂದ 8 ಪಟ್ಟು ಹೆಚ್ಚಿಸಲಿದೆ. ಈ ಅಭಿಯಾನ ಅಂದಾಜು 84 ದಶಲಕ್ಷ ಜನರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ಅಭಿಯಾನವು ರಾಜ್ಯ ಅರಣ್ಯ ಇಲಾಖೆಯ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಯೋಜನೆಯಡಿ ದಾಖಲಾಗುವ ರೈತರು ತಮ್ಮ ಕೃಷಿ ಭೂಮಿಗೆ ಸಸಿಗಳನ್ನು ಹತ್ತಿರದ ಅರಣ್ಯ ಕಚೇರಿಯಿಂದ ಪಡೆದುಕೊಳ್ಳಬಹುದು. ಪ್ರತಿ ಸಸಿಗೆ ಮೂರು ವರ್ಷಗಳಲ್ಲಿ 125 ನಂತೆ ಪ್ರೋತ್ಸಾಹ ಧನ ನೀಡಲಿದೆ. ಹೀಗಾಗಿ, ರೈತರು ಪ್ರತಿ ಹೆಕ್ಟೇರ್‌ನಲ್ಲಿ ಬದುಕುಳಿಯುವ ಗರಿಷ್ಠ 400 ಮರಗಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ 50 ಸಾವಿರ ಪಡೆಯಬಹುದಾಗಿದೆ ಎಂದರು.

ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರಗಳಿಗೆ ಉತ್ತಮ ಬೇಡಿಕೆ ಬರುತ್ತಿರುವುದರಿಂದ ಹೆಚ್ಚಿನ ಮೌಲ್ಯದ ಪ್ರಭೇದಗಳಾದ ಶ್ರೀಗಂಧ, ಮಹಾಗನಿ, ತೇಗ ಮತ್ತು ಇತರ ಮರಗಳು ರೈತರಿಗೆ ಗಮನಾರ್ಹವಾದ ಆರ್ಥಿಕ ಲಾಭ ನೀಡಲಿವೆ. ಅಂದಾಜು 70 ಲಕ್ಷಕ್ಕೂ ಅಧಿಕ ಮೌಲ್ಯದ ಸಸಿಗಳನ್ನು ಪ್ರಸಕ್ತ ಬಿತ್ತನೆ ಕಾಲದಲ್ಲಿ ವಿತರಿಸಲು ಕಾವೇರಿ ಕೂಗು ಅಭಿಯಾನ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಯೋಜನೆಯ ಬಗ್ಗೆ ಮತ್ತಷ್ಟು ಮಾಹಿತಿ, ಪ್ರಯೋಜನಗಳು ಮತ್ತು ದಾಖಲಾತಿ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಸಹಾಯವಾಣಿ 80009 80009 ಸಂಪರ್ಕಿಸಬಹುದು.