Asianet Suvarna News Asianet Suvarna News

ರಾಮ ಮಂದಿರ ಉದ್ಘಾಟನೆಗಾಗಿ ಅಯೋಧ್ಯೆಗೆ ಹೊರಟ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ!

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪತ್ನಿ, ಪುತ್ರ ಹಾಗೂ ಮೊಮ್ಮಗ ಸೇರಿದಂತೆ ಕುಟುಂಬ ಸಮೇತರಾಗಿ ಅಯೋಧ್ಯೆಗೆ ತೆರಳಿದರು. 

Former Prime Minister HD Deve gowda family going to ayodhya for Ram Mandir inauguration sat
Author
First Published Jan 21, 2024, 4:46 PM IST

ಬೆಂಗಳೂರು (ಜ.21): ಕನ್ನಡಿಗ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಕುಟುಂಬ ಸಮೇತರಾಗಿ ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಹೊರಟಿದ್ದಾರೆ. ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ದೇವೇಗೌಡರ ಕುಟುಂಬದ ಸದಸ್ಯರಾದ ಶ್ರೀಮತಿ ಚನ್ನಮ್ಮ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಟ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರಿಗೆ ಸಾಥ್‌ ನೀಡಿದರು.

ಅಯೋಧ್ಯೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ನಾನು ನನ್ನ ಪತ್ನಿ, ಕುಮಾರಸ್ವಾಮಿ, ನಿಖಿಲ್ ಅಯೋಧ್ಯೆಗೆ ಹೋಗ್ತಿದ್ದೇವೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮ ಮಾಡ್ತಿರೋದು ಅವರ ಪೂರ್ವ ಜನ್ಮದ ಪುಣ್ಯವಾಗಿದೆ. ಅವರಿಗೆ ಈ ಕೆಲಸ ಮಾಡೋ ಶಕ್ತಿಯೂ ಕೂಡ ಪೂರ್ವ ಜನ್ಮದ ಪುಣ್ಯದಿಂದಲೇ ಸಿಕ್ಕಿದೆ. ಮಾಜಿ ಪ್ರಧಾನಿ ವಾಜಪೇಯಿ ಕೂಡ 6 ವರ್ಷ ಪ್ರಧಾನಿ ಆಗಿದ್ದರು. ಆದರೆ, ರಾಮ ಮಂದಿರದ ಮೊದಲ ಕಲ್ಲು ಸ್ವೀಕಾರ ಮಾಡೋಕು ಅವತ್ತು ವಾಜಪೇಯಿ ಅವರಿಗೆ ಕಷ್ಟ ಆಯ್ತು. ಇದು ಮೋದಿ ಅವರ ಪೂರ್ವ ಜನ್ಮ ಪುಣ್ಯವಾಗಿದೆ ಎಂದರು. 

ರಾಮ ಮಂದಿರ ಉದ್ಘಾಟನೆಗೆ ರಾಜ್ಯದಲ್ಲಿ ಸರ್ಕಾರಿ ರಜೆ ಕೊಡೊಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೋದಿ ಅವರು ಶಿವ, ವಿಷ್ಣು ಪ್ರಾರ್ಥನೆ ಮಾಡಿದ್ದಾರೆ. ಅವರಿಗೆ ಶಿವ, ವಿಷ್ಣು ವ್ಯತ್ಯಾಸ ಇಲ್ಲ. ಹಿಂದಿನ ಜನ್ಮದಲ್ಲಿ ದೊಡ್ಡ ದೈವ ಭಕ್ತರಾಗಿ ಜನ್ಮ ತಾಳಿದ್ದರು ಅನ್ನಿಸುತ್ತದೆ. ಈ ಸಂಧರ್ಭದಲ್ಲಿ ಅ ಯೋಗ ಮೋದಿ ಅವರಿಗೆ ಬಂದಿದೆ. 11 ದಿನ ವೃತ ಮಾಡಿದ್ದಾರೆ. ಪುಣ್ಯ ಕ್ಷೇತ್ರಗಳ ಸ್ನಾನ ಮಾಡ್ತಿದ್ದಾರೆ. ಇದು ತುಂಬಾ ವಿಶೇಷವಾಗಿದೆ. ನಾನು ದೈವಭಕ್ತ. ಒಂದು ದಿನ ವ್ರತ ಮಾಡಬಹುದು. ಆದರೆ, ಹೀಗೆ ಮಾಡಲು ಆಗೊಲ್ಲ. ತಮ್ಮ ನಿತ್ಯದ ಕೆಲಸ ಕಾರ್ಯಕ್ರಮಗಳ ಜೊತೆ ವೃತ ಮಾಡ್ತಾರೆ. ಇದೊಂದು ದೊಡ್ಡ ವಿಶೇಷವಾಗಿದೆ. ಮೋದಿ ಅವರಿಗೆ ಇದು ಪೂರ್ವ ಜನ್ಮದ ಪುಣ್ಯ. ವಿಶ್ವದಲ್ಲಿ ಇದೊಂದು ದಾಖಲೆ ಎಂದರು.

ಈ ವೇಳೆ ನಾನು ರಾಜಕೀಯವಾಗಿ ಮಾತಾಡೊಲ್ಲ. ನಾನು ಓಟ್ ಪ್ರಚಾರ ಮಾಡೋಕೆ ಬಂದಿಲ್ಲ. ಪವಿತ್ರ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗವಹಿಸಬೇಕು. ನಮ್ಮಲ್ಲಿ ಶೃಂಗೇರಿ, ಪೇಜಾವರ ಮಠ ಸೇರಿ ನೂರಾರು ಮಠಗಳು ಇವೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಎಲ್ಲಾ ದೇವರು ನಂಬಿದ್ದೇವೆ. ಜನರು ವ್ಯತ್ಯಾಸ ತೋರಿಸೋದಿಲ್ಲ. ಆಧ್ಯಾತ್ಮಿಕವಾಗಿ ಇದನ್ನ ನಂಬಿದ್ದಾರೆ. ನಡೆದುಕೊಂಡು ಬಂದಿದ್ದಾರೆ. ರಾಜ್ಯದ ಜನರಿಗೆ ನಾನು ತಲೆ ಬಾಗಿ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣಕ್ಕೆ ಜೀವನಾಧಾರದ ಜಮೀನು ಬಿಟ್ಟುಕೊಟ್ಟ ದಲಿತ ರಾಮದಾಸ

ರಾಜ್ಯ ಸರ್ಕಾರ ರಾಮ ಮಂದಿರ ಉದ್ಘಾಟನೆ ದಿನ ರಜೆ ನೀಡಬೇಕಿತ್ತು. ಆದರೆ, ಈಗ ನಾನು ರಜೆಯ ಬಗ್ಗೆ ನಾನು ಚರ್ಚೆ ಮಾಡೊಲ್ಲ. ಅದರ ಸಹವಾಸವೂ ನನಗೆ ಬೇಡ. ರಾಜಕೀಯದಲ್ಲಿ ನಾವು ಲಾಭ ನಷ್ಟದ ಬಗ್ಗೆ ಯೋಚನೆ ಮಾಡಬಾರದು. ದ್ವೇಷ, ಅಸೂಯೆ ಮಾಡಬಾರದು. ಭಾರತದಲ್ಲಿ ನಾಳೆ ನಡೆಯೋ ಕಾರ್ಯಕ್ರಮಕ್ಕೆ ಕಾಶ್ಮೀರದಿಂದ ಹೂವು ಕಳಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಜನ ಹೂವಿನ ಮಾಲೆ ಕಟ್ಟಿ ಕಳಿಸಿದ್ದಾರೆ.  ಅನೇಕ ರಾಜ್ಯಗಳಿಂದ ವಿಶೇಷವಾಗಿ ಎಲ್ಲವೂ ಕಳಿಸ್ತಿದ್ದಾರೆ. ಅಯೋಧ್ಯೆಯಲ್ಲಿ ಮುಸ್ಲಿಂಮರು ಹೂವಿನ ಮಳೆ ಸುರಿಸುತ್ತಿದ್ದಾರೆ. ಹಿಂದೂಗಳು ಮಾಡೋದು ಬಿಡಿ. ಮುಸ್ಲಿಂಮರು ಹೂವಿನ ಮಳೆ ಸುರಿಸುತ್ತಿದ್ದಾರೆ. ಯಾರು ಪ್ರೇರಣೆ ಮಾಡಿ ಇದನ್ನ ಮಾಡಿ ಅಂತ ಮುಸ್ಲಿಂಮರಿಗೆ ಹೇಳಿಲ್ಲ. ಇದನ್ನ ಅರ್ಥ ಎಲ್ಲರು ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಪರೋಕ್ಷವಾಗಿ ಸರ್ಕಾರದ ನಡೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

Follow Us:
Download App:
  • android
  • ios