ಮಂಡ್ಯ[ಡಿ.03]: ಅಂಬಿ ಅಂತಿಮ ದರ್ಶನಕ್ಕೆ ಬಾರದೆ ಅಭಿಮಾನಿಗಳ ಆಕ್ರೋಷಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ, ರಾತ್ರೋ ರಾತ್ರಿ ಮಂಡ್ಯದಿಂದ ಮನೆ ಖಾಲಿ ಮಾಡುವ ಮೂಲಕ, ರಾಜಕೀಯವಾಗಿಯೂ ಮಂಡ್ಯದಿಂದ ದೂರ ಸರಿದ್ರಾ ಎಂಬ ಊಹಾಪೋಹ ಮಂಡ್ಯ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಇದನ್ನೂ ಓದಿ: ರಮ್ಯಾಗೆ ಬಿಸಿ ಮುಟ್ಟಿಸಿದ ಅಭಿಮಾನಿಯ ಪತ್ರ...8 ಸಂಗತಿಗಳು ವೈರಲ್

ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಗೆ ಬಂದ ಎರಡು ಲಾರಿಗಳಿಗೆ, ಮನೆಯ ವಸ್ತುಗಳನ್ನು ತುಂಬುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ವಸ್ತು ಸಾಗಣೆ ವೇಳೆ ರಮ್ಯಾ ಮನೆ ಮುಂದೆ ಪೊಲೀಸ್ ಭದ್ರತೆ ಕೂಡಾ ಏರ್ಪಡಿಸಲಾಗಿತ್ತು. ರಮ್ಯಾ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಮಂಡ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ರು. ಅದಾದ ನಂತರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ, ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿ ವರ್ಷಗಟ್ಟಲೇ ಮಂಡ್ಯದ ಕಡೆ ತಲೆ ಹಾಕಿರಲಿಲ್ಲ. ಮತ್ತೆ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದ್ದರು.

ಇದನ್ನೂ ಓದಿ: ಅಂಬಿ ಅಭಿಮಾನಿಗಳ ಆಕ್ರೋಶ; ರಮ್ಯಾ ಮನೆಗೆ ಪೊಲೀಸ್ ರಕ್ಷಣೆ

ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾ ಅವರಿಗೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿ, ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿತ್ತು. ಅದರಂತೆ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಹೀಗಿದ್ದಾಗ ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದ್ದರು. 

"

ಅಂಬಿ ಅಂತಿಮ ದರ್ಶನಕ್ಕೂ ಗೈರು!

ಇನ್ನು ಕಳೆದ ಶನಿವಾರ ನಿಧನರಾಗಿದ್ದ ಮಂಡ್ಯದ ಗಂಡು ಅಂಬರೀಶ್ ಅಂತಿಮ ಕ್ರಿಯೆಗೆ ಬಾರದ, ಮಂಡ್ಯದ ಹುಡುಗಿ ರಮ್ಯಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿದ್ದರೂ ಬಹುತೇಕ ಮಂದಿ ಶೃದ್ಧಾಂಜಲಿ ಅರ್ಪಿಸುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇಷ್ಟೇ ಅಲ್ಲದೇ ಅವರನ್ನು ಮಂಡ್ಯಕ್ಕೆ ಬರಲು ಬಿಡುವುದಿಲ್ಲ ಎಂದೂ ನುಡಿದಿದ್ದರು. ಇಷ್ಟಾದರೂ ರಮ್ಯಾ ಮಾತ್ರ ಸಂತಾಪದ ಒಂದು ಟ್ವೀಟ್ ಮಾಡಿ ದೀರ್ಘ ಮೌನ ತಳೆದಿದ್ದರು. 

ಇದನ್ನೂ ಓದಿ: ರಮ್ಯಾ ಮೇಲೆ ಮಂಡ್ಯ ಹೈಕ್ಳಿಗೆ ಸಿಟ್ಟು: ಬರ್ತ್ ಡೇ ಪಾರ್ಟಿಗೆ ಬಿತ್ತು ಪೆಟ್ಟು!

ಈ ಎಲ್ಲ ಬೆಳವಣಿಗೆ ನಡುವೆಯೇ ರಾತ್ರೋರಾತ್ರಿ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗಿದೆ,ಇದೆಲ್ಲವನ್ನು ನೋಡಿದ್ರೆ ಮಂಡ್ಯದಲ್ಲಿ ನನಗಿನ್ನು ರಾಜಕೀಯವಾಗಿ ಭವಿಷ್ಯವಿಲ್ಲ ಎಂದು ಶಾಶ್ವತವಾಗಿ ರಮ್ಯಾ ಮಂಡ್ಯ ತೊರೆಯುತ್ತಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ."

ಇದನ್ನೂ ಓದಿ: ಮಂಡ್ಯ ಜನರ ಪಾಲಿಗೆ ರಮ್ಯಾ ಇನ್ನಿಲ್ಲವಂತೆ!

ಆದರೀಗ ಇವೆಲ್ಲದರ ಬೆನ್ನಲ್ಲೇ ರಮ್ಯಾ ಪೊಲೀಸ್ ಭದ್ರತೆಯೊಂದಿಗೆ ರಾತ್ರೋ ರಾತ್ರಿ ಮನೆ ಖಾಲಿ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಮಂಡ್ಯ ಜನತೆಯ ಕೋಪಕ್ಕೆ ಹೆದರಿ ಅವರು ಮಂಡ್ಯವನ್ನು ಬಿಟ್ಟರಾ ಅಥವಾ ಇದರ ಹಿಂದೆ ಬೇರೇನಾದರೂ ಕಾರಣವಿದೆಯಾ ಎಂಬುವುದು ಉತ್ತರ ಸಿಗದ ಪ್ರಶ್ನೆಯಾಗಿದೆ.