ಜೆಡಿಎಸ್ ತೆನೆಯ ಹೊರೆ ಇಳಿಸಿದ ಮಾಜಿ ಶಾಸಕ ನಿಂಗಪ್ಪ- ಕೈ ಹಿಡಿವ ಸಾಧ್ಯತೆ ನಿಚ್ಚಳ
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗಿದ್ದು, ತುಮಕೂರಿನ ಮಾಜಿ ಶಾಸಕ ಎಚ್. ನಿಂಗಪ್ಪ ಜೆಡಿಎಸ್‌ನ ತೆನೆಯ ಹೊರೆಯನ್ನು ಇಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈಮೂಲಕ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನವಾದಂತಾಗಿದೆ.
ತುಮಕೂರು (ನ.15): ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಆರು ತಿಂಗಳ ಮುಂಚಿತವಾಗಿಯೇ ರಾಜಕೀಯ ಮುಖಂಡರ ಪಕ್ಷಾಂತರ ಪರ್ವ ಆರಂಭವಾಗಿದೆ. ಈಗ ತುಮಕೂರಿನಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಎಚ್. ನಿಂಗಪ್ಪ ಪಕ್ಷ ಬಿಡುವ ನಿರ್ಧಾರ ಮಾಡಿದ್ದು, ಕಾಂಗ್ರೆಸ್ ಕೈ ಹಿಡಿಯುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಸಂಬಂಧಪಟ್ಟಂತೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರಿಗೆ ಸದಸ್ಯತ್ವಕ್ಕೆ ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಪಾಳಯದಲ್ಲಿ ಮತ್ತೊಂದು ವಿಕೆಟ್ ಪತನವಾದಂತಾಗಿದೆ.
ವಿಧಾನಸಭಾ ಚುನಾವಣೆಯ ಕಾವು ರಾಜ್ಯದಲ್ಲಿ ಬಿರುಸು ಪಡೆದುಕೊಳ್ಳುತ್ತಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು (National Parties) ಮತ್ತು ಪ್ರಾದೇಶಿಕ ಪಕ್ಷಗಳು ಪರಸ್ಪರ ಅಭಿವೃದ್ಧಿ ಕಾರ್ಯ ವಿಚಾರ ಹಾಗೂ -ಇತರೆ ಘಟನೆಗಳ ಬಗ್ಗೆಯೂ ವಾಗ್ದಾಳಿ ನಡೆಸುತ್ತಿವೆ. ಇನ್ನು ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರು (MLA), ಮತ್ತೊಂದೆಡೆ ಹೊಸದಾಗಿ ಟಿಕೆಟ್ ಪಡೆಯಬೇಕೆಂಬ ಆಕಾಂಕ್ಷಿಗಳು ಪಕ್ಷಾಂತರ (Defection) ಪರ್ವ ಆರಂಭಿಸಿದ್ದಾರೆ. ಈ ಹಿಂದೆ 2018ರಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದ ಮಾಜಿ ಶಾಸಕ ಎಚ್. ನಿಂಗಪ್ಪ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಎಂದು ನೇಮಿಸಲಾಗಿತ್ತು. ಆದರೆ, ಇತ್ತೀಚೆಗೆ ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರ ಇಟ್ಟಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ ನಿಂಗಪ್ಪ ಹಲವು ದಿನಗಳಿಂದ ಕಾಂಗ್ರೆಸ್ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಈಗ ಪೂರ್ಣ ಪ್ರಮಾಣದಲ್ಲಿ ಪಕ್ಷ ಬಿಡುವ ನಿರ್ಧಾರ ಮಾಡಿದ್ದು, ರಾಜಿನಾಮೆ (Resignation) ಪತ್ರ ಸಲ್ಲಿಕೆ ಮೂಲಕನ ಅಧಿಕೃತವಾಗಿ ಪಕ್ಷ ಬಿಡುವ ತೀರ್ಮಾನ ಮಾಡಿದ್ದಾರೆ.
ನಾನು ಜೆಡಿಎಸ್‌ಗೆ ವಾಪಸ್ ಹೋಗಲ್ಲ: ಗುಬ್ಬಿ ಶ್ರೀನಿವಾಸ್
ಅಧಿಕಾರ ಪತ್ರಕ್ಕ ಸೀಮಿತ: ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ ಎಚ್. ನಿಂಗಪ್ಪ ಶಾಸಕರಾಗಿದ್ದರು. ನಂತರ, 2008ರಲ್ಲಿ ತುಮಕೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡಿ ಸೋತಿದ್ದರು. ಆದರೆ, ಪುನಃ 2013 ರಲ್ಲಿ ಜೆಡಿಎಸ್ ನಿಂದ ಟಿಕೆಟ್ ಸಿಗದಿದ್ದಾಗ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ್ದ ಕರ್ನಾಟಕ ಜನತಾ ಪಕ್ಷದಿಂದ (KJP) ಸ್ಪರ್ಧಿಸಿದ್ದರು. ಕೆಜೆಪಿ ಅಸ್ತಿತ್ವ ಕಳೆದುಕೊಂಡ ಬಳಿಕ ನಿಂಗಪ್ಪ ಕಾಂಗ್ರೆಸ್‌ನ (Congress) ಕೈ ಹಿಡಿದಿದ್ದರು. ಇಲ್ಲಿಯೂ ಗೆಲುವು ಸಾಧ್ಯವಾಗದ ಹಿನ್ನೆಲೆಯಲ್ಲಿ 2018 ರಲ್ಲಿ ಜೆಡಿಎಸ್ ಗೆ ಮರಳಿದ್ದರು. ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ ಎಂದು ನೇಮಿಸಿ ಆದೇಶ ಪತ್ರ ನೀಡಿದ್ದರು. ಆದರೆ, ಇದು ಕೇವಲ ಪತ್ರವಾಗಿಯೇ ಉಳಿದುಕೊಂಡಿದೆ ಎಂದು ಪಕ್ಷ ಬಿಡುವ ಮುನ್ನ ಆರೋಪಿಸಿದ್ದಾರೆ.
ತುಮಕೂರು ಗ್ರಾಮಾಂತರದಿಂದ ಸ್ಪರ್ಧೆ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ತುಮಕೂರು ವಿಭಾಗದಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (H.D.Devegowda)ಅವರು ಸ್ಪರ್ಧಿಸಿದ್ದರು. ಈ ವೇಳೆ ಅವರ ಗೆಲುವು ಸಾಧ್ಗಯವಾಗದ ಕಾರಣ ಜೆಡಿಎಸ್‌ನಲ್ಲಿದ್ದ ಮುಖಂಡರನ್ನು ಕಡೆಗಣಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈಗ ಪಕ್ಷ ತೊರೆದಿರುವ ನಿಂಗಪ್ಪ ಅವರು ಈ ಆರೋಪವನ್ನು ಬಹಿರಂಗ ಮಾಡಿದ್ದಾರೆ. ಪಕ್ಷದ ಎಲ್ಲ ಚಟುವಟಿಕೆಯಿಂದ ದೂರ ಇಟ್ಟಿದ್ದು, ಟಿಕೆಟ್ (Ticket) ಸಿಗುವ ಸಾಧ್ಯತೆಯೂ ಕಡಿಮೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದ್ದು, ತುಮಕೂರು ಗ್ರಾಮಾಂತರ (Tumakur Rural) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟಿಕೆಟ್ ನೀಡುವ ಭರವಸೆ ನೀಡದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಕನಕಪುರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುವೆ : HD Kumaraswamy
ಕ್ಷೇತ್ರದ ಪ್ರಭಾವಿಗಳಿಗೆ ಗಾಳ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳು ರಾಜ್ಯದ ಎಲ್ಲ ವಿಧಾನಸಭಾ (Assembly) ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಸ್ಥಳೀಯವಾಗಿ ಪ್ರಭಲರಾಗಿರುವ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬಿಜೆಪಿಯಿಂದ ಜನಸಂಕಲ್ಪ (Janasankalpa) , ಕಾಂಗ್ರೆಸ್‌ನಿಂದ ಭಾರತ ಜೋಡೋ (Bharath Jodo) ಯಾತ್ರೆ ಹಾಗೂ ಜೆಡಿಎಸ್‌ನಿಂದ ಜನಸ್ಪಂದನ (Janaspandana) ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇತ್ತೀಚೆಗೆ, ಈಗಾಗಲೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸೇರ್ಪಡೆ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆಯೂ ಕೂಡ ಯಶಸ್ವಿಯಾಗಿದ್ದು ಪಕ್ಷಕ್ಕೆ ಸೇಫ್ಡೆ ಆಗುವವರ ಸಂಖ್ಯೆಯೂ ಅಧಿಕವಾಗಿದೆ.