ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನ ಮೃತಪಟ್ಟ ಘಟನೆಗೆ ಮಾಜಿ ಸಚಿವ ಸಾರಾ ಮಹೇಶ್ ಸಂತಾಪ ಸೂಚಿಸಿದ್ದಾರೆ. ಘಟನೆಯ ಹೊಣೆಯನ್ನು ಸರ್ಕಾರ ಹೊರಬೇಕೆಂದು ಒತ್ತಾಯಿಸಿದ ಅವರು, ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. 

ಮೈಸೂರು (ಜೂ.6): ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತರಾಗಿದ್ದಾರೆ. ಮೃತರಿಗೆ ಮಾಜಿ ಸಚಿವ ಸಾರಾ ಮಹೇಶ್ ಸಂತಾಪ ಸೂಚಿಸಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ಉದ್ದೇಶಪೂರ್ವಕವಲ್ಲ, ಆದರೆ ಬೇಜವಾಬ್ದಾರಿತನದಿಂದ ನಡೆದಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ರಾಜಕೀಯ ಕೆಸರೆರಚಾಟ ಸರಿಯಲ್ಲ ಆಡಳಿತದ ವೈಫಲ್ಯ, ಗುಪ್ತಚರ ಇಲಾಖೆಯ ನಿರ್ಲಕ್ಷ್ಯ, ಮತ್ತು ಗೃಹ ಇಲಾಖೆಯ ಕಾರ್ಯದರ್ಶಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

ಐವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಮನಸಾಕ್ಷಿ ಒಪ್ಪುತ್ತದೆಯೇ?

ನೆನ್ನೆ ಐದು ಪೊಲೀಸರನ್ನು ಸಸ್ಪೆಂಡ್ ಮಾಡಿದ್ದೀರಿ, ಇದಕ್ಕೆ ನಿಮ್ಮ ಮನಃಸಾಕ್ಷಿ ಒಪ್ಪುತ್ತದೆಯೇ? ಇಂಟೆಲಿಜೆನ್ಸ್ ಐಜಿ ಏನು ಮಾಡುತ್ತಿದ್ದರು? ಚೀಫ್ ಸೆಕ್ರೆಟರಿ ಏನು ಮಾಡುತ್ತಿದ್ದರು? ಲಾ ಅಂಡ್ ಆರ್ಡರ್ ಯಾರ ಕೈಯಲ್ಲಿದೆ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದರು. ಈ ಘಟನೆಗೆ ಸಿಎಂ, ಸಚಿವರು, ಶಾಸಕರು, ಮತ್ತು ಅಧಿಕಾರಿಗಳು ಜವಾಬ್ದಾರರೆಂದು ಆರೋಪಿಸಿದ ಅವರು, ರಾಜ್ಯ ಸರ್ಕಾರದ ತನಿಖೆಗೆ ವಿರೋಧ ವ್ಯಕ್ತಪಡಿಸಿ, ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು.

ಇದನ್ನೂ ಓದಿ: Bengaluru Stampede: ಹೈಕೋರ್ಟ್ ಮಧ್ಯಪ್ರವೇಶ, ಸುಮೊಟೋ ಕೇಸ್‌, ಸರ್ಕಾರಕ್ಕೆ 9 ಪ್ರಶ್ನೆಗಳೇನು?

ಪೊಲೀಸ್ ಅಧಿಕಾರಿಗಳು ಮಾಡಿದ ತಪ್ಪೇನು?

ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ ಸಾ. ರಾ. ಮಹೇಶ್, ದಯಾನಂದ್, ಶೇಖರ್ ಏನು ತಪ್ಪು ಮಾಡಿದ್ದಾರೆ? ಇಂಟೆಲಿಜೆನ್ಸ್ ಐಜಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದರು. ಘಟನೆಗೆ ವೇದಿಕೆಯಲ್ಲಿದ್ದವರೆಲ್ಲರೂ ಕಾರಣ ಎಂದು ಆರೋಪಿಸಿ, ನಿಷ್ಠಾವಂತ ಅಧಿಕಾರಿಗಳಿಗೆ ಬೆಂಬಲ ನೀಡುವಂತೆ ಕೇಳಿಕೊಂಡರು.

ಐಪಿಎಲ್‌ನಿಂದ ಮನೆ-ಮಠ ಹಾಳಾಗುತ್ತಿವೆ, ಯುವಕರು ಊರು ಬಿಡುತ್ತಿದ್ದಾರೆ. ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಇದು ಉದಾಹರಣೆ. ಕೋಟಿಗಟ್ಟಲೆ ಪರಿಹಾರ ಕೊಟ್ಟರೂ ಜೀವಗಳ ನಷ್ಟ ಸರಿದೂಗದು ಎಂದು ಹೇಳಿದ ಅವರು, ಮೃತರ ಕುಟುಂಬಗಳನ್ನು ಭೇಟಿಯಾಗಿ, ಉದ್ಯೋಗ ಭದ್ರತೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ, ವಕೀಲರ ಸಂಪರ್ಕದಲ್ಲಿದ್ದೇವೆ. ಪಾರದರ್ಶಕ ತನಿಖೆಗೆ ಸಿಬಿಐ ಅಥವಾ ಇತರ ಸಂಸ್ಥೆಯನ್ನು ನೇಮಿಸಿ ಎಂದು ಒತ್ತಾಯಿಸಿದರು.

ರಾಜ್ಯದಿಂದ ಯಾವುದೇ ತನಿಖೆ ಬೇಡ. ಎಲ್ಲ ತನಿಖಾ ಸಂಸ್ಥೆಗಳಿಗೆ ಸಿಎಂ ಹೆಡ್ ಆಗಿದ್ದಾರೆ. ಹೀಗಾಗಿ ಪಾರದರ್ಶವಾಗಿ ನಡೆಯಲು ಸಾಧ್ಯವಿಲ್ಲ. ಕೇಂದ್ರದ ಸಿಬಿಐ ನ್ಯಾಯಾಂಗ ತನಿಖೆ ಯಾವುದಾದರೂ ಮಾಡಿ ಎಂದರು.

ಹೆಚ್‌ಡಿಕೆ ಹಾಕಿದರೆ ಮೊಸಳೆ ಕಣ್ಣೀರು, ಡಿಕೆಶಿ ಹಾಕಿದರೆ?

ಸುದ್ದಿಗೋಷ್ಟಿ ವೇಳೆ ಡಿಕೆ ಶಿವಕುಮಾರ ಕಣ್ಣೀರು ಹಾಕಿದ ವಿಚಾರ ಪ್ರಸ್ತಾಪಿಸಿದ ಸಾರಾ ಮಹೇಶ್, ಎಚ್‌ಡಿಕೆ, ಎಚ್‌ಡಿಡಿ ಕಣ್ಣೀರು ಹಾಕಿದ್ರೆ ಮೊಸಳೆ ಕಣ್ಣೀರು, ಅವರಿಗೆ ಯಾವುದೇ ಹೆಂಗರಳು ಎನ್ನುತ್ತಾರೆ. ಹಾಗಾದರೆ ಡಿಸಿಎಂ ಕಣ್ಣೀರು ಹಾಕಿದರೆ ಏನೆನ್ನಬೇಕು? ಈ ದುರ್ಘಟನೆಗೆ ಕಾರಣವೇ ಅವರು. ಸರ್ಕಾರದ ಲೋಪದಿಂದಲೇ ದುರ್‌ಘಟನೆ ಸಂಭವಿಸಿ 11 ಜನ ಬಲಿಯಾಗಿದ್ದಾರೆ. ಈಗ ಅವರ ಮುಂದೆ ಡಿಸಿಎಂ ಕಣ್ಣೀರು ಹಾಕುವುದು ಮೊಸಳೆ ಕಣ್ಣೀರಲ್ಲವೇ? ಎಂದು ಪ್ರಶ್ನಿಸಿದರು.