ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಚಿಕೂನ್ ಗುನ್ಯಾ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು: ಮಾಜಿ ಸಚಿವ ಹಾಗೂ ರಾಜಾಜಿನಗರ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರೇಶ್ ಕುಮಾರ್ ಅವರು ಚಿಕೂನ್ ಗುನ್ಯಾ ಮತ್ತು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ಪಾದಯಾತ್ರೆಯಲ್ಲಿ ಸುರೇಶ್ ಕುಮಾರ್ ಭಾಗಿಯಾಗಿದ್ದರು. ನಂತರ ತಿರುಪತಿಗೂ ಸಹ ತೆರಳಿದ್ದರು. ಇದಾದ ಬಳಿಕ ಸುರೇಶ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಸುರೇಶ್ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಸದ್ಯ ಐಸಿಯುನಲ್ಲಿ ದಾಖಲಾಗಿರುವ ಸುರೇಶ್ ಕುಮಾರ್ ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಅಪರೂಪದ ಮ್ಯೂಟೆಂಟ್ ಚಿಕನ್ ಗುನ್ಯಾದಿಂದ ಬಳಲುತ್ತಿರುವ ಸುರೇಶ್ ಕುಮಾರ್ ಅವರಿಗೆ ನಾಲ್ಕುವರೆ ಲಕ್ಷ ರೂಪಾಯಿಯ ನಾಲ್ಕು ಇಂಜೆಕ್ಷನ್ ನೀಡಲಾಗಿದೆ. ಮುಂದಿನ ಏಳು ದಿನಗಳ ಕಾಲ ಸುರೇಶ್ ಕುಮಾರ್ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರತಿ ವೀಕೆಂಡ್‌ಗೆ ಸೈಕಲ್ ಸವಾರಿ ಮಾಡುತ್ತಿದ್ದರು. ತಮ್ಮದೇ ತಂಡದೊಂದಿಗೆ ಬೆಂಗಳೂರು ಹೊರವಲಯದಲ್ಲಿ ಸ್ಕೈಕ್ಲಿಂಗ್ ಮಾಡುತ್ತಿದ್ದರು. ನಿರಂತರ ಪ್ರವಾಸ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ರಿಂದ ಸುರೇಶ್ ಕುಮಾರ್ ಬಳಲಿದ್ರು ಎಂದು ತಿಳಿದು ಬಂದಿದೆ.