ಕಡ್ಲೆಕಾಯಿ ಬಗ್ಗೆ ಗೊತ್ತಿಲ್ಲದವರು ಬಿಜೆಪಿ ಬರ ತಂಡದ ನಾಯಕರು: ರೇಣು ಟೀಕಾಪ್ರಹಾರ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬರ ಅಧ್ಯಯನಕ್ಕಾಗಿ ಕೇವಲ ಎರಡು ಜಿಲ್ಲೆಗೆ ಸೀಮಿತ ಮಾಡಲಾಗಿದೆ. ಪಕ್ಷದಲ್ಲಿ ಕೆಲವರು ಸರ್ವಾಧಿಕಾರಿ ಧೋರಣೆಯನ್ನು ಕೈಬಿಡಬೇಕು ಎಂದು ಟೀಕಾಪ್ರಹಾರ ನಡೆಸಿದ ಮಾಜಿ ಸಚಿವ ರೇಣುಕಾಚಾರ್ಯ

ಬೆಂಗಳೂರು(ನ.11): ಕಡ್ಲೆಕಾಯಿ ಗಿಡದಲ್ಲಿ ಬಿಡುತ್ತದೋ, ಮರದಲ್ಲಿ ಬಿಡುತ್ತದೋ ಎನ್ನುವುದೂ ಗೊತ್ತಿಲ್ಲದವರನ್ನು ಪಕ್ಷದ ಬರ ಅಧ್ಯಯನ ತಂಡದ ನಾಯಕನನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾಯರ್ಯ ಲೇವಡಿ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬರ ಅಧ್ಯಯನಕ್ಕಾಗಿ ಕೇವಲ ಎರಡು ಜಿಲ್ಲೆಗೆ ಸೀಮಿತ ಮಾಡಲಾಗಿದೆ. ಪಕ್ಷದಲ್ಲಿ ಕೆಲವರು ಸರ್ವಾಧಿಕಾರಿ ಧೋರಣೆಯನ್ನು ಕೈಬಿಡಬೇಕು ಎಂದು ಮಾಜಿ ಸಚಿವ ರೇಣುಕಾಚಾರ್ಯ ಟೀಕಾಪ್ರಹಾರ ನಡೆಸಿದ್ದಾರೆ.
ಇನ್ಮುಂದೆ ಕಾಂಗ್ರೆಸ್‌ಗೆ ಎದುರಾಗಲಿದೆ ನೇರಾನೇರ ಪೈಪೋಟಿ! ವಿಜಯೇಂದ್ರರ ಬಗ್ಗೆ ಎಂಪಿ ರೇಣುಕಾಚಾರ್ಯ ಹೇಳಿದ್ದೇನು?
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ರೈತ ನಾಯಕರು. ಪ್ರತಿಪಕ್ಷ ನಾಯಕರಾಗಿದ್ದ ವೇಳೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಅಂತಹ ಮುಖಂಡರನ್ನು ಎರಡು ಜಿಲ್ಲೆಗೆ ಸಿಮೀತಗೊಳಿಸಿ ಯಾವ ಸಂದೇಶ ನೀಡಿದಂತಾಯಿತು ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಯಡಿಯೂರಪ್ಪ ಅವರು ಇಡೀ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಮುಂದಾಗಿದ್ದರು. ಇದಕ್ಕಾಗಿ ಕೋಲಾರ ಜಿಲ್ಲೆ ಕುಡುಮಲೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಆದರೆ, ಪ್ರವಾಸ ಮಾಡಲು ಬಿಡಲಿಲ್ಲ ಎಂದು ಕಿಡಿಕಾರಿದರು.
ಯುವಕರಿಗೆ ಆದ್ಯತೆ ನೀಡಬೇಕು ಮತ್ತು ಹೊಸ ಪ್ರತಿಭೆಗಳು ಹೊರಬರಬೇಕು ಎಂಬುದು ನಿಜ. ಆದರೆ, ಹಿರಿಯರ ಅನುಭವ ಬೇಕಲ್ಲವೇ? ಕಾಣದ ಕೈಗಳು ಕೆಲಸ ಮಾಡುತ್ತಿವೆ. ನನ್ನನ್ನು ಸೋಲಿನ ಹತಾಶೆ ಮನೋಭಾವನೆಯಿಂದ ಮಾತನಾಡುತ್ತಾರೆ ಎಂದರು. ನಾನು ಮೂರು ಬಾರಿ ಶಾಸಕ ಮತ್ತು ಪಕ್ಷದ ಕಾರ್ಯಕರ್ತ. ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇನೆ. ಯಡಿಯೂರಪ್ಪ ಅವರನ್ನು ಪಕ್ಷದ ಮುಖಂಡರು ಅವರ ಸ್ವಾರ್ಥಕ್ಕಾಗಿ ಬಳಸಿಕೊಂಡರು ಎಂದು ಹೇಳಿದರು.