ಬೆಂಗಳೂರು(ಜೂ.05): ಮಾಜಿ ಅಂಡರ್‌ವರ್ಡ್ ಡಾನ್, ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥರಾಗಿದ್ದ ಮುತ್ತಪ್ಪ ರೈ ಇಹಲೋಕ ತ್ಯಜಿಸುವ ಮುನ್ನವೇ ಎಲ್ಲರ ಲೈಫ್ ಸೆಟಲ್ ಮಾಡಿದ್ದಾರೆ.

ಮುತ್ತಪ್ಪ ರೈ ಬರೆದಿರುವ 41 ಪುಟಗಳ ವಿಲ್‌ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳನ್ನು ಯಾರು ಇಟ್ಟುಕೊಳ್ಳಬೇಕು. ಜಯಕರ್ನಾಟಕ ಸಂಘಟನೆ ಜವಾಬ್ದಾರಿ ಯಾರಿಗೆ ಎನ್ನುವುದನ್ನು ವಿಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿಲ್ ಪ್ರಕಾರ ರೈ ಆಸ್ತಿ ಸುಮಾರು 2 ಸಾವಿರ ಕೋಟಿ ರುಪಾಯಿಗಳಷ್ಟಿದೆ. 

"

ತಮ್ಮ ಬಳಿ ನಂಬಿಕೆಯಿಂದ 15 ವರ್ಷಗಳಿಂದ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದಾರೆ. ಅದರಂತೆ ರಿಕ್ಕಿ ಈಗಾಗಲೇ ತಲಾ ಒಬ್ಬೊಬ್ಬರಿಗೆ 3 ಲಕ್ಷ ರುಪಾಯಿಗಳನ್ನು ನೀಡಿದ್ದಾರೆ. ಮತ್ತಪ್ಪ ರೈ ಹೆಸರಿನಲ್ಲಿ ಸುಮಾರು 600ಕ್ಕೂ ಅಧಿಕ ಎಕರೆ ಜಮೀನಿದ್ದು, ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ.   

ಮುತ್ತಪ್ಪ ರೈ ಆಸ್ತಿ ಎಲ್ಲೆಲ್ಲಿದೆ?: ಸಕಲೇಶಪುರದಲ್ಲಿ 150-200 ಎಕರೆ ಜಮೀನು. ಇನ್ನು ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಇವುಗಳ ಪೈಕಿ ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿರೈ ಗೆ ನೀಡಿದ್ದರೆ, ಮೈಸೂರು, ಬಂಟ್ವಾಳ, ಮಂಗಳೂರು ಹಾಗೂ ಪುತ್ತೂರಿನ ಜಾಗ ರಾಖಿ ರೈಗೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ಆಪ್ತರು, ಸಂಬಂದಿಕರಿಗೆ ಶೇ 20% ರಷ್ಟು ಆಸ್ತಿ ನೀಡಲು ವಿಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾಂಕ್‌ ನೌಕರ, ಡಾನ್‌, ಕನ್ನಡದ ಕಟ್ಟಾಳು: 3 ಹಂತದಲ್ಲಿ ಮುತ್ತಪ್ಪ ರೈ ಜೀವನ ರೋಚಕ!

ಇನ್ನು ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳು ಚಿಕ್ಕ ಮಗ ರಿಕ್ಕಿ ರೈ ನೋಡಿಕೊಳ್ಳುವಂತೆ ತಿಳಿಸಿದ್ದು, ಟ್ರೇಡಿಂಗ್ ಬಿಸಿನೆಸ್ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ. ಅಂದಾಜು ಇಬ್ಬರು ಮಕ್ಕಳಿಗೂ ಬಹುತೇಕ ಒಂದು‌ ಸಾವಿರ ಕೋಟಿಯಷ್ಟು ಆಸ್ತಿ ಬರಲಿದೆ ಎನ್ನಲಾಗಿದೆ.

ಎರಡನೇ ಹೆಂಡತಿ ಅನುರಾಧ ಲೈಫ್ ಸೆಟಲ್: ಮುತ್ತಪ್ಪ ರೈ ಎರಡನೇ ಹೆಂಡತಿ ಅನುರಾದ ಲೈಫ್ ಸೆಟಲ್ ಮಾಡಿರೋಗಾಗಿ ವಿಲ್ ನಲ್ಲಿ ಹೇಳಿದ್ದಾರೆ. ಹೆಚ್ ಡಿ ಕೋಟೆಯಲ್ಲಿ ಪ್ರಾಪರ್ಟಿ, ಚಿನ್ನಾಭರಣ, ಐಷಾರಾಮಿ ಕಾರು, ಕೊಟ್ಯಾಂತರ ರೂಪಾಯಿ ಹಣ ಈಗಾಗಲೆ ನೀಡಿರೋದಾಗಿ ರೈ ವಿಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡ ಕಟ್ಟಿಸಿಕೊಟ್ಟಿರೋ ಮುತ್ತಪ್ಪ ರೈ, ಅನುರಾದ ಜೊತೆಗಿದ್ದ ಟೈಂನಲ್ಲಿಯೇ ಅವರಿಗೆ ಸೇರಬೇಕಾದದ್ದು ನೀಡಿರೋದಾಗಿ ವಿಲ್ ನಲ್ಲಿ ಉಲ್ಲೇಖಿಸಿದ್ದಾರೆ

ಜಯ ಕರ್ನಾಟಕ ಸಂಘಟನೆಯ ಜವಾಬ್ದಾರಿ ಚಿಕ್ಕ ಮಗ ರಿಕ್ಕಿಗೆ ಹೇಳಿರೋ ರೈ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂಘಟನೆಯ ಅಧ್ಯಕ್ಷತೆ ಜಗದೀಶ್ ನೋಡಿಕೊಳ್ಳುವಂತೆ ವಿಲ್ ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಿಗೆ ವಿಲ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ